Advertisement

ನೇರ ರೈಲು ಮಾರ್ಗ ಯೋಜನೆ ಕಥೆ-ವ್ಯಥೆ

01:23 PM Jan 25, 2020 | Naveen |

ಚಿತ್ರದುರ್ಗ: ಮಧ್ಯ ಕರ್ನಾಟಕದ ಮಹತ್ವದ ಯೋಜನೆಯಾಗಿರುವ ದಾವಣಗೆರೆ-ಚಿತ್ರದುರ್ಗ -ತುಮಕೂರು ನೇರ ರೈಲು ಮಾರ್ಗ ಯೋಜನೆ ನನೆಗುದಿಗೆ ಬಿದ್ದಿದ್ದು, ಅನುಷ್ಠಾನದಲ್ಲಿ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

Advertisement

ಕಳೆದ ಹಲವು ದಶಕಗಳಿಂದ ಈ ಯೋಜನೆಗಾಗಿ ಜಿಲ್ಲೆಯ ರೈತರು, ವಿದ್ಯಾರ್ಥಿಗಳು, ಹೋರಾಟಗಾರರು ಸಾಕಷ್ಟು ಬೆವರು ಹರಿಸಿದ್ದಾರೆ. ಅಂತಿಮವಾಗಿ ಈ ಹಿಂದೆ ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ನೇರ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ಸೂಚಿಸಿ ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಯೋಜನಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿತ್ತು. ಆದರೆ ಈ ಭರವಸೆ ಹಾಗೆಯೇ ಉಳಿದಿದೆ. ನೇರ ರೈಲು ಮಾರ್ಗ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿವೆ. ಯೋಜನೆಗೆ ಸಮನ್ವಯಕಾರರಾಗಿ ಕೆಲಸ ಮಾಡಲು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರೇ ಆಯ್ಕೆ ಆಗಿದ್ದಾರೆ. ಅಲ್ಲದೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೂಡ ಯೋಜನೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ಸಭೆ ನಡೆಸಿ ಮಾಹಿತಿ ನೀಡುವಂತೆ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯ ಎಂಬಂತಾಗಿದೆ.

ಭೂಸ್ವಾಧೀನ ಪ್ರಕ್ರಿಯೆ 6 ತಿಂಗಳು ವಿಸ್ತರಣೆ: ಒಟ್ಟು 192 ಕಿಮೀ ಉದ್ದದ ನೇರ ರೈಲು ಮಾರ್ಗದಲ್ಲಿ ಚಿತ್ರದುರ್ಗ ಜಿಲ್ಲೆಯ 44 ಗ್ರಾಮಗಳಲ್ಲಿ 1028 ಎಕರೆ ಜಮೀನು ಭೂಸ್ವಾ ಧೀನ ಮಾಡಿ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಬೇಕಿದೆ. ಅಂದಾಜು 1801 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಯೋಜನೆ ಇದಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಲಾ ಶೇ. 50 ರಷ್ಟು ಯೋಜನಾ ವೆಚ್ಚ ಭರಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಗೆ ತುಮಕೂರು ಜಿಲ್ಲೆಯ 38 ಗ್ರಾಮಗಳ 1005 ಎಕರೆ ಜಮೀನು ಬಳಕೆಯಾಗಲಿದೆ. ಈ ಪೈಕಿ ಈಗಾಗಲೇ 135 ಎಕರೆ ಜಮೀನು ರೈಲ್ವೆ ಇಲಾಖೆಗೆ ಹಸ್ತಾಂತರವಾಗಿದೆ. ದಾವಣಗೆರೆ ಜಿಲ್ಲೆಯ 14 ಗ್ರಾಮಗಳಿಂದ 236 ಎಕರೆ ಜಮೀನು ಬಳಕೆಯಾಗಲಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹಿರಿಯೂರು ಹಾಗೂ ಚಿತ್ರದುರ್ಗ ಸೇರಿದಂತೆ ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಈಗಾಗಲೇ 11/1 ಹಾಗೂ ಜೆಎಂಆರ್‌ ಪ್ರಕ್ರಿಯೆ ಮುಗಿದಿದೆ. ಡಿಸೆಂಬರ್‌ ತಿಂಗಳಲ್ಲಿ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ (ಆರ್‌ ಆ್ಯಂಡ್‌ ಆರ್‌) ಮುಗಿಯಬೇಕಾಗಿತ್ತು. ಆದರೆ ರೈಲ್ವೆ ಇಲಾಖೆ ಕಾರಣಕ್ಕಾಗಿ ವಿಳಂಬವಾಗಿದೆ. ಯೋಜನೆಗೆ ಬಳಕೆಯಾಗುವ ಭೂಮಿಗೆ ರೈಲ್ವೆ ಇಲಾಖೆ ಗಡಿ ಗುರುತಿಸಿ (ಬೌಂಡರಿ ಸ್ಟೋನ್‌ ಮತ್ತು ಸೆಂಟರ್‌ ಸ್ಟೋನ್‌) ಕಲ್ಲು ನೆಡಬೇಕಾಗಿತ್ತು. ಆದರೆ ಈ ಪ್ರಕ್ರಿಯೆ 7 ರಿಂದ 8 ತಿಂಗಳು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ರಾಜ್ಯ ಸರ್ಕಾರಕ್ಕೆ ಕಾಯ್ದೆ ಅನುಸಾರ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು 6 ತಿಂಗಳು ಕಾಲಾವಕಾಶ ಕೋರಿದ್ದು, ಸರ್ಕಾರ ಅವಕಾಶ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರ ರೈಲ್ವೆ ಯೋಜನೆ ಬಗ್ಗೆ ಮುತುವರ್ಜಿ ವಹಿಸಬೇಕಿದೆ. ಈ ಮೂಲಕ ಮೂರು ಜಿಲ್ಲೆಗಳ ಜನರ ಕನಸನ್ನು ನನಸು ಮಾಡಬೇಕಿದೆ.

Advertisement

ಜನವರಿ ಅಂತ್ಯದೊಳಗೆ ಚಿತ್ರದುರ್ಗ ತಾಲೂಕು ಹಾಗೂ ಫೆಬ್ರವರಿ ಅಂತ್ಯದೊಳಗೆ ಹಿರಿಯೂರು ತಾಲೂಕು ವ್ಯಾಪ್ತಿಯ (ಆರ್‌ ಆ್ಯಂಡ್‌ ಆರ್‌) ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಪ್ರಕ್ರಿಯೆ ಕೈಗೊಳ್ಳಲಾಗುವುದು.
ಪ್ರಸನ್ನ,
ಉಪವಿಭಾಗಾಧಿಕಾರಿ, ಚಿತ್ರದುರ್ಗ

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next