Advertisement
ನೀರಿನ ಸಮರ್ಪಕ ನಿರ್ವಹಣೆ ಹೇಗಿರಬೇಕು? ಇದಕ್ಕೆ ಮಾದರಿ ಚಿಕ್ಕಬಳ್ಳಾಪುರದಿಂದ ನಾಲ್ಕು ಕಿ.ಮೀ ದೂರದ ಚಿತ್ರಾವತಿಯ ಚಕ್ರಕೊಳ. ಇದರಲ್ಲಿ ನೀರು ತುಂಬಿದರೆ ನೂರಾರು ಎಕರೆ ಜಮೀನು ಹಸಿರಾಯಿತು, ಸಾವಿರಾರು ಬೋರ್‌ವೆಲ್ ಬದುಕಿಕೊಂಡವು. ನೂರಾರು ವರ್ಷಗಳ ಹಿಂದೆ ಈ ರೀತಿಯ ಪುಷ್ಕರಣಿಗಳೇ ಜೀವಸೆಲೆಗಳು. ಪುಷ್ಕರಣಿಗಳು ಧಾರ್ಮಿಕ ಕಾರಣಗಳಿಗೆ ಮಾತ್ರವಲ್ಲ, ನೀರು ಸಂಗ್ರಹಣೆಯ ವಿಷಯದಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದವು.
Related Articles
Advertisement
“ಮೂರು ವರ್ಷಗಳ ಹಿಂದೆ ಹಲವು ಸಂಘಟನೆಗಳನ್ನು ಒಗ್ಗೂಡಿಸಿದೆವು. ವರ್ಷದ ಆರಂಭದ ದಿನ ಸಮಾಜಕ್ಕೆ ಉಪಯೋಗವಾಗುವ ಕೆಲಸಕ್ಕೆ ಮುಂದಾಗೋಣ ಎಂದು ಕಾರ್ಯಪ್ರವೃತ್ತರಾದೆವು. ಕುಮುದೇಂದು ಮಹರ್ಷಿ ಕನ್ನಡ ಸಂಘ, ರೈತ ಸಂಘ, ಸಮಾನ ಮನಸ್ಕರ ವೇದಿಕೆ ಜೊತೆಗೂಡಿ ಸುಮಾರು 50 ಮಂದಿ ಈ ಕಲ್ಯಾಣಿಯ ಸ್ವತ್ಛತೆಯನ್ನು ಮಾಡಿದೆವು. ನಮ್ಮ ಉತ್ಸಾಹವನ್ನು ಕಂಡು ತಾಲ್ಲೂಕು ಪಂಚಾಯಿತಿಯವರೂ ಕೈಜೋಡಿಸಿದರು. ತಾಲ್ಲೂಕು ಪಂಚಾಯಿತಿಯಿಂದ ಕಲ್ಯಾಣಿಯ ದುರಸ್ಥಿ ಕೆಲಸ ನಡೆಯಿತು. ಅಂದಿನಿಂದ ತಾಲ್ಲೂಕು ಪಂಚಾಯಿತಿಯವರೇ ಕಲ್ಯಾಣಿಯನ್ನು ನಿರ್ವಹಣೆ ಮಾಡುತ್ತಾ ಅದಕ್ಕೆ ಕಾಲಕಾಲಕ್ಕೆ ನೀರು ಬಿಡುತ್ತಾ ಪ್ರೇಕ್ಷಣೀಯವಾಗಿರಿಸಿದ್ದಾರೆ’ ಎನ್ನುತ್ತಾರೆ.
ಈ ಕೊಳವನ್ನು ಹಲಸಮ್ಮನ ಬಾವಿ ಎಂದು ಸಹ ಕರೆಯಲಾಗುತ್ತದೆ. ಇದಕ್ಕೆ ಚಾರಿತ್ರಿಕ ಕಾರಣವೂ ಉಂಟು. ಈ ಕೊಳದ ಮಧ್ಯೆ ಇರುವ ಶಿಲಾವೃತ ಬಾವಿಯನ್ನು ಪಾಳೆಯಗಾರರ ರಾಣಿ ಹಲಸಮ್ಮನು ನಿರ್ಮಿಸಿದಳೆಂಬ ಪ್ರತೀತಿ. ಮುಳುಬಾಗಿಲು ತಾಲ್ಲೂಕಿನ ಆವನಿಬೆಟ್ಟದಲ್ಲಿ ಧನುಷ್ಕೋಟಿ ತೀರ್ಥದ ಉತ್ತರಕಡೆಯ ಹುಟ್ಟುಬಂಡೆಯ ಮೇಲೆ ಇರುವ ಶಾಸನದಲ್ಲಿ ಉಲ್ಲೇಖೀತವಾಗಿರುವ ಸುಗುಟೂರು ಚಿಕ್ಕತಮ್ಮಯಗೌಡನ ಅಕ್ಕ ಹಲಸರಾತಮ್ಮನೇ ಈಕೆ ಇರಬಹುದೆಂದು ಚರಿತ್ರಕಾರರ ಅಭಿಪ್ರಾಯವಾಗಿರುತ್ತದೆ.
ಅಲ್ಲದೆ, ಚಿತ್ರಾವತಿ ಕೊಳದ ಪ್ರಾಚೀನತೆಯನ್ನು ಸಾರುವ ಎರಡು ಶಾಸನಗಳು ಇಲ್ಲಿವೆ. ಈ ಕೊಳದ ಈಶಾನ್ಯ ದಿಕ್ಕಿನಲ್ಲಿ ತಳಪಾದಿಯ ಮೇಲಿರುವ ಶಾಸನದ ಪ್ರಕಾರ ಅದೋಬಂಡೆ (ಹಾರೋಬಂಡೆ) ಬಂಚಾಳಪ ಕಲ್ಲಿನ ಮಾಳಿಗೆ ಕಟ್ಟಿಸಿದ್ದುದರಿಂದಾಗಿ ಚಿಕ್ಕಣ್ಣನಿಗೆ ಅನೇಕವಾಗಿ ಇನಾಮುಗಳನ್ನು ಕೊಟ್ಟಿರುವ ಬಗ್ಗೆ ತಿಳಿಸುತ್ತದೆ. ಬಹುಶಃ ಕೊಳದ ಬದಿಯಲ್ಲಿರುವ ಕಲ್ಲಿನ ಮಂಟಪಗಳನ್ನು ಬಂಚಾಳಪ್ಪ ಕಟ್ಟಿಸಿರಬಹುದೆಂಬುದಕ್ಕೆ ಈ ಶಾಸನ ಆಧಾರ ಒದಗಿಸುತ್ತದೆ. ಮತ್ತೂಂದು ಶಾಸನದ ಪ್ರಕಾರ ಮಂಚನಬಲೆ ದೇವಾಂಗದ ದೊಡ್ಡಮುದ್ದಣ್ಣ ಕಲ್ಲಿನ ಬಾವಿ ಕಟ್ಟಿಸಿದ್ದು, ಆ ಕಾರಣ ಚಿಕ್ಕಣ್ಣಗೆ ಬಹಳವಾಗಿ ವುಡುಗರೆ ಮಾಡಿರುವ ಬಗ್ಗೆ ತಿಳಿಸುತ್ತದೆ. ಆದರಿಲ್ಲಿ ಅವರು ಕಟ್ಟಿಸಿದ ಬಾವಿ ಯಾವುದೆಂಬುದನ್ನು ನಿರ್ಧರಿಸುವುದು ಕಷ್ಟ ಎಂದು ಊರಿನ ಗೋಪಾಲಗೌಡ ಕಲ್ವಮಂಜರಿ ಹೇಳುತ್ತಾರೆ.
ಚಿತ್ರಾವತಿ ನದಿಚಿತ್ರಾವತಿ ನದಿ ನಂದಿಬೆಟ್ಟದ ಉತ್ತರಕ್ಕಿರುವ ಹರಿಹರೇಶ್ವರ ಬೆಟ್ಟದಲ್ಲಿ ಜನ್ಮತಾಳಿ, ಆನಂತರ ಈಶಾನ್ಯ ದಿಕ್ಕಿನಲ್ಲಿ ವರ್ಲಕೊಂಡ ಮತ್ತು ಬಾಗೇಪಲ್ಲಿಯ ಮಧ್ಯದಲ್ಲಿ ಪಾತ್ರವನ್ನು ನಿರ್ಮಿಸಿಕೊಂಡು ಮುಂದೆ ಸಾಗುತ್ತದೆ. ಬಾಗೇಪಲ್ಲಿ ಪ್ರದೇಶ ಬಿಟ್ಟ ಕೆಲವೇ ಮೈಲಿಗಳ ನಂತರ ಉತ್ತರಾಭಿಮುಖವಾಗಿ ಆಂಧ್ರ ಪ್ರದೇಶವನ್ನು ಸೇರಿಕೊಳ್ಳುತ್ತದೆ. ಅಲ್ಲಿಂದಲೇ ಅನಂತಪುರ ಜಿಲ್ಲೆ ಯನ್ನು ಪ್ರವೇಶಿಸುವ ಈ ನದಿಯು ಕೊಡಿಕೊಂಡ ಸಮೀಪ ಉತ್ತರಾಭಿಮುಖವಾಗಿಯೇ ಮುಂದುವರೆದು ಆನಂತರ ತನ್ನ ಪಾತ್ರವನ್ನು ಮತ್ತೆ ಈಶಾನ್ಯ ದಿಕ್ಕಿನತ್ತ ಬದಲಿಸಿಕೊಂಡು ಬುಕ್ಕಾಪಟ್ಟಣಂ ಮತ್ತು ಧರ್ಮವರಂ ಕೆರೆಗಳಿಗೆ ನೀರುಣಿಸುತ್ತದೆ. ಅಂತಿಮವಾಗಿ ಕಡಪ ಜಿÇÉೆಯ ಗೌಡಲೂರು ಬಳಿ ಉತ್ತರ ಪಿನಾಕಿನಿ ನದಿಯನ್ನು ಸೇರಿ ಮುಂದೆ ಮತ್ತಷ್ಟು ವಿಜೃಂಭಿಸಲು ಕಾರಣವಾಗುತ್ತದೆ. ಇತ್ತೀಚೆಗೆ ಪರಗೋಡು ಬಳಿ ಇದಕ್ಕೆ ಅಣೆಕಟ್ಟೆ ನಿರ್ಮಿಸಲಾಗಿದೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ಪಟ್ಟಣಗಳೂ ಸೇರಿದಂತೆ ನೂರಾರು ಹಳ್ಳಿಗಳ ದಾಹವನ್ನು ಥಣಿಸುವ ಮೂಲವೂ ಈ ನದಿಯೇ ಆಗಿರುವುದೊಂದು ವಿಶೇಷ. ಚಿತ್ರಾವತಿ ಕೊಳ
ಹರಿ-ಹರ ಸಂಗಮ ಕ್ಷೇತ್ರವೆನ್ನುವ ಹರಿಹರೇಶ್ವರ ಬೆಟ್ಟ(ನಂದಿಬೆಟ್ಟದ ಉತ್ತರದಲ್ಲಿದೆ)ದಲ್ಲಿ ಹುಟ್ಟುವ ಚಿತ್ರಾವತಿ ನದಿ, ಗುಪ್ತಗಾಮಿನಿಯಾಗಿ ಸಾಗಿ ಮೊದಲಬಾರಿಗೆ ಈ ಕೊಳದ ಮಧ್ಯದಲ್ಲಿರುವ ಬಾವಿಯಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಪ್ರತೀತಿಯಿದೆ. ಈ ಕಾರಣದಿಂದಾಗಿಯೇ ಈ ಕಲ್ಯಾಣಿಯನ್ನು ಚಿತ್ರಾವತಿ ಕೊಳ ಎಂದು ಕರೆಯಲಾಗುತ್ತದೆ. ಈ ಕೊಳಕ್ಕೆ ಹೊಂದಿಕೊಂಡಂತೆ ಆಂಜನೇಯ, ಈಶ್ವರ ಮತ್ತು ಸುಬ್ರಹ್ಮಣ್ಯೇಶ್ವರ ದೇವಾಲಯಗಳಿದ್ದು, ಈ ಕ್ಷೇತ್ರ ದೈವ ಸನ್ನಿಧಿಯಾಗಿಯೂ ಆರಾಧಿಸಲ್ಪಡುತ್ತಿದೆ ಎಂದು ಸ್ಥಳದ ಮಹಿಮೆಯನ್ನು ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಬಣ್ಣಿಸುತ್ತಾರೆ. ಓಂ ಶಿಡ್ಲಘಟ್ಟ