ಚಿತ್ರದುರ್ಗ: ನೂತನ ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ಸ್ವ ಕ್ಷೇತ್ರ ಶಿಗ್ಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸುವುದು ಚಿತ್ರದುರ್ಗ ಜಿಲ್ಲೆಯ ಹೆದ್ದಾರಿಯಲ್ಲೇ. ಸಿಎಂ ಆಗುವ ಮೊದಲು ಸಚಿವರಾಗಿದ್ದ ವೇಳೆ ಶಿಗ್ಗಾವಿಗೆ ವಾರ, ಹದಿನೈದು ದಿನಕ್ಕೊಮ್ಮೆಯಾದರೂ ಬಸವರಾಜ ಬೊಮ್ಮಾಯಿ ಪ್ರವಾಸ ಮಾಡುತ್ತಿದ್ದರು. ಈ ವೇಳೆ ಸಹಜವಾಗಿ ಜಿಲ್ಲೆಯ ಯಾವುದಾದರೂ ಒಂದು ಕಡೆ ಹೆದ್ದಾರಿ ಬದಿ ಕಾರು ನಿಲ್ಲಿಸುವುದು, ಸ್ಥಳೀಯರ ಜತೆ ಮಾತನಾಡುವುವುದು ವಾಡಿಕೆ.
ಹಾಗಾಗಿ ಜಿಲ್ಲೆಯ ವಾತಾವರಣವನ್ನು ಸಿಎಂ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ವಿಶೇಷ ನಿರೀಕ್ಷೆ ಇದೆ. ಬರದ ಬೇಗೆಯಲ್ಲಿ ಬೆಂದ ಚಿತ್ರದುರ್ಗ ಜಿಲ್ಲೆಯ ಜನ ಈ ಹಿಂದಿನ ಎಲ್ಲಾ ಸರ್ಕಾರಗಳು, ಮುಖ್ಯಮಂತ್ರಿಗಳ ಬಗ್ಗೆ ಭ್ರಮ ನಿರಸನಗೊಂಡು ಕಳೆದ ಅವ ಧಿಯಲ್ಲಿ ಬಿಜೆಪಿಗೆ ಜೈಕಾರ ಹಾಕಿದ್ದಾರೆ. ಈ ನಿರೀಕ್ಷೆ ಹುಸಿಗೊಳಿಸದಿರಲು ಇನ್ನೆರಡು ವರ್ಷ ಮಾತ್ರ ಕಾಲಾವ ಧಿ ಇದೆ. ಈಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅ ಧಿಕಾರಕ್ಕೇರಿದ್ದಾರೆ. ಅವರ ಅವ ಧಿಯಲ್ಲಿ ಜಿಲ್ಲೆಗೆ ವಿಶೇಷ ನೆರವು, ಪ್ಯಾಕೇಜ್ ಅಥವಾ ಬಾಕಿ ಇರುವ ಯೋಜನೆಗಳಿಗೆ ಅನುದಾನ ಒದ ಗಿಸುವುದು ಸೇರಿದಂತೆ ಸಾಕಷ್ಟು ನಿರೀಕ್ಷೆಗಳಿವೆ.
ಜಿಲ್ಲೆಯ ನೀರಾವರಿ ಯೋಜನೆ ಮಾಹಿತಿ ಗೊತ್ತು: ಜಿಲ್ಲೆಯ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂಚಿಂಚೂ ಮಾಹಿತಿ ಇದೆ. ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿ ಸದಸ್ಯರ ಹೆಸರು ಹಿಡಿದು ಕರೆಯುವುದು, ಗುರುತಿಸಿ ಮಾತನಾಡಿಸುವಷ್ಟು ಒಡನಾಟವಿದೆ. ಈ ಹಿಂದೆ ಐದು ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿದ್ದ ಬೊಮ್ಮಾಯಿ, ಭದ್ರಾ ಮೇಲ್ದಂಡೆ ಯೋಜನೆಯ ಆಗು ಹೋಗುಗಳನ್ನು ಗಮನಿಸುತ್ತಿದ್ದರು.
ಈಗ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದು ಬಾಕಿ ಇದೆ. ತ್ವರಿತವಾಗಿ ಕಾಮಗಾರಿ ಮುಗಿಸಿ ಜಿಲ್ಲೆಗೆ ನೀರು ಹರಿಸುವುದು ಹಾಲಿ ಮುಖ್ಯಮಂತ್ರಿಗಳ ಮುಂದಿರುವ ಗುರಿ. ಇದರೊಟ್ಟಿಗೆ ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ದಾವಣಗೆರೆ-ಚಿತ್ರದುರ್ಗ-ತುಮಕೂ ರು ನೇರ ರೈಲು ಮಾರ್ಗದ ಕಾಮಗಾರಿ ಚುರುಕು ಪಡೆದುಕೊಳ್ಳಬೇಕಿದೆ. ನೇರ ರೈಲು ಮಾರ್ಗಕ್ಕೆ ಈ ಹಿಂದೆ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಅವ ಧಿಯಲ್ಲಿ ರಾಜ್ಯದಿಂದ ಅರ್ಧ ಪಾಲು ಕೊಡುವುದಾಗಿ ಘೋಷಣೆ ಮಾಡಿದ್ದರು. ಈಗ ಬೊಮ್ಮಾಯಿ, ಯಡಿಯೂರಪ್ಪ ಉತ್ತರಾಧಿ ಕಾರಿಯಾಗಿರುವುದರಿಂದ ರೈಲ್ವೆ ಮಾರ್ಗ ಯೋಜನೆ ವೇಗ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು: ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಸಾಕಷ್ಟು ಅಪಘಾತ ನಡೆಯುತ್ತವೆ. ಇದರಿಂದ ಸಾವು ನೋವು ಸಂಭವಿಸುತ್ತಿವೆ. ಜತೆಗೆ ಜಿಲ್ಲೆಯಲ್ಲಿ ಬಹುತೇಕ ಪರಿಶಿಷ್ಟರು, ಹಿಂದುಳಿದವರೇ ಇದ್ದು, ದೊಡ್ಡ ಆಸ್ಪತ್ರೆಗಳ ವೆಚ್ಚ ಭರಿಸಲು ಕಷ್ಟಪಡಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾದರೆ ಅನುಕೂಲವಾಗಲಿದೆ ಎನ್ನುವುದು ಜನರ ಅಪೇಕ್ಷೆ.
ಆದರೆ ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಡಾ| ಕೆ. ಸುಧಾಕರ್ ಅವರು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವುದಾಗಿ ಹೇಳಿದ್ದರು. ಇದು ವ್ಯಾಪಕ ಆಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ನೂತನ ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.