Advertisement

ಪ್ರಿಯಾಂಕ್‌ ಖರ್ಗೆ ಹಣಿಯಲು ಕಮಲ ಅಭ್ಯರ್ಥಿ ಹುಡುಕಾಟ

10:40 PM Feb 26, 2023 | Team Udayavani |

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಒಮ್ಮೆ ಪ್ರತಿನಿಧಿಸಿದ್ದ ಈಗ ಅವರ ಮಗ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುತ್ತಿರುವ ಚಿತ್ತಾಪುರ ಮೀಸಲು ಕ್ಷೇತ್ರದ ಮೇಲೆ ಬಿಜೆಪಿ ಹದ್ದಿನ ಕಣ್ಣಿಟ್ಟಿದೆ.

Advertisement

2009ರಲ್ಲಿ ಗೆಲುವು ಸಾಧಿಸಿರುವಂತೆ 2023ರ ಚುನಾವಣೆಯಲ್ಲೂ ಪಕ್ಷ ಗೆಲ್ಲಲೇಬೇಕೆಂದು ತಂತ್ರಗಾರಿಕೆ ರೂಪಿಸುತ್ತಿರುವ ಬಿಜೆಪಿ ನಾಯ ಕರು, ತಂದೆಯಂತೆ ಮಗ ಪ್ರಿಯಾಂಕ್‌ ಖರ್ಗೆ ಅವ ರನ್ನೂ ಸೋಲಿಸಿ ಅವರ ಬಾಯಿ ಬಂದ್‌ ಮಾಡಬೇಕು ಎಂದು ಹೇಳಿರುವು ದನ್ನು ನೋಡಿದರೆ ಪಕ್ಷ ಯಾವ ಮಟ್ಟಿಗೆ ಕ್ಷೇತ್ರವನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಶಾಸಕ ಪ್ರಿಯಾಂಕ್‌ ಖರ್ಗೆ ಎದುರು ಬಿಜೆಪಿ ಅಭ್ಯರ್ಥಿ ಯಾರೆಂಬುದು ಸಾರ್ವಜನಿಕ ವಲಯ ಸಹಿತ ಪಕ್ಷದಲ್ಲೂ ತೀವ್ರ ಕುತೂಹಲ ಮೂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾ ರ್ಜುನ ಖರ್ಗೆ ಅವರನ್ನು ಸೋಲಿಸಿದ್ದ ಸಂಸದ ಡಾ| ಉಮೇಶ ಜಾಧವ ಅವರನ್ನೇ ಮಗನ ಎದುರು ಕಣಕ್ಕಿಳಿಸಲಾಗುತ್ತಿದೆ ಎನ್ನಲಾಗುತ್ತಿದ್ದರೂ ಬೇರೆ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚು ಎನ್ನಲಾಗುತ್ತಿದೆ.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಅರವಿಂದ ಚವ್ಹಾಣ, ಕಠೊರ ಟೀಕೆ- ಆರೋಪಗಳಿಂದ ಹೆಸರು ಮಾಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೊಡ ಹಾಗೂ ಮಾಜಿ ಶಾಸಕ ವಾಲ್ಮೀಕಿ ನಾಯಕ ಪುತ್ರ ವಿಠಲ ನಾಯಕ ಸಹಿತ ಇತರರ ಹೆಸರು ಪ್ರಸ್ತಾವವಾಗುತ್ತಿದೆಯಾದರೂ ಕೊನೆಗಳಿಗೆ ವರೆಗೂ ಏನು ಹೇಳಲಿಕ್ಕಾಗದು ಎಂದು ಪಕ್ಷದ ವರಿಷ್ಠರೇ ಹೇಳುತ್ತಿದ್ದಾರೆ.

ಹೊಸದಾಗಿ ಬೇರೆ ಕಡೆಯಿಂದ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚು. ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಪಿ. ರಾಜೀವ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಕಳೆದ ತಿಂಗಳು ಪ್ರಧಾನಿ ಮೋದಿ ಅವರನ್ನು ಕರೆಯಿಸಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಾರೆ ಬಿಜೆಪಿ ಅಭ್ಯರ್ಥಿ ಆಯ್ಕೆ ಅಚ್ಚರಿ ಮೂಡಿಸಿರುವುದಂತೂ ನಿಜ.

Advertisement

ನಿವೃತ್ತ ನ್ಯಾಯಾಧೀಶರೊಬ್ಬರಿಂದ ಸ್ಪರ್ಧೆ ಇನ್ನು ಇಪ್ಪತ್ತು ವರ್ಷಗಳ ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿರುವ ನಿವೃತ್ತ ಜಡ್ಜ್ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದವ ರಾದ ಸುಭಾಶ್ಚಂದ್ರ ರಾಠೊಡ ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ತಾಪುರದಲ್ಲೇ ನ್ಯಾಯಾಧೀಶರಾಗಿದ್ದ ಅವರ ಸ್ಪರ್ಧೆ ಹಿಂದೆ ಬಂಜಾರಾ ಮತ ವಿಭಜನೆಯ ಕಾಂಗ್ರೆಸ್‌ ಕೈಚಳಕ ಇರಬಹುದೇ? ಎಂಬುದು ಬಿಜೆಪಿ ಅನುಮಾನ. ನ್ಯಾಯಾಧೀಶರಾಗುವ ಮುನ್ನ ರಾಠೊಡ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಂಘಟನೆ ಕಟ್ಟಿ ಜಾಗೃತಿ ಅಭಿಯಾನ ಕೈಗೊಂಡಿದ್ದರು. ಒಟ್ಟಾರೆ ಕಾಂಗ್ರೆಸ್‌ನಿಂದ ಪ್ರಿಯಾಂಕ್‌ ಖರ್ಗೆ ಅಭ್ಯರ್ಥಿಯಾದರೆ ಬಿಜೆಪಿಯಿಂದ ನಾಲ್ಕೈದು ಮಂದಿ ಹೆಸರು ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವಂತೆ ಈ ಸಲ ಹೇಗಾದರೂ ಮಾಡಿ ಗೆಲುವು ಸಾಧಿಸಬಹುದೆಂಬ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸುತ್ತಿದೆ. ಹಲವಾರು ಸಮೀಕ್ಷೆ ನಡೆಸಿ ವರದಿ ರೂಪಿಸಲಾಗುತ್ತಿದೆ. ಕೊನೆಗಳಿಗೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವವರು ಇದ್ದಾರೆ ಎನ್ನಲಾಗುತ್ತಿದೆ.

ಹೈವೋಲ್ಟೇಜ್ ಕ್ಷೇತ್ರ
ರಾಜ್ಯ ಸರಕಾರದ ವಿರುದ್ಧ ಸೂಕ್ತ ದಾಖಲಾತಿ ಹಾಗೂ ನೇರ ಮಾತುಗಳಿಂದ ಗಮನ ಸೆಳೆಯುತ್ತಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸುವ ಮುಖಾಂತರ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ರೀತಿಯಲ್ಲಿ ಮಗನನ್ನು ಸೋಲಿಸಿ ರಾಷ್ಟ್ರ ಮಟ್ಟದಲ್ಲಿ ತಂದೆಯನ್ನೂ ಮಣಿಸುವ ತಂತ್ರಗಾರಿಕೆ ಬಿಜೆಪಿ ಹೊಂದಿದೆ. ಇದೇ ಕಾರಣಕ್ಕೆ ಚಿತ್ತಾಪುರ ಹೈವೋಲ್ಟೇಜ್ ಕ್ಷೇತ್ರವಾಗಿ ಹೊರ ಹೊಮ್ಮಿದೆ.

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next