ಚಿತ್ರದುರ್ಗ: ನಗರದಲ್ಲಿ ನಡೆಯುತ್ತಿರುವ ಒಳಚರಂಡಿ (ಯುಜಿಡಿ) ಕಾಮಗಾರಿ ಹಾಗೂ ಅಮೃತ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಮುಗಿಸಿ ಉದ್ಘಾಟನೆಗೆ ಕರೆಯಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ್, ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಮಂಡಳಿ, ನಗರಸಭೆ, ಪಟ್ಟಣ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಚಿತ್ರದುರ್ಗಕ್ಕೆ 2ನೇ ಹಂತದ ಕುಡಿಯುವ ನೀರು ಪೂರೈಕೆಗಾಗಿ 79 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶಾಂತಿಸಾಗರ ಮತ್ತು ವಾಣಿವಿಲಾಸ ಜಲಾಶಯದಿಂದ ಬರುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಜನರಿಗೆ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಯುಜಿಡಿ ಕಾಮಗಾರಿ ತನಿಖೆಗೆ ಸೂಚನೆ: ನಗರದಲ್ಲಿ 2011 ರಲ್ಲಿ ರೂ.95 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. 85 ಕೋಟಿ ರೂ. ವೆಚ್ಚವಾಗಿದ್ದರೂ ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಡಿಪಿಆರ್ ಪ್ರಕಾರ ಇನ್ನೂ 16 ಸಾವಿರ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ. ಹಾಗಾಗಿ ಯುಜಿಡಿ ಕಾಮಗಾರಿ ಕುರಿತು ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಚಿತ್ರದುರ್ಗದ ಅಲ್ಲಲ್ಲಿ ಯುಜಿಡಿ ಕಾಮಗಾರಿಯನ್ನು ಅಗೆಯಲಾಗಿದೆ. ಇದುವರೆಗೆ 252 ಕಿಮೀ ಪೈಪ್ ಲೈನ್ ಆಗಿದೆ ಅಷ್ಟೆ, ಕೆಲವೆಡೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಬಿಡಲಾಗಿದೆ. ರಸ್ತೆಗಳನ್ನು ತೋಡಿ ಹಾಗೆಯೇ ಬಿಡಲಾಗಿದೆ. ಈಗ ಕಾಮಗಾರಿ ಪೂರ್ಣಗೊಳ್ಳಲು ಮತ್ತೆ 25 ಕೋಟಿ ರೂ. ಅನುದಾನ ಬೇಕೆಂದು ಅ ಧಿಕಾರಿಗಳು ಹೇಳುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಗದಿತ ಕಾಲಮಿತಿಯಲ್ಲಿ ಡಿಪಿಆರ್ ಪ್ರಕಾರ ಕಾಮಗಾರಿ ಮುಗಿಸದಿರುವುದು ಗುತ್ತಿಗೆದಾರರ ತಪ್ಪು. ಬಿಡುಗಡೆ ಮಾಡಿದ ಅನುದಾನ ಹೊರತುಪಡಿಸಿ ಹೆಚ್ಚುವರಿಯಾಗಿ 25 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಟ್ಟರೆ ಕೊಡಲು ಸಾಧ್ಯವಿಲ್ಲ. ನಿಗದಿತ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಕಾಮಗಾರಿಯ ಬಗ್ಗೆ ತನಿಖೆ ಮಾಡಿಸಲಾಗುವುದು. ಈ ಬಗ್ಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಅರಸನಕೆರೆ ಅಭಿವೃದ್ಧಿಗೆ 4.78 ಕೋಟಿ: ಮಠದ ಕುರುಬರಹಟ್ಟಿ ಬಳಿ ಇರುವ ಅರಸನ ಕೆರೆ ಅಭಿವೃದ್ಧಿಗೆ 4.78 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಚಿವ ಬೈರತಿ ತಿಳಿಸಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿಯವರು ಅರಸನಕೆರೆಗೆ ನೀರು ಬಿಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಡಿಸಿ ಆರ್. ವಿನೋತ್‌ಪ್ರಿಯಾ, ಶಾಸಕರಾದ ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಜಿ.ಎಚ್. ತಿಪ್ಪಾರೆಡ್ಡಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ಕೇಶವ್, ನಗರಾಭಿವೃದ್ಧಿ ಪ್ರಾ ಧಿಕಾರದ ಆಯುಕ್ತ ಸೋಮಶೇಖರ್, ಡಿಯುಡಿಸಿ ಯೋಜನಾ ನಿರ್ದೇಶಕ ರಾಜಶೇಖರ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಖಾಸಗಿ ಲೇಔಟ್‌ಗೆ ಅನುಮತಿ ಕೊಡಲ್ಲ
ಖಾಸಗಿಯವರಿಗೆ ಲೇಔಟ್ ಅಭಿವೃದ್ಧಿ ಮಾಡಲು ಅನುಮತಿ ನೀಡುವುದು ಬೇಡ ಎಂದು ಅ ಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿರುವುದಾಗಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ್ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಬಡಾವಣೆ ನಿರ್ಮಿಸಿ ವಿತರಣೆ ಮಾಡಬೇಕು. ಇದರಿಂದ ಪ್ರಾ ಧಿಕಾರಕ್ಕೆ ಸಂಪನ್ಮೂಲ ಬರುತ್ತದೆ. ಆದ್ದರಿಂದ ಖಾಸಗಿಯವರಿಗೆ ಅನುಮತಿ ಬೇಡ ಎಂದು ಎಲ್ಲಾ ಸಭೆಗಳಲ್ಲೂ ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿದ್ದಾಗಿ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡುವ ಬಡಾವಣೆಗಳಲ್ಲಿ ಪತ್ರಕರ್ತರಿಗೆ ಶೇ. 5 ರಷ್ಟು ನಿವೇಶನಗಳನ್ನು ಮೀಸಲಿಡಬೇಕು ಎಂಬ ಮಹತ್ವದ ತೀರ್ಮಾನವನ್ನು ಕ್ಯಾಬಿನೆಟ್ ನಲ್ಲಿ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಆದೇಶ ಹೊರಡಿಸುತ್ತೇವೆ. ನಗರ ವ್ಯಾಪ್ತಿಯಲ್ಲಿ ಬರುವ ರೈತರ ಜತೆ ಒಡಂಬಡಿಕೆ ಮಾಡಿಕೊಂಡು 50:50ರ ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿ ಪಡಿಸುವಯೋಜನೆ ರೂಪಿಸಿದ್ದು, ಬಳ್ಳಾರಿಯಲ್ಲಿ ಈಗಾಗಲೇ ಪ್ರಕ್ರಿಯೆ ನಡೆದಿದೆ ಎಂದರು.