Advertisement

ಶೂನ್ಯ ಪೀಠಾರೋಹಣ.. ಸಂಭ್ರಮಿಸಿದ ಭಕ್ತ ಗಣ..

02:51 PM Oct 10, 2019 | Naveen |

ಚಿತ್ರದುರ್ಗ: ಮುರುಘಾ ಮಠದ ಹಿಂದಿನ ಪೂಜ್ಯರು ಚಿನ್ನದ ಕಿರೀಟ, ಚಿನ್ನದ ಪಾದುಕೆ, ಆಭರಣ ಧರಿಸಿ ದಸರಾ ಸಂದರ್ಭದಲ್ಲಿ ಪೀಠಾರೋಹಣ ಮಾಡುತ್ತಿದ್ದ ಪರಂಪರೆಗೆ ಡಾ| ಶಿವಮೂರ್ತಿ ಮುರುಘಾ ಶರಣರು ಪೀಠಾಧ್ಯಕ್ಷರಾದ ನಂತರ ಇತಿಶ್ರೀ ಹಾಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಮುರುಘಾ ಮಠದ ರಾಜಾಂಗಣದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆದ ಮುರುಘಾ ಶರಣರ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವ ಪಡೆದಿತ್ತು. ಅ.2ರಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶರಣರ ಶೂನ್ಯ ಪಿ ಪೀಠಾರೋಹಣ ಬಹಳ ಪ್ರಾಮುಖ್ಯತೆ ಪಡೆದಿದ್ದು, ಶೂನ್ಯ ಪೀಠಾರೋಹಣವನ್ನು ಕಣ್ತುಂಬಿಕೊಳ್ಳಲು, ಮಠದಲ್ಲಿರುವ ಚಿನ್ನದ ಕಿರೀಟ, ಪಾದುಕೆಗಳನ್ನು ನೋಡಲು ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದರು.

ಶ್ರೀ ಮುರುಗೀ ಶಾಂತವೀರ ಸ್ವಾಮಿಗಳ ಕರ್ತೃ ಗದ್ದುಗೆಗೆ ಭಕ್ತಿ ಸಮರ್ಪಿಸಿ ರಾಜಾಂಗಣಕ್ಕೆ ಆಗಮಿಸಿದ ಮುರುಘಾ ಶರಣರು, ಚಿನ್ನದ ಕಿರೀಟ ಹಾಗೂ ಪಾದುಕೆಗಳನ್ನು ಭಕ್ತರ ಕೈಗೆ ನೀಡಿ, ರುದ್ರಾಕ್ಷಿ ಕಿರೀಟ ಧರಿಸಿ ಕೈಯಲ್ಲೊಂದು ವಚನ ಸಂಪುಟ ಹಿಡಿದು ಶೂನ್ಯ ಪೀಠಾರೋಹಣ ಮಾಡಿದರು.

ಮುರುಘಾ ಶರಣರನ್ನು ಈ ರೀತಿಯಲ್ಲಿ ಕಾಣುವ ದಿನ ವರ್ಷಕ್ಕೊಮ್ಮೆ ಮಾತ್ರ ಬರುವುದರಿಂದ ಭಕ್ತರು ಸಾಲುಗಟ್ಟಿ ನಿಂತು ಆಶೀರ್ವಾದ ಪಡೆದರು. ಅಲ್ಲಮಪ್ರಭು ದೇವರು, ಅಕ್ಕಮಹಾದೇವಿ ಹಾಗೂ ಬಸವಣ್ಣನ ಭಾವಚಿತ್ರಗಳಿರುವ ಅತ್ಯಂತ ಸೂಕ್ಷ್ಮಕುಸುರಿ ಕಲೆ ಹೊಂದಿರುವ ಪೀಠದಲ್ಲಿ ಶರಣರು ಆಸೀನರಾಗುತ್ತಿದ್ದಂತೆ ಭಕ್ತರು ಹರ್ಷೋದ್ಗಾರ ಮಾಡಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಹರ ಗುರು ಚರ ಮೂರ್ತಿಗಳು, ಎಸ್‌ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ, ಸಿಬ್ಬಂದಿ, ವೀರಶೈವ ಸಮಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸೇರಿದಂತೆ ನಾಡಿನ ವಿವಿಧೆಡೆಯಿಂದ ಭಕ್ತರು ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳು ಮಠದ ರಾಜಾಂಗಣದಲ್ಲಿ ಕಹಳೆ, ಡೊಳ್ಳು ವಾದ್ಯ ಕಲೆ ಪ್ರದರ್ಶಿಸಿದವು.

ಹಸ್ತಪ್ರತಿ, ಬಸವಣ್ಣ-ಅಲ್ಲಮರ ಭಾವಚಿತ್ರ ಮೆರವಣಿಗೆ: ಮುರುಘಾ ಶರಣರ ಶೂನ್ಯ ಪೀಠಾರೋಹಣ ನಂತರ ಅಡ್ಡಪಲ್ಲಕ್ಕಿ ಉತ್ಸವ ಮಾಡುವುದು ವಾಡಿಕೆ. ಇಲ್ಲಿಯೂ ಬದಲಾವಣೆ ತಂದಿರುವ ಮುರುಘಾ ಶರಣರು, ಅಡ್ಡ ಪಲ್ಲಕ್ಕಿಯಲ್ಲಿ ತಾವು ಕುಳಿತುಕೊಳ್ಳುವ ಬದಲು ವಚನಗಳ ಪ್ರಾಚೀನ ಹಸ್ತಪ್ರತಿಗಳು, ಶೂನ್ಯಪೀಠದ ಪ್ರಥಮ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ದೇವರು ಹಾಗೂ ಬಸವಣ್ಣನ ಭಾವಚಿತ್ರವಿಟ್ಟು ಮಠದ ಆವರಣದಲ್ಲಿ ಮೆರವಣಿಗೆ ಮಾಡಿಸಿದರು.

Advertisement

ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಶೂನ್ಯ ಪೀಠಾರೋಹಣ ಹಿನ್ನೆಲೆಯಲ್ಲಿ ಮಠದ ಆವರಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಮಠದ ಕರ್ತೃ ಗದ್ದುಗೆ, ರಾಜಾಂಗಣದಲ್ಲಿ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಬೃಹದಾಕಾರದ ರಂಗವಲ್ಲಿಗಳು ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next