Advertisement

ಪರಿಸರ ಸಂರಕ್ಷಣೆಗೆ ಆಂದೋಲನ ನಡೆಯಲಿ

04:24 PM Jun 17, 2019 | Team Udayavani |

ಚಿತ್ರದುರ್ಗ: ಪರಿಸರ ವಿನಾಶದತ್ತ ಸಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಿಡ ನೆಡುವ ಆಂದೋಲನ ನಡೆಯಬೇಕಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಮರುಳಪ್ಪ ಬಡಾವಣೆಯಲ್ಲಿ ಚೈತನ್ಯ ಕ್ಷೇಮಾಭಿವೃದ್ಧಿ ಸಂಘ, ಭಾರತೀಯ ಮಾನವ ಹಕ್ಕುಗಳ ಸಮಿತಿ ನವದೆಹಲಿಯ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಹಾಗೂ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ ಪಾರ್ಕ್‌ ಉದ್ಘಾಟಿಸಿ ಅವರು ಮಾತನಾಡಿದರು.

ಪಾರ್ಕ್‌ಗಳನ್ನು ನಗರಸಭೆ ಅಭಿವೃದ್ಧಿ ಪಡಿಸಲಿ, ಗಿಡಗಳನ್ನು ಸರ್ಕಾರ ನೆಡಲಿ ಎನ್ನುವ ಉದಾಸೀನ ಮನೋಭಾವ ಬೇಡ. ಎಲ್ಲದಕ್ಕೂ ಸರ್ಕಾರ, ನಗರಸಭೆ, ಪಂಚಾಯತ್‌ಗಳ ಮೇಲೆ ಅವಲಂಬಿಸುವುದು ಸರಿಯಲ್ಲ. ಉದ್ಯಾನವನಗಳಲ್ಲಿ ಗಿಡ ನೆಟ್ಟು ಸಂರಕ್ಷಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿರುವುದರಿಂದ ಪ್ರಕೃತಿಯಲ್ಲಿ ಸಾಕಷ್ಟು ಏರಿಳಿತಗಳಾಗುತ್ತಿವೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳು ಚರ್ಚಿಸುತ್ತಿವೆ. ದೆಹಲಿಯಲ್ಲಿ 46 ಡಿಗ್ರಿ ತಾಪಮಾನ ಇರುವುದರಿಂದ ಪ್ರತಿ ವರ್ಷ ಸಾವಿರಾರು ಜನ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಹೆಚ್ಚು ಗಿಡ-ಮರಗಳನ್ನು ಬೆಳೆಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಾಯುವಿಹಾರ ಮಾಡಿ. ವಿಶ್ರಾಂತಿ ಪಡೆಯಲು ಉದ್ಯಾನವನಗಳಿರಬೇಕು. ಅದಕ್ಕಾಗಿ ಮರುಳಪ್ಪ ಬಡಾವಣೆಯ ಈ ಉದ್ಯಾನವವನ್ನು ಹಸಿರುಮಯವನ್ನಾಗಿ ಮಾಡಿ ಎಂದು ಕರೆ ನೀಡಿದರು.

ಮೆದೇಹಳ್ಳಿ, ಮರುಳಪ್ಪ ಬಡಾವಣೆ, ವಿದ್ಯಾನಗರದಲ್ಲಿ ನೀರಿನ ತೊಂದರೆ ಇರುವುದು ನನ್ನ ಗಮನದಲ್ಲಿದೆ. ಅಮೃತಸಿಟಿ ಯೋಜನೆಯಡಿ ಕೇಂದ್ರದಿಂದ ಚಿತ್ರದುರ್ಗ ನಗರಕ್ಕೆ 140 ಕೋಟಿ ರೂ.ಗಳ ಅನುದಾನ ಬಂದಿದೆ. ಅದರಲ್ಲಿ 112 ಕೋಟಿ ರೂ. ವೆಚ್ಚ ಮಾಡಿ 24*7 ನೀರು ಪೂರೈಕೆ ಮಾಡಲಾಗುವುದು ಎಂದರು.

Advertisement

ಜಿಲ್ಲೆಯಲ್ಲಿ ತೀವ್ರ ಬರ ಕಾಡುತ್ತಿದ್ದು ಕಳೆದ ವರ್ಷ ಟ್ಯಾಂಕರ್‌ ನೀರು ಪೂರೈಕೆ ಮಾಡಿದವರಿಗೆ ಸರ್ಕಾರ ಇನ್ನೂ ಹಣ ನೀಡಿಲ್ಲ. ಬುಧವಾರ ಕೆ.ಯು.ಡಬ್ಲೂ.ಎಸ್‌ ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಲ್ಲಿಗೆ ನೀವು ಕೂಡ ಬನ್ನಿ, ಸಮಸ್ಯೆಗಳ ಕುರಿತು ಚರ್ಚಿಸೋಣ ಎಂದ ಶಾಸಕರು, ಈ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೆ ಕೊಳವೆಬಾವಿ ಕೊರೆಸಿಕೊಡುವುದಾಗಿ ಭರವಸೆ ನೀಡಿದರು.

ಚೈತನ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜ್‌ಕುಮಾರ್‌, ಕಾರ್ಯದರ್ಶಿ ರವೀಶ್ವರ್‌ ಶಿವಪುರ, ಪದಾಧಿಕಾರಿಗಳಾದ ವೆಂಕಟೇಶ್‌, ಚಂದ್ರಣ್ಣ, ಮಂಜುನಾಥ್‌, ರಾಜೇಶ್‌, ವಿರೂಪಾಕ್ಷಪ್ಪ, ಹೇಮಕ್ಕ, ಪದ್ಮಜಾ, ರಮ್ಯ, ಪುಷ್ಪ, ಭಾರತೀಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next