Advertisement

ಕೊರೊನಾ ಶಂಕಿತ ಪ್ರಕರಣ ಪತ್ತೆಯಾಗಿಲ್ಲ : ಡಾ|ಗಿರೀಶ್‌

06:14 PM Mar 07, 2020 | Naveen |

ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ವೈರಸ್‌ನ ಯಾವುದೇ ಶಂಕಿತ ಪ್ರಕರಣ ಪತ್ತೆಯಾಗಿಲ್ಲ, ಆದರೂ, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್‌ ತಿಳಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಐದು ಬೆಡ್‌ಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎರಡು ಬೆಡ್ಗಳ ಪ್ರತ್ಯೇಕ ಐಸೋಲೇಷನ್‌ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಎಚ್‌1ಎನ್‌1 ಉಲ್ಬಣಿಸಿದಾಗಲೂ ಆರೋಗ್ಯ ಇಲಾಖೆಯಿಂದ ಸಮರ್ಥವಾಗಿ ನಿಭಾಯಿಸಿದ್ದೇವೆ. ಅದೇ ರೀತಿ ಕೊರೊನಾ ವೈರಸ್‌ ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಈಗಲೇ ಮಾಸ್ಕ್ ತೆಗೆದುಕೊಂಡು ಉಪಯೋಗಿಸುವ ಅಗತ್ಯ ಇಲ್ಲ, ವಿನಾಕಾರಣ ಈ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಅಲ್ಲ ಎಂದರು.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೊರಗಡೆಯಿಂದ ಮನೆಗೆ ಹೋದ ಬಳಿಕ ಸೋಪ್‌ ನಿಂದ ಕೈ ತೊಳೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಸಿ ಪದಾರ್ಥಗಳನ್ನು ಸೇವಿಸಬೇಕು ಎಂದು ಹೇಳಿದರು.

ತೆಲಂಗಾಣದಿಂದ ಬೆಂಗಳೂರಿಗೆ ಭೇಟಿ ನೀಡಿದ್ದ ಕೊರೊನಾ ಶಂಕಿತ ವ್ಯಕ್ತಿ ಒಂದು ದಿನ ಮಾತ್ರ  ಗಳೂರಿನಲ್ಲಿ ಇದ್ದು ಹೋಗಿದ್ದಾರೆ. ಆತ ಭೇಟಿ ಮಾಡಿ ಮಾತನಾಡಿಸಿದ ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿಸಿದರು.

Advertisement

ಸದ್ಯ ವಿಶೇಷಗಳಿಗೆ ಹೋಗುವುದನ್ನು ನಿಲ್ಲಿಸಿ, ಮುಖ್ಯವಾಗಿ ಚೀನಾ, ಇರಾನ್‌, ಕೋರಿಯಾ, ಇಟಲಿ, ಜಪಾನ್‌ ದೇಶಗಳಿಗೆ ಹೋಗಲೇಬೇಡಿ. ರಾಜ್ಯದ ಮಂಗಳೂರು, ಬೆಳಗಾವಿ ಸೇರಿದಂತೆ ಗಡಿ ಪ್ರದೇಶಗಳ ಊರುಗಳಲ್ಲಿ ಹೊರ ರಾಜ್ಯಗಳಿಂದ ಬಂದ ಎಲ್ಲರ ಸ್ಕ್ರೀನಿಂಗ್‌ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಸಿಸಿ ಕ್ಯಾಮರಾ ಇಲ್ಲದ ಕೇಂದ್ರಗಳಲ್ಲಿ ಕಾರಿಡಾರ್‌ಗಳಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಅಧೀಕ್ಷಕರ ಕೊಠಡಿಯಿಂದ ಪ್ರಶ್ನೆಪತ್ರಿಕೆ ಬಂಡಲ್‌ ಓಪನ್‌ ಮಾಡಲಾಗುತ್ತದೆ. ತಾಲೂಕಿನಲ್ಲಿ 6495 ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್‌ ಮಾತನಾಡಿ, ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ 42 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.

ತಾಪಂ ಇಒ ಕೃಷ್ಣನಾಯ್ಕ ಮಾತನಾಡಿ, ಎಲ್ಲಾ ಇಲಾಖೆಯವರು ಈ ತಿಂಗಳ ಅಂತ್ಯದೊಳಗೆ ಅನುದಾನ ಖರ್ಚು ಮಾಡಬೇಕು. ಯಾವುದಾದರು ಅಲಾಟ್‌ಮೆಂಟ್‌ ಬಿಡುಗಡೆ ಮಾಡುವುದಿದ್ದರೆ ತಿಳಿಸಿ ಮಾಡಿಕೊಡಲಾಗುವುದು ಎಂದರು. ತಾಪಂ ಉಪಾಧ್ಯಕ್ಷೆ ಸಿ.ಶಾಂತಮ್ಮ ರೇವಣಸಿದ್ದಪ್ಪ, ತಿಪ್ಪಮ್ಮ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next