ವಾಡಿ (ಚಿತ್ತಾಪೂರ): ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಿ ಸಮಾಜದ ಶಾಂತಿ ಕದಡುವವರು ನಿಜವಾದ ದೇಶದ್ರೋಹಿಗಳು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅಂತಹ ಸಮಾಜಘಾತುಕ ಕೃತ್ಯದಲ್ಲಿ ರಾಜ್ಯ ಬಿಜೆಪಿಗರು ತೊಡಗಿದ್ದಾರೆ ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ತಾಪೂರ ಮೀಸಲು ಮತಕ್ಷೇತ್ರದ ಹೊನಗುಂಟಾ ಗ್ರಾಮದಲ್ಲಿ ರೂ. 63.75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರಕಾರಿ ಶಾಲೆಯ ನಾಲ್ಕು ಕೋಣೆ, ಶೌಚಾಲಯ ಉದ್ಘಾಟನೆ ಹಾಗೂ ಶಹಾಬಾದದಿಂದ ವಡ್ಡರವಾಡದ ವರೆಗೆ ರೂ. 200 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು, ವಡ್ಡರವಾಡದಿಂದ ಹೊನಗುಂಟಾ ವರೆಗೆ ರೂ. 100 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ಅಡಿಗಲ್ಲು ಹಾಗೂ ಹೊನಗುಂಟಾ ಗ್ರಾಮದಲ್ಲಿ ರೂ. 24 ವೆಚ್ಚದಲ್ಲಿ ನಿರ್ಮಾಣವಾಗಿರುವ ಉರ್ದು ಶಾಲೆಯ 2 ಕೋಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಸ್ತುತ ವಾತಾವರಣ ಸರಿಯಿಲ್ಲ. ಕೆಲವರು ಸಂವಿಧಾನ ವಿರೋಧಿಗಳಾಗಿದ್ದು, ಸಂವಿಧಾನ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ. ಹನುಮಾನ್ ಚಾಲೀಸ್ ಹೇಳಲು ಬರದ ಬಿಜೆಪಿಗರು, ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಹಾಗೂ ದೇವರನ್ನು ಮುಂದಿಟ್ಟುಕೊಂಡು ಸೌಹಾರ್ದತೆಯಿಂದಿರುವ ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ : ಸೋಲಿಲ್ಲದ ಸರದಾರರು ಸಾಕು, ಯುವಕರು ರಾಜಕೀಯಕ್ಕೆ ಬರಬೇಕು : ಭಾಸ್ಕರ್ ರಾವ್
ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಜನರ ನೈಜ ಬೇಡಿಕೆಗಳನ್ನು ಮರೆಮಾಚುತ್ತಲೆ ರಾಜ್ಯ ಸರ್ಕಾರ ಜಟ್ಕಾ ಕಟ್, ಹಲಾಲ್ ಕಟ್, ಬಗ್ಗೆ ಬಿಜೆಪಿ ಅನಗತ್ಯ ವಿವಾದ ಎಬ್ಬಿಸುತ್ತಿದೆ. ಕೋಳಿ ಯಾವುದಾದರೇ ಏನು ಮಸಾಲೆ ಹಾಕಿದ ಮೇಲೆ ಎಲ್ಲಾ ಒಂದೇ ತಾನೆ? ಎಂದು ವ್ಯಂಗ್ಯವಾಡಿದರು.
ಜಿಪಂ ಮಾಜಿ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿದರು., ಹೊನಗುಂಟಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮಬಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಭೀಮನಗೌಡ ಖೇಣಿ, ರಮೇಶ ಮರಗೋಳ, ಸಿದ್ದು ಪಾಟೀಲ, ಶಿವು ಹೊನಗುಂಟಾ ಮತ್ತಿತರಿದ್ದರು.