Advertisement

ಚಿತ್ತಾಪುರ: 25 ಗ್ರಾಮಗಳಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ

06:21 AM Feb 18, 2019 | Team Udayavani |

ಚಿತ್ತಾಪುರ: ಮಳೆ ಕೊರತೆ, ಬರ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ಕೊಡ ನೀರಿಗಾಗಿ ಕೆಲಸ ಬಿಟ್ಟು ನೀರು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ತಾಲೂಕು ಆಡಳಿತ ಮೌನವಹಿಸಿದೆ.

Advertisement

ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಅಳವಡಿಸಿದ ಕುಡಿಯುವ ನೀರಿನ ಟ್ಯಾಂಕರ್‌ ನಿರುಪಯುಕ್ತವಾಗಿದ್ದು, ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ಕುಸಿದಿದೆ. ಬರ ಪೀಡಿತ ಪ್ರದೇಶದಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ. ಜನರು ಕೈಯಲ್ಲಿ ಖಾಲಿ ಕೊಡ ಹಿಡಿದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ಕೆಲವೆಡೆ ಕುಡಿಯುವ ನೀರಿಗೆ ತಾಸುಗಟ್ಟಲೇ ಕಾಯುವಂತಹ ಅನಿವಾರ್ಯತೆ ಎದುರಾಗಿದೆ. 

ತಾಲೂಕಿನ ಕಟ್ಟ ಕಡೆಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಯಿಂದಲೂ ನೀರು ಸಿಗುತ್ತಿಲ್ಲ. ಕೊಡ ನೀರು ತರಲು ಹರಸಾಹಸ ಪಡುತ್ತಿದ್ದಾರೆ. ಈ ಬಾರಿ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ಚಳಿಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿತ್ತು. ಇದೀಗ ಆರಂಭದ ಬೇಸಿಗೆಯ ಸುಡುವ ಬಿಸಿಲು ಮತ್ತಷ್ಟು ಪರದಾಡುವಂತೆ ಮಾಡಿದೆ.

ತಾಲೂಕಿನ ಡೋಣಗಾಂವ, ದಿಗ್ಗಾಂವ, ರಾಜೋಳ್ಳಾ, ರಾಮತೀರ್ಥ, ಭಂಕಲಗಾ, ತೆಂಗಳಿ, ಭೀಮನಳ್ಳಿ, ಹೊಸ್ಸುರ್‌, ಅಳ್ಳೋಳ್ಳಿ, ಅಲ್ಲೂರ್‌ (ಕೆ), ಅಲ್ಲೂರ್‌ (ಬಿ), ಪೇಠಶಿರೂರ ಸೇರಿದಂತೆ ಅಂದಾಜು 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. 

ಇನ್ನು ಕೆಲವು ಗ್ರಾಮಗಳಲ್ಲಿ ಮಳೆ ನೀರು ನಿಂತ ತಗ್ಗು, ಕೆರೆಗಳಿಗೆ ಹೋಗಿ ಹಸಿರು ನೀರು ತರುತ್ತಿದ್ದಾರೆ. ಕೆರೆಯಲ್ಲಿ ನಿಂತ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದರೂ ಅದೇ ನೀರು ಅಮೃತ ಎಂದು ತಿಳಿದು ಉಪಯೋಗಿಸುತ್ತಿರುವುದು ದೊಡ್ಡ ದುರಂತವಾಗಿದೆ. ಬಟ್ಟೆ ಒಗೆಯಲು, ವಾಹನಗಳನ್ನು ತೊಳೆಯಲು, ಜನ ಜಾನುವಾರುಗಳಿಗೆ ಕುಡಿಯಲು ಅದನ್ನೇ ಬಳಸುತ್ತಿರುವುದರಿಂದ ಗ್ರಾಮಸ್ಥರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ.

Advertisement

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಮುತುವರ್ಜಿ ವಹಿಸಿ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಪರಿಹಾರ ನಿಧಿ ಮೂಲಕ ತಾಲೂಕಿಗೆ ಲಕ್ಷಾಂತರ ರೂ. ಬಿಡುಗಡೆಗೊಳಿಸಿದ್ದಾರೆ. ಕುಡಿಯುವ ನೀರಿನ ತೊಂದರೆ ಎದುರಿಸುವ ಗ್ರಾಮಗಳಿಗೆ ಸಕಾಲಕ್ಕೆ
ನೀರು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ.

ದಿಗ್ಗಾಂವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಈಗಾಗಲೇ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ನೀರಿನ ಸಮಸ್ಯೆ ಆಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಹೊಸದಾಗಿ ಬೋರ್‌ವೆಲ್‌ ಹಾಕಲು ಕಾರ್ಯಪಡೆ ಸಮಿತಿಯಲ್ಲಿ ಮಂಜೂರು ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಮಿತಿಗೆ 50 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
 ಉಮಾಕಾಂತ ಹಳ್ಳೆ, ತಹಶೀಲ್ದಾರ್‌

ಕೆಲಸಕ್ಕೆ ಹೋಗಬೇಕು, ಇಲ್ಲಾಂದ್ರೆ ದೂರದ ಬಾವಿ, ಹಳ್ಳ, ಕೊಳ್ಳಗಳಿಗೆ ಹೋಗಿ ನೀರು ತಂದು ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಶಾಲೆ ಕಲ್ತಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳ್ಳೋಣ ಎನ್ನುವುದು ಗೊತ್ತಾಗುತ್ತಿಲ್ಲ. ಇದು ಅಧಿಕಾರಿಗಳಿಗೆ ಗೊತ್ತಾಗಲ್ವಾ? 
 ಶರಣಮ್ಮ ರಾಜೋಳ್ಳಾ  ಗ್ರಾಮದ ನಿವಾಸಿ

ಮಳೆ ನೀರು ನಿಂತ ಕೆರೆಯಲ್ಲಿನ ಹಸಿರು ನೀರೇ ಗ್ರಾಮದ ಜನರಿಗೆ ಅಮೃತವಾಗಿದೆ. ಅದನ್ನೇ ನಾವು ಬಟ್ಟೆ ಒಗೆಯಲು, ಕುಡಿಯಲು, ದನಕರು ತೊಳೆಯಲು ಬಳಸುತ್ತಿದ್ದೇವೆ. ಅದರಲ್ಲಿ ಏನೇನಿದೆ ಗೊತ್ತಿಲ್ಲ. ಆ ನೀರು ಕುಡಿದು ಆಸ್ಪತ್ರೆಗೆ ಹಣ ಹಾಕಿದ್ದಿವಿ. ನಾವು ಸತ್ತರೂ ಯಾರಿಗೂ ನೋವಾಗಲ್ಲ ಬಿಡ್ರಿ. 
 ಮಲ್ಲಮ್ಮ ಡೋಣಗಾಂವ ಗ್ರಾಮದ ನಿವಾಸಿ

ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next