Advertisement

ದೇವರಿಗೂ ಜಲಕ್ಷಾಮ!

01:34 PM May 20, 2019 | Naveen |

ಚಿತ್ರದುರ್ಗ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಎದುರಾಗಿರುವ ಜಲಕ್ಷಾಮದಿಂದ ಮಧ್ಯಕರ್ನಾಟಕದ ದೇಗುಲಗಳೂ ಹೊರತಾಗಿಲ್ಲ. ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ಹಿರಿಯೂರಿನ ತೇರುಮಲ್ಲೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಹಲವು ಪ್ರಸಿದ್ಧ ದೇವಾಲಯಗಳು ನೀರಿನ ಬರ ಎದುರಿಸುತ್ತಿವೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ಹಿರಿಯೂರು ತಾಲೂಕಿನ ವದ್ದೀಕೆರೆ ಕಾಲಬೈರವೇಶ್ವರಸ್ವಾಮಿ ದೇವಸ್ಥಾನ, ‘ದಕ್ಷಿಣ ಕಾಶಿ’ ಖ್ಯಾತಿಯ ತೇರುಮಲ್ಲೇಶ್ವರಸ್ವಾಮಿ, ವಾಣಿವಿಲಾಸ ಸಾಗರದ ಕಣಿವೆ ಮಾರಮ್ಮ ದೇವಿ, ಹೊಸದುರ್ಗ ತಾಲೂಕಿನ ಗವಿ ರಂಗನಾಥಸ್ವಾಮಿ, ಹಾಲುರಾಮೇಶ್ವರ, ಕೂನಿಕೆರೆ ಆಂಜನೇಯ ಸ್ವಾಮಿ ದೇವಸ್ಥಾನ, ಹೊಳಲ್ಕೆರೆ ತಾಲೂಕಿನ ಎಚ್.ಡಿ. ಪುರದ ಹೊರಕೆ ರಂಗನಾಥಸ್ವಾಮಿ, ಕೊಳಾಳ್‌ ಕೆಂಚಾವಧೂತ ದೇವಸ್ಥಾನ ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನೀರಿನ ಬರ ಎದುರಾಗಿದ್ದರಿಂದ ಕ್ಷೇತ್ರಗಳಿಗೆ ಬರುವ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ವದ್ದಿಕೆರೆ ಸಿದ್ದೇಶ್ವರಸ್ವಾಮಿ ದೇವಾಲಯ
ಹಿರಿಯೂರು ತಾಲೂಕಿನ ವದ್ದೀಕೆರೆ ಗ್ರಾಮದ ಸಿದ್ದೇಶ್ವರಸ್ವಾಮಿ ದೇವಸ್ಥಾನವನ್ನು ಏಳನೇ ಶತಮಾನದಲ್ಲಿ ನೊಳಂಬ ರಾಜರ ಆಳ್ವಿಕೆ ಕಾಲದಲ್ಲಿ ನಿರ್ಮಿಸಲಾಗಿದೆ. ವದ್ದೀಕೆರೆ ಸಿದ್ದಪ್ಪನ ರೌದ್ರಾವತಾರದಿಂದ ಸೃಷ್ಟಿಸಿದ ದೇವಸ್ಥಾನದ ಮಜ್ಜನ ಬಾವಿ ಬತ್ತಿ ಹೋಗಿ ನಾಲ್ಕೈದು ತಿಂಗಳುಗಳಾಗಿವೆ. ಮಜ್ಜನ ಬಾವಿಯ ನೀರಿನಿಂದ ಸ್ನಾನ ಮಾಡಿದರೆ ಅನೇಕ ಚರ್ಮ ರೋಗಗಳು ವಾಸಿಯಾಗುವುದಲ್ಲದೆ ಇತರೆ ರೋಗ, ರುಜಿನಗಳು ಕಾಡುವುದಿಲ್ಲ. ಅಲ್ಲದೆ ಉತ್ತಮ ಆರೋಗ್ಯ ಲಭಿಸಲಿದೆ ಎನ್ನುವುದು ಪ್ರತೀತಿ. ಪ್ರತಿನಿತ್ಯ ಸಾವಿರಾರು ಭಕ್ತರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿ ಮಜ್ಜನ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದರು. ಆದರೆ ಮಜ್ಜನ ಬಾವಿ ಸಂಪೂರ್ಣ ಬತ್ತಿ ಹೋಗಿದ್ದು ದೇವರ ಪೂಜೆಗೆ ನೀರಿನ ಸಲುವಾಗಿ ಕೊಳವೆಬಾವಿ ಕೊರೆಸಲಾಗಿದೆ. ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿ ಮಜ್ಜನ ಬಾವಿ ಬತ್ತಿ ಹೋಗಿರುವುದು ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯ
ಕಾಯಕ ಯೋಗಿ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಸಂಖ್ಯ ಭಕ್ತರಿದ್ದಾರೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ನೀರಿನ ಕೊರತೆ ಕಾಡುತ್ತಿದೆ. ರೈತರೊಬ್ಬರ ಖಾಸಗಿ ಕೊಳವೆಬಾವಿಯೇ ಭಕ್ತರಿಗೆ ಆಸರೆಯಾಗಿದೆ. ನಾಯಕನಟ್ಟಿಯ ಹೊರ ಮತ್ತು ಒಳ ಮಠಗಳ ಸಮೀಪ ಇದ್ದ ದೊಡ್ಡ ಮಜ್ಜನ ಬಾವಿಗಳು ಬತ್ತಿ ಹೋಗಿ 15 ವರ್ಷಗಳಾಗಿವೆ. ದೇವಸ್ಥಾನದ ವತಿಯಿಂದ ಕೊರೆಸಲಾದ ಆರು ಕೊಳವೆ ಬಾವಿಗಳು ವಿಫಲವಾಗಿದ್ದು, ಎರಡು ಕೊಳವೆಬಾವಿಗಳಲ್ಲಿ ಸ್ವಲ್ಪ ನೀರು ಬರುತ್ತಿದೆ. ಹಾಗಾಗಿ ರೈತರ ಕೊಳವೆಬಾವಿಯಿಂದ ಸದ್ಯಕ್ಕೆ ನೀರು ಪಡೆಯಲಾಗುತ್ತಿದೆ.

ವಿವಿ ಸಾಗರ ಕಣಿವೆ ಮಾರಮ್ಮ ದೇವಿ ದೇವಾಲಯ
ಜಿಲ್ಲೆಯ ವಿವಿ ಸಾಗರ ಡ್ಯಾಂ ಬುಡಕ್ಕೆ ಹೊಂದಿಕೊಂಡಿರುವ ಕಣಿವೆ ಮಾರಮ್ಮ ದೇವಾಲಯಕ್ಕೂ ನೀರಿನ ತಾಪ ತಟ್ಟಿದೆ. ಸಮೀಪದ ಜಲ್ದಿ ಹೊಳೆಯಿಂದ ನೀರು ತಂದು ಪೂಜೆ ಮಾಡಬೇಕಿತ್ತು. ಆದರೆ ಜಲ್ದಿ ಹೊಳೆ ಸಂಪೂರ್ಣವಾಗಿ ಬತ್ತಿದ್ದರಿಂದಾಗಿ ಚಳ್ಳಕೆರೆಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗೆ ದೇವಸ್ಥಾನದ ಟ್ಯಾಂಕ್‌ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತರು ಕುರಿ, ಮೇಕೆ, ಕೋಳಿಗಳನ್ನು ತಂದು ದೇವಿಗೆ ಅರ್ಪಿಸಿ ಎಡೆ ಮಾಡಿ ಭಕ್ತರಿಗೆ ಊಟ ಬಡಿಸುವ ಪದ್ಧತಿ ಇದೆ. ಆದರೆ ನೀರಿನ ಕೊರತೆಯಿಂದಾಗಿ ಭಕ್ತರು ಪರಿತಪಿಸುತ್ತಿದ್ದಾರೆ. ಸಮೀಪದ ರೈತರ ಜಮೀನು, ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ತಂದು ದೇವಿಗೆ ಕುರಿ, ಮೇಕೆ ಅರ್ಪಿಸಿ ಪ್ರಸಾದ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಕ್ಷೇತ್ರ ಹಾಲುರಾಮೇಶ್ವರ ದೇವಾಲಯ
ಹೊಸದುರ್ಗ ಸಮೀಪದ ಸುಕ್ಷೇತ್ರ ಹಾಲುರಾಮೇಶ್ವರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದ್ದರಿಂದ ದೇವಸ್ಥಾನದ ಆವರಣದಲ್ಲೇ ನಾಲ್ಕು ಕೊಳವೆಬಾವಿ ಕೊರೆಸಲಾಗಿದೆ. ಆ ಪೈಕಿ ಒಂದು ಕೊಳವೆಬಾವಿ ನೀರನ್ನು ಬಳಕೆ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಸ್ನಾನ ಮಾಡಿ ಅಡುಗೆ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಅಲ್ಲದೆ ದೇವಸ್ಥಾನದ ಆವರಣದಲ್ಲಿನ ಗಂಗಾ ಕೊಳದಲ್ಲಿ ಸದ್ಯ ನೀರು ಚಿಮ್ಮುತ್ತಿದ್ದು ಆ ನೀರನ್ನು ಭಕ್ತರು ಮೈಮೇಲೆ ಚಿಮುಕಿಸಿಕೊಂಡು ಧನ್ಯತಾ ಭಾವ ಅನುಭವಿಸುತ್ತಾರೆ. ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹಾಗಾಗಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡು ಬಂದಿದೆ.

Advertisement

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next