ಚಿತ್ರದುರ್ಗ: ಜಿಲ್ಲೆಯಲ್ಲಿ ತಬ್ಲೀಘಿ ಜಮಾತ್ ಸಂಸ್ಥೆಗೆ ಸೇರಿದ 63 ಜನರಿದ್ದಾರೆ. ಆದರೆ, ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಮರ್ಕಜ್ ನಲ್ಲಿ ಭಾಗಿಯಾದವರು ಮೂರು ಜನ ಮಾತ್ರ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು. ಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊರೊನಾ ಸಂದರ್ಭದಲ್ಲಿ ದೆಹಲಿ ಸಭೆಯಲ್ಲಿ ಭಾಗವಹಿಸಿದ್ದವರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಕೆಲವರ ಗಂಟಲು ದ್ರವ ಹಾಗೂ ರಕ್ತ ಮಾದರಿ ಪರೀಕ್ಷೆ ಮಾಡಿದ್ದು, ನೆಗೆಟಿವ್ ವರದಿ ಬಂದಿದೆ ಎಂದರು. ಚಳ್ಳಕೆರೆಯ 23 ಜನ ಗುಜರಾತ್‌ನ ಸೂರತ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಿರಿಯೂರಿನ 8 ಜನ ಕತಾರ್‌ಗೆ ಹೋಗಿ ಬಂದಿದ್ದರು. ಹೊಸದುರ್ಗದಲ್ಲಿ ಗುಜರಾತಿನ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ನಮ್ಮ ಜಿಲ್ಲೆಯವರು ಕೂಡಾ ಬೇರೆ ಬೇರೆ ಜಿಲ್ಲೆ, ರಾಜ್ಯಗಳಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಪದೇ ಪದೇ ಬಂದರೆ ಆರೆಸ್ಟ್: ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಹಿಡಿದು ಕೇಸು ದಾಖಲಿಸಲಾಗಿದೆ. ಎಲ್ಲರ ಮೇಲೆ ಎಫ್‌ಐಆರ್ ದಾಖಲಿಸುವುದು ನಮ್ಮ ಉದ್ದೇಶವಲ್ಲ. ಆದರೆ, ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಪದೇ ಪದೇ ಬಂದವರನ್ನು ಆರೆಸ್ಟ್ ಮಾಡಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ
274 ಪ್ರಕರಣ ದಾಖಲಿಸಿ, 634 ಜನರನ್ನು ಬಂಧಿಸಲಾಗಿದೆ. ಸುಮಾರು 500 ವಾಹನ ಸೀಜ್ ಮಾಡಿದ್ದೇವೆ ಎಂದು ಎಸ್ಪಿ ರಾಧಿಕಾ ತಿಳಿಸಿದರು.
ಈ ಸಂದರ್ಭದಲ್ಲಿ ಸೀಜ್ ಆದ ವಾಹನಗಳನ್ನು ಆನಂತರ ಬಿಡಿಸಿಕೊಳ್ಳುವುದು ಕಷ್ಟವಿದೆ. ಜತೆಗೆ ದೂರು ದಾಖಲಾದರೆ ಎರಡು ವರ್ಷ ಜೈಲು ಗ್ಯಾರೆಂಟಿ ಎಂದು ಎಚ್ಚರಿಕೆ ನೀಡಿದ್ದಾರೆ. ಲಾಕ್ ಡೌನ್ ಉಲ್ಲಂಘನೆ ಮಾಡಿ ಪ್ರಾರ್ಥನೆ, ಸಭೆ ಮಾಡದಂತೆ ಎಲ್ಲ ಧಾರ್ಮಿಕ ಮುಖಂಡರಿಗೂ ತಿಳಿವಳಿಕೆ ನೀಡಿದ್ದೇವೆ. ಆದರೂ ಉಲ್ಲಂಘನೆ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಐದಾರು ದೂರು ದಾಖಲಾಗಿದೆ ಎಂದರು.
ಬಂದೋಬಸ್ತ್ಗೆ ಸಾವಿರಕ್ಕೂ ಹೆಚ್ಚು ಪೊಲೀಸರು: ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ಗಾಗಿ ಎಸ್ಪಿ, 4 ಡಿಎಸ್‌ಪಿ, 15 ಸಿಪಿಐ, 28 ಪಿಎಸ್‌ಐ, 106 ಎಎಸ್‌ಐ, ಎಚ್‌ಸಿ, ಪಿಸಿ ಸೇರಿ ಸುಮಾರು 800 ಹಾಗೂ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಅಂತಾರಾಜ್ಯ ಸಂಪರ್ಕಿಸುವ 8, ಅಂತರ್ ಜಿಲ್ಲೆ ಸಂಪರ್ಕಿಸುವ 8 ಚೆಕ್‌ಪೋಸ್ಟ್ ಸೇರಿ ಒಟ್ಟು 32 ಚೆಕ್‌ಪೋಸ್ಟ್ ನಿರ್ಮಿಸಿದ್ದೇವೆ. ಎಲ್ಲಾ ಕಡೆಗಳಲ್ಲೂ ಮೂರು ಪಾಳಿಗಳಲ್ಲಿ ದಿನದ 24 ಗಂಟೆಯೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು. ಚಿತ್ರದುರ್ಗ ಜಿಲ್ಲೆ ಸಂಪೂರ್ಣ ಸೀಲ್ ಆಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಅನಗತ್ಯವಾಗಿ ಯಾವುದೇ ವಾಹನ, ವ್ಯಕ್ತಿಗಳನ್ನು ಬಿಡುತ್ತಿಲ್ಲ. ಅತ್ಯ ವಸ್ತುಗಳ ವಾಹನಕ್ಕೆ ಮಾತ್ರ ಪ್ರವೇಶ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಎಂ.ಬಿ. ನಂದಗಾವಿ ಇದ್ದರು.
ಲಾಕ್‌ಡೌನ್ ಉಲ್ಲಂಘನೆ ಮಾಡುವವರ ಸಂಪೂರ್ಣ ವಿಳಾಸ, ಮಾಹಿತಿ ಪೋಟೋ, ವಿಡಿಯೋ ಸಹಿತ 9480803100, 9480803179 ಹಾಗೂ 9480800945 ನಂಬರ್ ಗೆ ಕಳಿಸಬಹುದು. ಮಾಹಿತಿ ನೀಡಿದವರ ವಿವರನ್ನು ಗೌಪ್ಯವಾಗಿ ಇಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ನೌಕರರು ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೊಡಗಿರುವವರ ಮೇಲೆ ಹಲ್ಲೆ ಮಾಡುವುದನ್ನು ಸಹಿಸುವುದಿಲ್ಲ. ದೂರು ದಾಖಲಿಸಿ ಕ್ರಮ ಜರುಗಿಸುತ್ತೇವೆ.
ಜಿ. ರಾಧಿಕಾ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ