ಚಿತ್ರದುರ್ಗ: ರಾಜ್ಯದಲ್ಲಿ 6.75 ಲಕ್ಷ ನೇಕಾರ ಕುಟುಂಬಗಳಿವೆ. ಆದರೆ ಸರ್ಕಾರ ಇದರಲ್ಲಿ 1.2 ಲಕ್ಷ ಕುಟುಂಬಗಳಿಗೆ ಮಾತ್ರ 2 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದೆ. ಎಲ್ಲ ನೇಕಾರ ಕುಟುಂಬಗಳಿಗೂ ಪರಿಹಾರ ನೀಡಬೇಕು. ಇಲ್ಲವಾದರೆ ಪರಿಹಾರದ ಅಗತ್ಯವೇ ಇಲ್ಲ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾರತಮ್ಯ ಮಾಡಿ ಸರ್ಕಾರ ಭಿಕ್ಷೆಯಂತೆ ನೀಡುವ ಪರಿಹಾರ ಬೇಕಾಗಿಲ್ಲ. ಮಗ್ಗದ ಮೇಲೆ ಎರಡು ದಿನ ಕುಳಿತು ದುಡಿದರೆ ಅಷ್ಟು ಸಂಪಾದನೆ ಮಾಡುವ ಶಕ್ತಿ ನೇಕಾರರಿಗೆ ಇದೆ ಎಂದರು.
ಕೋವಿಡ್ ಸಂದರ್ಭದಲ್ಲಿ ನೇಕಾರ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜನವರಿಯಿಂದ ಜುಲೈವರೆಗೆ ರಾಜ್ಯದಲ್ಲಿ 26 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಿಗುವ ಪರಿಹಾರವನ್ನೇ ನೇಕಾರರಿಗೂ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ. ನೇಕಾರರ ನಿಯೋಗ 9 ಬಾರಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದೆ.
ಆದರೆ ಈವರೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದರು. ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಕೆ.ಇ. ರಾಧಾಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಹೊಸ ಶಿಕ್ಷಣ ನೀತಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಿಸಲಿದೆ. ಶ್ರೀಮಂತರಿಗೆ ಮಾತ್ರ ಅನುಕೂಲ ಮಾಡಿಕೊಡುವ ಕಾರ್ಪೊರೇಟ್ ಶಿಕ್ಷಣವಾಗಿದೆ ಎಂದು ಆರೋಪಿಸಿದರು. ದೇಶದ ಶೇ. 47 ರಷ್ಟು ಜನರು ನಗರ ವಲಸೆ ಪ್ರವೃತ್ತಿ ಹೊಂದಿದ್ದಾರೆ. ಈ ವಲಸೆ ಮಕ್ಕಳ ಬಗ್ಗೆ ಶಿಕ್ಷಣ ನೀತಿಯಲ್ಲಿ ಯಾವುದೇ ಪ್ರಸ್ತಾಪವಿಲ್ಲ.
ಹಿಂದಿ ಭಾಷೆಯನ್ನು ಹೇರುವ ಹುನ್ನಾರ ಇದರಲ್ಲಿದೆ. ಸಂಸತ್ತಿನಲ್ಲಿ ಚರ್ಚೆ ಮಾಡದೇ ಶಿಕ್ಷಣ ನೀತಿ ಅನುಷ್ಠಾನ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಮಾನ್ಯತೆ ನೀಡಿದ ಪ್ರಾದೇಶಿಕ ಭಾಷೆಯಲ್ಲಿ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಜ್ಞಾಪೂರ್ವಕವಾಗಿ ಕನ್ನಡ ವಿರೋಧಿ ಸುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್‌ಕುಮಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಡಿ.ಕುಮಾರ್, ಮುಖಂಡರಾದ ಲೋಕೇಶ್ ನಾಯಕ, ಶಿವಕುಮಾರ್ ಇದ್ದರು.