Advertisement

ಚಿತ್ರದುರ್ಗ: ಸಮಸ್ಯೆಗಳಿಗಿಂತ ಪ್ರಚಾರದ ಅಬ್ಬರವೇ ಹೆಚ್ಚು ! 

02:42 AM Mar 15, 2019 | |

ಚಿತ್ರದುರ್ಗ: ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರ. ಹಲವು ಸಮಸ್ಯೆಗಳ ವಿರುದ್ಧ ದಾಳಿ ಮತ್ತು ಪ್ರತಿದಾಳಿಗೆ ವೇದಿಕೆ ಸಜ್ಜುಗೊಂಡಿದೆ. ಜಿಲ್ಲೆಯ ಜನರಿಗೆ ಬೇಡವಾದ ಡಿಆರ್‌ಡಿಒ, ಇಸ್ರೋ ಮತ್ತಿತರ ವಿಜ್ಞಾನ ಕೇಂದ್ರಗಳಿಗಾಗಿ ಹತ್ತು ಸಾವಿರ ಎಕರೆ ಪ್ರದೇಶ ಕಳೆದುಕೊಂಡ ಜನತೆಯ ಆಕ್ರೋಶ ಶಮನಗೊಂಡಿಲ್ಲ. ಈ ವಿಷಯಗಳು ಚುನಾವಣೆಯಲ್ಲಿ ಮಾರ್ದನಿಸುವ ಲಕ್ಷಣಗಳಿವೆ.

Advertisement

ಪ.ಜಾ., ಪ.ಪಂ., ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ  ಕ್ಷೇತ್ರದಲ್ಲಿ ಬಡತನ, ಮೂಢನಂಬಿಕೆಗಳು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳು ಜೀವಂತವಾಗಿವೆ. ರಾಷ್ಟ್ರದ ಅತಿ ಹಿಂದುಳಿದ 16 ಜಿಲ್ಲೆಗಳ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆ ಸ್ಥಾನ ಪಡೆದಿದೆ. ಕೈಗಾರಿಕೆಗಳಿಲ್ಲದೆ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಪದವಿ, ಸ್ನಾತಕೋತ್ತರ ಪದವಿ, ಬಿಇಡಿ ಪದವಿ ಪಡೆದ ಲಕ್ಷಾಂತರ ನಿರುದ್ಯೋಗಿಗಳು ಉದ್ಯೋಗಕ್ಕೆ ಅಲೆಯುತ್ತಿದ್ದಾರೆ.

ಇನ್ನೊಂದು ಕಡೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಕೂಡ ಇದಾಗಿದ್ದು, ನೂರು ವರ್ಷಗಳ ಸರಾಸರಿಯಲ್ಲಿ 70 ವರ್ಷಗಳಿಗಿಂತ ಹೆಚ್ಚು ವರ್ಷಗಳು ಬರಗಾಲಕ್ಕೆ ತುತ್ತಾಗಿದೆ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿ, ರೈತರು ಉದ್ಯೋಗ ಅರಸಿ ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಜಿಲ್ಲೆಯ ಜೀವಂತ ನದಿ ಎಂಬ ಖ್ಯಾತಿ ಪಡೆದಿದ್ದ ವೇದಾವತಿ ನದಿಯ ಒಡಲು ಬರಿದಾಗಿದೆ. ವಾಣಿ ವಿಲಾಸ ಸಾಗರ ತನ್ನ ಮೂಲ ಕಳೆದುಕೊಂಡು ಕೆರೆಯಾಗಿ ಪರಿವರ್ತನೆಯಾಗುತ್ತಿದೆ.

ಬಿಜೆಪಿ ಬತ್ತಳಿಕೆಯಲ್ಲಿ ಏನಿದೆ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ  ಜಾರಿಗೊಳಿಸಿದ ಹಲವಾರು ಜನಪರ ಯೋಜನೆಗಳು ಬಿಜೆಪಿಯ ಪ್ರಮುಖ ಪ್ರಚಾರ ಅಸ್ತ್ರವಾಗಿದೆ. ಅದೇ ರೀತಿ ಮಧ್ಯ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ತುಂಗಭದ್ರಾ ಹಿನ್ನೀರು ಯೋಜನೆ ಕಾರ್ಯಾನುಷ್ಠಾನ ವಿಳಂಬ, ಸಂಸದರ ಆಡಳಿತ ವೈಫ‌ಲ್ಯ, ತುಮಕೂರು-ಚಿತ್ರದುರ್ಗ-ದಾವಣಗೆರೆ   ನೇರ ರೈಲು ಮಾರ್ಗ, ಭದ್ರಾ ಮೇಲ್ದಂಡೆ ಯೋಜನೆ, ಸರಕಾರಿ ಮೆಡಿಕಲ್‌ ಕಾಲೇಜು ಕಾರ್ಯ ರೂಪಕ್ಕೆ ಬಾರದಿರುವುದು ಸಹಿತ ಮತ್ತಿತರ ವೈಫಲ್ಯಗಳ ಪಟ್ಟಿ ಮಾಡಿ ಎದುರಾಳಿಗಳ ವಿರುದ್ಧ ದಾಳಿಗೆ ಸಜ್ಜಾಗಿದೆ.

ಕಾಂಗ್ರೆಸ್‌ ಅಸ್ತ್ರ ಏನು?
ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ವೈಖರಿ, ಕೇಂದ್ರ ಸರಕಾರದ ವಿರುದ್ಧದ ಆಡಳಿತ ವಿರೋ ಧಿ ಅಲೆ, ಸಾಲ ಮನ್ನಾ ಮಾಡದೆ ರೈತ ವಿರೋಧಿ  ಧೋರಣೆ ಅನುಸರಿಸಿದ್ದು, ಕಾರ್ಮಿಕರ ಕಾಯ್ದೆ ತಿದ್ದುಪಡಿ, ಬಿಎಸ್‌ಎನ್‌ಎಲ್‌ ಕಂಪೆನಿ ಮುಚ್ಚಲು ಮುಂದಾಗಿರುವುದು, ಸರ್ಜಿಕಲ್‌ ಸ್ಟ್ರೈಕ್‌ ಸುತ್ತ ಎದ್ದಿರುವ ಅನುಮಾನದ ಹುತ್ತ, ರಫೇಲ್‌ ಹಗರಣ, ಕೇಂದ್ರ ಸರಕಾರವು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಇರುವ ಎಲ್ಲ ಅರ್ಹತೆ ಭದ್ರಾ ಮೇಲ್ದಂಡೆ ಯೋಜನೆಗೆ ಇದ್ದರೂ ಆ ನಿಟ್ಟಿನಲ್ಲಿ  ಪ್ರಯತ್ನಿಸದಿರುವುದು ಸಹಿತ ಮತ್ತಿತರ ವಿಷಯಗಳ ಕುರಿತು ಕೇಂದ್ರ ಸರಕಾರದ ವಿರುದ್ಧ ಪ್ರತಿ ದಾಳಿ ನಡೆಸಲು ಸಜ್ಜಾಗಿದೆ.

Advertisement

ಕುಡಿಯುವ ನೀರಿನ ಬವಣೆ ತಪ್ಪಿಸಲು ಮತ್ತು ಬಯಲು ಸೀಮೆಯ ಲಕ್ಷಾಂತರ ಹೆಕ್ಟೇರ್‌ಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತಾ ಸಾಗಿದೆ. ಚಿತ್ರದುರ್ಗ-ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಕೇವಲ ಘೋಷಣೆಗೆ ಸೀಮಿತವಾಗಿದೆ. ಸರಕಾರಿ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನ ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದರೂ ಅನುಷ್ಠಾನ ಆಗುತ್ತಿಲ್ಲ. ಐತಿಹಾಸಿಕ ಏಳು ಸುತ್ತಿನ ಕೋಟೆ ಕೇಂದ್ರ ಸರಕಾರದ ಪುರಾತತ್ವ ಇಲಾಖೆ ಅ ಧೀನದಲ್ಲಿದ್ದರೂ ವಿಶ್ವ ಮಾನ್ಯತೆ ನೀಡುವುದು ಬೇಡ, ಕನಿಷ್ಠ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರ ಲಗೇಜ್‌ ರೂಂ ಇಲ್ಲದಿರುವುದು ಜಿಲ್ಲೆಯ ದುರಂತ. ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲ ವಿಷಯಗಳು ಪ್ರತಿಧ್ವನಿಸಲಿವೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ದಾಳಿ-ಪ್ರತಿದಾಳಿಗೆ ವಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಸಜ್ಜಾಗಿವೆ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next