Advertisement

ಸಹಾಯವಾಣಿ ಕೇಂದ್ರಕ್ಕೆ ಕರೆಗಳ ಮಹಾಪೂರ

11:35 AM Apr 25, 2020 | Naveen |

ಚಿತ್ರದುರ್ಗ: ಕೊರೊನಾ ಲಾಕ್‌ಡೌನ್‌ನಿಂದ ಯಾರೂ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ತೆರೆದಿರುವ ಸಹಾಯವಾಣಿ ಕೇಂದ್ರಕ್ಕೆ ಇದುವರೆಗೆ 400ಕ್ಕೂ ಅಧಿಕ ಕರೆಗಳು ಬಂದಿವೆ. ಮಾ. 28 ರಂದು ಕಂಟ್ರೋಲ್‌ ರೂಂ ಆರಂಭಿಸಲಾಗಿದೆ. ಮೊದಲೆಲ್ಲ ವಿಪರೀತ ಕರೆಗಳು ಬರುತ್ತಿದ್ದವು. ಆದರೆ ಸರ್ಕಾರ ಎರಡು ತಿಂಗಳಿಗೆ ಸಾಕಾಗುವಷ್ಟು ಪಡಿತರವನ್ನು ಒಮ್ಮೆಲೆ ವಿತರಿಸುವ ತೀರ್ಮಾನ ತೆಗೆದುಕೊಂಡು ಅದರಂತೆ ಎಲ್ಲರಿಗೂ ಪಡಿತರ ವಿತರಣೆ ಮಾಡಿದ ನಂತರ ಈ ಕರೆಗಳ ಸಂಖ್ಯೆ ಕಡಿಮೆಯಾಗಿವೆ ಎನ್ನುವುದು ವಿಶೇಷ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಿನದ 24 ಗಂಟೆಯೂ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಜಿಪಂ ಉಪ ಕಾರ್ಯದರ್ಶಿ ಡಾ| ರಂಗಸ್ವಾಮಿ ಇದರ ನೋಡಲ್‌ ಅಧಿಕಾರಿಯಾಗಿದ್ದಾರೆ. ಸಹಾಯವಾಣಿ ಕೇಂದ್ರದಲ್ಲಿ ತಲಾ 8 ಗಂಟೆಯಂತೆ ಮೂರು ಶಿಫ್ಟ್ ನಲ್ಲಿ 12 ಜನ ಕೆಲಸ ಮಾಡುತ್ತಿದ್ದಾರೆ. ಸಹಾಯವಾಣಿ ಕೇಂದ್ರದಲ್ಲಿ ಒಟ್ಟು 6 ಪ್ರತ್ಯೇಕ ಸ್ಥಿರ ದೂರವಾಣಿಗಳನ್ನು ಸ್ಥಾಪಿಸಿದ್ದು, ಇಲ್ಲಿಗೆ ಬರುವ ಎಲ್ಲಾ ಕರೆಗಳನ್ನು ಸ್ವೀಕರಿಸಿ ದಾಖಲಿಸಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 200, ಆರೋಗ್ಯ ಇಲಾಖೆ-65, ಆಹಾರ ಇಲಾಖೆ-86 ಕರೆ ಬಂದಿರುವುದು ದಾಖಲಾಗಿದೆ. ಗ್ರಾಮೀಣಾಭಿವೃದ್ಧಿ, ಪೊಲೀಸ್‌, ಕೃಷಿ, ತೋಟಗಾರಿಕೆ, ನಗರ ಸ್ಥಳೀಯ ಸಂಸ್ಥೆಗಳು, ಪಶುಸಂಗೋಪನೆ, ಸಮಾಜಕಲ್ಯಾಣ, ತೂಕ ಮತ್ತು ಅಳತೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳಿಗೆ ಸಂಬಂಧಿಸಿದ ಕರೆಗಳು ಬಂದಿವೆ. ತುರ್ತು ವೈದ್ಯಕೀಯ ಸೇವೆ, ಶವಸಂಸ್ಕಾರ, ಮದುವೆ ಕಾರಣಗಳಿಗಾಗಿ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳಲು ಪಾಸ್‌ ಬಯಸಿ ಫೋನ್‌ ಮಾಡುತ್ತಾರೆ. ಈಗ ಇ-ಪಾಸ್‌ ವ್ಯವಸ್ಥೆ ಜಾರಿಯಾಗಿರುವುದರಿಂದ ಇದರ ಸಂಖ್ಯೆಯೂ ಕಡಿಮೆಯಾಗಬಹುದು ಎನ್ನಲಾಗಿದೆ.

ಅಗತ್ಯವಿದ್ದಲ್ಲಿ, ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲೆಯ ನಾಗರೀಕರು ಕರೆ ಮಾಡಬಹುದು. ಸಹಾಯವಾಣಿ ಸಂಖ್ಯೆಗಳು: 08194-222050, 222044, 222027, 222038, 222056, 222035

ಲಾಕ್‌ಡೌನ್‌ನಿಂದ ಕೂಲಿಕಾರರು, ಹಮಾಲರು, ಸರಕು ಸಾಗಾಣಿಕೆ ವಾಹನಗಳ ಕೊರತೆಯ ನಡುವೆಯೂ ಜಿಲ್ಲೆಯ ಬಡವರಿಗಾಗಿ ನೀಡುತ್ತಿರುವ 2
ತಿಂಗಳ ಉಚಿತ ಪಡಿತರವನ್ನು ಶೇ. 94 ರಷ್ಟು ಪೂರ್ಣಗೊಳಿಸಲಾಗಿದೆ. ಆಹಾರ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಧುಸೂದನ್‌,
ಆಹಾರ ಮತ್ತು ನಾಗರಿಕ ಸರಬರಾಜು
ಇಲಾಖೆ ಉಪನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next