Advertisement

ಯಕ್ಷಲೋಕದ ಕಣ್ಮಣಿ ಚಿಟ್ಟಾಣಿ ರಾಮಚಂದ್ರ ಹೆಗಡೆ

08:37 AM Oct 04, 2017 | |

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿಯ ಸುಬ್ರಾಯ ಹೆಗಡೆ ಮತ್ತು ಗಣಪಿ ಅವರ ಮಾಣಿ ರಾಮಚಂದ್ರ ತನ್ನ ಏಳನೇ ವಯಸ್ಸಿನಲ್ಲಿ ಗೇರುಹಕ್ಕಲಿನಲ್ಲಿ ಆಟ ಕುಣಿಯಲು ಆರಂಭಿಸಿದವರು. ಯಕ್ಷಗಾನ ಕ್ಷೇತ್ರದಲ್ಲಿ ಬೆಳಗುತ್ತಾ ಬೆಳೆದು ಪದ್ಮಶ್ರೀ ಪುರಸ್ಕಾರವನ್ನು ಯಕ್ಷಗಾನಕ್ಕೆ ತಂದುಕೊಟ್ಟು ಯಕ್ಷಗಾನಪ್ರಿಯರ ಮನೆ ಮಾತಾದರು. 

Advertisement

14ನೇ ವಯಸ್ಸಿನಲ್ಲಿ ಶ್ರೀಕೃಷ್ಣ ಪಾರಿಜಾತದ ಅಗ್ನಿ ಪಾತ್ರದಲ್ಲಿ ರಂಗವೇರಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತೆ ತಿರುಗಿ ನೋಡ ಲಿಲ್ಲ. ಯಕ್ಷಗಾನದಲ್ಲಿ ಅಗ್ನಿಯಂತೆ ಸದಾ ಪ್ರಜ್ವಲಿಸಿದರು. 68 ವರ್ಷ ಸಾವಿರಾರು ರಾತ್ರಿಗಳಲ್ಲಿ ಅಸಂಖ್ಯ ಪ್ರೇಕ್ಷಕರನ್ನು ತಮ್ಮ ಖಚಿತ ಅಭಿನಯ, ಅದ್ಭುತ ಬಣ್ಣಗಾರಿಕೆ, ಹೆಜ್ಜೆ, ಮಾತುಗಳಿಂದ ರಂಜಿಸುತ್ತಾ ಬಂದರು. ಚಿಟ್ಟಾಣಿ
ಆಟಕ್ಕೆ ಹೋದರೆ ಕೊಟ್ಟ ದುಡ್ಡಿಗೆ ಮೋಸ ಇಲ್ಲ ಎಂದು ಪ್ರೇಕ್ಷಕರು ಥಿಯೇಟರ್‌ಗೆ ನುಗ್ಗ ತೊಡಗಿದರು. ಅಂದಿನಿಂದ ಇಂದಿನವರೆಗೂ ಪ್ರೇಕ್ಷಕರನ್ನು ಏಕಪ್ರಕಾರವಾಗಿ ಹಿಡಿದಿಟ್ಟು ಕೊಂಡು ಬಂದಿದ್ದರು. 25ರ ಹರೆಯದ ಪಾತ್ರ ನೋಡಿದವರು 80ರಲ್ಲೂ ಕಡಿಮೆ ಇಲ್ಲ ಎಂಬಂತೆ ಅಭಿನಯಿಸುವುದನ್ನು ಕಂಡು ಮೂಗಿನ ಮೇಲೆ ಬೆರಳಿಡುತ್ತಿದ್ದರು. 

ಚಿಟ್ಟಾಣಿಯವರ ಭಸ್ಮಾಸುರ, ಕೀಚಕ, ಆಂಜನೇಯ, ಕಾರ್ತವೀರ್ಯ, ಪರಶುರಾಮ, ಕೌರವ, ಮಾಗಧ ಮೊದಲಾದ ಪಾತ್ರಗಳನ್ನು ನೂರಾರು ಬಾರಿ ನೋಡಿದವರಿದ್ದಾರೆ. ಮೂರು ವರ್ಷ ಶಾಲೆಗೆ ಹೋಗಿ ಮತ್ತೆ ವಿದ್ಯೆ ತಲೆಗೆ ಹತ್ತದೆ ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿ ಯಕ್ಷಗಾನ ಕಲಿತು, ಯಕ್ಷಗಾನಕ್ಕಾಗಿಯೇ ಹುಟ್ಟಿದವರು ಎಂಬಂತೆ ಬೆಳೆದರು. ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಕೊಂಡದಕುಳಿ, ಹಾಸ್ಯಗಾರ,  ಕೆರೆಮನೆ ಮೊದಲಾದ ಯಕ್ಷಗಾನ ಕಲಾವಿದರಿಂದ ಪ್ರಭಾವಿತರಾಗಿ ಅಷ್ಟಿಷ್ಟು ಸ್ವೀಕರಿಸಿ, ತಮ್ಮ ಸ್ವಂತದ್ದನ್ನಾಗಿಸಿಕೊಂಡು ಬೆಳೆದರು. ಚಿಟ್ಟಾಣಿ ಘರಾಣೆ ಹುಟ್ಟು
ಹಾಕಿದರು. 


ದಣಿಯುತ್ತಲೇ ಇರಲಿಲ್ಲ
ಕಡತೋಕಾದ ಸುಶೀಲಾ ಹೆಗಡೆ ಅವರ ಕೈಹಿಡಿದ ಚಿಟ್ಟಾಣಿ ಅವರಿಗೆ ಸುಬ್ರಹ್ಮಣ್ಯ, ನಾರಾಯಣ, ನರಸಿಂಹ, ಲಲಿತಾ ಮಕ್ಕಳಿದ್ದಾರೆ. ಮಕ್ಕಳೆಲ್ಲ ಕೃಷಿಕರಾಗಿ, ಯಕ್ಷಗಾನ ಕಲಾವಿದರಾಗಿ ಪರಿಚಿತರಾಗಿದ್ದು ಮೊಮ್ಮಗ ಕಾರ್ತಿಕ ಚಿಟ್ಟಾಣಿ ಅಜ್ಜನ ಪ್ರತಿರೂಪವಾಗಿ ಬೆಳೆದಿದ್ದಾನೆ. ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಶಿವರಾಮ ಹೆಗಡೆ ಕೆರೆಮನೆ, ಪಿ.ಹಾಸ್ಯಗಾರ, ಕರ್ಕಿ, ದೇವರು ಹೆಗಡೆ, ಮುರೂರು, ಉಪ್ಪೂರು ನಾರಾಯಣ ಭಾಗÌತ, ಕಾಳಿಂಗ ನಾವುಡ,
ರಾಮ ಹೆಗಡೆ, ಕೊಂಡದಕುಳಿ, ಗಣಪತಿ ಹಾಸ್ಯ ಗಾರ, ಸಾಲಕೋಡ, ಮಂಜುನಾಥ ಭಾಗÌತ, ಕಡತೋಕಾ, ಮಹಾಬಲ ಹೆಗಡೆ ಕೆರೆಮನೆ, ದುರ್ಗಪ್ಪ ಗುಡಿಗಾರ, ನಾರಾಯಣ ಹೆಗಡೆ, ಗೋಡೆ, ಸುಬ್ರಹ್ಮಣ್ಯ ಧಾರೇಶ್ವರ, ಕೇಶವ ಹೆಗಡೆ, ಕೊಳಗಿ, ತಿಮ್ಮಪ್ಪ ಮದ್ದಲೆಗಾರ, ಪ್ರಭಾಕರ ಭಂಡಾರಿ, ಕರ್ಕಿ, ಶಂಕರ ಭಾಗÌತ, ಯಲ್ಲಾಪುರ ಇವರೆಲ್ಲ ಚಿಟ್ಟಾಣಿಯ ಜತೆಗೂಡಿದ್ದಾರೆ, ಆಟ ಮಾಡಿದ್ದಾರೆ. ಜಲವಳ್ಳಿ ವೆಂಕಟೇಶ ರಾವ್‌ ಮತ್ತು ಚಿಟ್ಟಾಣಿಯ ಜೋಡಿ  ಯಕ್ಷಲೋಕದಲ್ಲಿ ಪ್ರಸಿದ್ಧವಾದದ್ದು.


ಪಾತ್ರಗಳಿಗೆ ಜೀವ ತುಂಬುತ್ತಿದ್ದರು
ಗುಂಡಬಾಳ ಮೇಳದಿಂದ ಆರಂಭಿಸಿ ಮೂಡ್ಕಣಿ, ಮುರೂರು, ಇಡಗುಂಜಿ, ಕೊಳಗಿಬೀಸ, ಅಮೃತೇಶ್ವರಿ, ಗುರುಪ್ರಸಾದಿತ ಯಕ್ಷಗಾನ ಮೇಳ, ಸಾಲಿಗ್ರಾಮ, ಮಹಾಲಿಂಗೇಶ್ವರ, ಪಂಚಲಿಂಗೇಶ್ವರ, ಮಾರಿಕಾಂಬಾ, ಶಿರಸಿ, ಬಚ್ಚಗಾರ, ಅನಂತ ಪದ್ಮನಾಭ, ಪೆರ್ಡೂರು, ಪ್ರಸ್ತುತ ಶ್ರೀ ವೀರಾಂಜನೇಯ, ಗೇರಸೊಪ್ಪಾ ಮೊದಲಾದ ಮೇಳಗಳಲ್ಲಿ ಹಾಗೂ ಅತಿಥಿ ಕಲಾವಿದರಾಗಿ ನೂರಾರು ಯಕ್ಷಗಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ಯಕ್ಷ ಲೋಕದ ಯುಗಪುರುಷ
ಪ್ರತಿ ಪಾತ್ರವನ್ನು ಪ್ರೇಕ್ಷಕರಿಗೆ ಅಸಾಧಾರಣ ಅನುಭವವನ್ನಾಗಿಸುತ್ತಾ ಬಂದ ಚಿಟ್ಟಾಣಿ ಮಿಂಚಿನ ಪ್ರವೇಶದಿಂದ ಮೈ ಪುಳಕಗೊಳ್ಳುವಂತೆ ಮಾಡುತ್ತಾ ತಾಜಾತನದಿಂದ ಪಾತ್ರ ಪೋಷಣೆ ಮಾಡುತ್ತಾ ಬಂದಿದ್ದರು. ಕಲಾ ಪ್ರೇಕ್ಷಕನಿಗೆ, ಕಲಾದೇವತೆಗೆ ಮೋಸ ಮಾಡಬಾರದು, ಬಯಲಾಟವೇ ಇರಲಿ, ಹವಾನಿಯಂತ್ರಿತ ರಂಗಸ್ಥಳವೇ ಇರಲಿ, ಹಳ್ಳಿ ಮೂಲೆಯಾಗಲಿ, ಅಮೆರಿಕದ ವೇದಿಕೆಯಾಗಲಿ ಎಲ್ಲ ಕಡೆಗೂ ಏಕಪ್ರಕಾರವಾಗಿ ಕಲಾ ಪ್ರೌಢಿಮೆಯನ್ನು ಮೆರೆಯುತ್ತಾ ಬಂದ ಚಿಟ್ಟಾಣಿ ಯಕ್ಷಗಾನ ಲೋಕದ ಯುಗಪುರುಷ. ಲಯದ ಮೇಲೆ ಅದ್ಭುತ ಹಿಡಿತ, ಗಟ್ಟಿ ಧ್ವನಿ, ಆಂಗಿಕ ಅಭಿನಯ, ಇವೆಲ್ಲವೂ ಚಿಟ್ಟಾಣಿಯವರನ್ನು ಉನ್ನತಿಗೇರಿಸಿದವು. ಹುಟ್ಟಿನಿಂದ ಇದ್ದ ಯೋಗ್ಯತೆಗೆ ತಡವಾಗಿ ಯೋಗ ಬಂತು. ಚಿಟ್ಟಾಣಿಯವರಿಗೆ ಅಭಿನಂದನ ಗ್ರಂಥಗಳು ಸಮರ್ಪಿತವಾಗಿವೆ. ಆತ್ಮಚರಿತ್ರೆ ಪ್ರಕಟವಾಗಿದೆ, ನೂರಾರು ಸಿಡಿಗಳಿವೆ. ಪಾತ್ರದೊಂದಿಗೆ ತಾದಾತ್ಮದಿಂದ ಅಭಿನಯಿಸುವ ಚಿಟ್ಟಾಣಿ ತನ್ನ ಪ್ರಶಸ್ತಿ, ಪುರಸ್ಕಾರ, ಕಲಾ ಸಾಮರ್ಥ್ಯ ಇವು ಮುಂದಿನ ಪೀಳಿಗೆಗೆ ಸಿಗಬೇಕು, ಸಿಡಿಗಳು ಪಾಠವಾಗಬೇಕು ಎಂದು ಬಯಸಿದ್ದರು. ಸರಕಾರ 10 ಲಕ್ಷ ರೂ. ನೀಡಿತ್ತು, ಕಟ್ಟಡ ಆಗಬೇಕಿದೆ. ಯಕ್ಷಗಾನದ ಸುವರ್ಣಯುಗ ಪುರುಷ ಚಿಟ್ಟಾಣಿ ಎಂದರೆ ಅತಿಶಯೋಕ್ತಿಯಾಗಲಾರದು. 

ಪ್ರಶಸ್ತಿಗಳ ಸರಮಾಲೆ
ಚಿಟ್ಟಾಣಿ ಯಕ್ಷಗಾನ ಲೋಕದಲ್ಲಿ ಬೆಳೆಯುತ್ತಿದ್ದಂತೆಯೇ ಪ್ರಶಸ್ತಿಗಳ ಸರಮಾಲೆ ಆರಂಭವಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಶ್ರೀ ಪ್ರಶಸ್ತಿ, ಎಡನೀರು, ಪೇಜಾವರ, ರಾಮಚಂದ್ರಾಪುರ ಮಠದ ಪ್ರಶಸ್ತಿ, ಸುಧಾಭಿಮುಖೀ ಕಲಾ ವೇದಿಕೆಯಿಂದ ಪ್ರಶಸ್ತಿ, ವೈಶ್ಯ ಸಮಾಜದಿಂದ ಸಾಂಸ್ಕೃತಿಕ ಪ್ರಶಸ್ತಿ, ಶಿವರಾಮ ಹೆಗಡೆ ಸಂಸ್ಮರಣಾ ಪ್ರಶಸ್ತಿ, ಕಲಾಕರ್ಣ ಉಡುಪಿ, ಜಿಲ್ಲಾ ಕಸಾಪ, ಗದಗ ಸಾಂಸ್ಕೃತಿಕ ಅಕಾಡೆಮಿ, ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನ, ನಾಟ್ಯಶ್ರೀ, ಗೋಕರ್ಣ ಗೆಳೆಯರ ಬಳಗ, ಅರೇಅಂಗಡಿ ಗೆಳೆಯರ ಬಳಗ, ನವನೀತ ಯಕ್ಷಗಾನ ಮಂಡಳಿ, ಮುಂಬಯಿ ಕರ್ನಾಟಕ ಸಂಘ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಗಳಿಂದ ಪ್ರಶಸ್ತಿ, ಡಾ| ಶಿವರಾಮ ಕಾರಂತ ಪ್ರಶಸ್ತಿ, ಉಡುಪಿ ಕೃಷ್ಣ
ಮಠದಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಉಡುಪಿ ಅಭಿಮಾನಿಗಳಿಂದ ಯಕ್ಷರತ್ನ ಪ್ರಶಸ್ತಿ, ಸಹ್ಯಾದ್ರಿ
ಸಂಘದಿಂದ ಅಡಿಗ ಪ್ರಶಸ್ತಿ, ನಟ ಶೇಖರ ಪ್ರಶಸ್ತಿ, ಪೇಜಾವರ ಮಠ ಮತ್ತು ಯಕ್ಷಗಾನ ಪ್ರತಿಷ್ಠಾನದಿಂದ ಶ್ರೀ ರಾಮ-ವಿಠuಲ ಪ್ರಶಸ್ತಿ. ಸರಕಾರದಿಂದ 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2003ರಲ್ಲಿ ಜಾನಪದ ಶ್ರೀ ಪ್ರಶಸ್ತಿ, 2003ರಲ್ಲಿ ಕನ್ನಡ ಸಾತ್ಯ ಪರಿಷತ್‌ ಪ್ರಶಸ್ತಿ, 2012ರಲ್ಲಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ. 

Advertisement

ಕೈ ಹಿಡಿದ “ಅಮೃತ’ ಘಳಿಗೆ
ಚಿಟ್ಟಾಣಿಯವರಷ್ಟು ಪ್ರಶಸ್ತಿ, ಸನ್ಮಾನ ಪಡೆದ ಇನ್ನೊಬ್ಬ ಕಲಾವಿದ ಇಲ್ಲ. ವೈಯಕ್ತಿಕ ದೌರ್ಬಲ್ಯದ ಕುರಿತು
ಚಿಟ್ಟಾಣಿಯವರಷ್ಟು ಟೀಕೆಗೊಳಗಾದ ಇನ್ನೊಬ್ಬ ಕಲಾವಿದನೂ ಇಲ್ಲ. ಅವರ ಕಲಾ ಸಾಮರ್ಥ್ಯ ಕಂಡು ಕರುಬುವವರು ದೌರ್ಬಲ್ಯ ಎತ್ತಿ ಪ್ರಚಾರ ಮಾಡಿ, ತೃಪ್ತಿಪಟ್ಟುಕೊಂಡರು. ಆರ್ಥಿಕ ಸಮಸ್ಯೆ ಯಿಂದ, ಅಪಪ್ರಚಾರದಿಂದ
ಬಳಲಿದ ಚಿಟ್ಟಾಣಿ ದೌರ್ಬಲ್ಯಗಳನ್ನು ಮೀರಿ, ಮರೆಸುವಂತೆ ಬೆಳೆದರು. ಅಮೃತೇಶ್ವರಿ ಮೇಳ ಇವರ ಪಾಲಿಗೆ ಅಮೃತವಾಯಿತು. ಗುಡೇಕೇರಿಯಲ್ಲಿ ಒಂದಿಷ್ಟು ಭೂಮಿ ಕೊಂಡು ಮನೆ ಕಟ್ಟಿಸಿದರು. ಹೀಗೆ ಕೌಟುಂಬಿಕ ಜೀವನ ಭದ್ರವಾಗುತ್ತಿದ್ದಂತೆ ಮಕ್ಕಳು ಬೆಳೆದರು. ಚಿಟ್ಟಾಣಿ ಹೊಸಚಿಗುರು ಮೂಡಿಸಿಕೊಂಡು 20ರ ವಯಸ್ಸಿನಲ್ಲಿ
ಮಾಡಿದ ಪಾತ್ರವನ್ನು 70ರಲ್ಲಿ, 80ರಲ್ಲಿ ಮುಂದುವರಿಸಿ, ರಾಷ್ಟ್ರದ ಸರ್ವೋನ್ನತ ಪದ್ಮಪ್ರಶಸ್ತಿಗೆ ಭಾಜನರಾದರು. 

ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next