ಚಿತ್ರದುರ್ಗ: ಬಿಜೆಪಿ ಎಂದೂ ಅಧಿ ಕಾರಕ್ಕಾಗಿ ಹೋರಾಡಲಿಲ್ಲ. ದೇಶ ಮೊದಲು, ಅಧಿಕಾರ ನಂತರ ಎನ್ನುವ ಸಿದ್ಧಾಂತ ನಮ್ಮ ಪಕ್ಷದ್ದು. ಪಕ್ಷದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುವವರನ್ನು ಹುಡುಕಿ ಅಧಿಕಾರ ನೀಡುವ ಸಂಪ್ರದಾಯ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಎಸ್‌ಎಸ್‌ಕೆಎಸ್ ಸಭಾಂಗಣದಲ್ಲಿ ಜೆಡಿಎಸ್ ಮುಖಂಡ ವಿ.ಎಲ್. ಪ್ರಶಾಂತ್ ತಮ್ಮ ಕುಟುಂಬ ಹಾಗೂ ಬೆಂಬಲಿಗರ ಜತೆಗೆ ಬಿಜೆಪಿಗೆ ಸೇರ್ಪಡೆಯಾಗುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ಕಟ್ಟುವಲ್ಲಿ ಬಿಜೆಪಿ ಎಂದೂ ಹಿಂದೆ ಬಿದ್ದಿಲ್ಲ. ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ, ಶ್ಯಾಮಪ್ರಸಾದ್ ಮುಖರ್ಜಿಯವರು ಕಟ್ಟಿದ ಪಕ್ಷ ಇದಾಗಿದೆ. ಸಿದ್ಧಾಂತಕ್ಕಾಗಿ ಕೆಲಸ ಮಾಡುವ ಪಕ್ಷ ನಮ್ಮದು. ವಿ.ಎಲ್. ಪ್ರಶಾಂತ್ ಅವರ ತಂದೆ ಹಿಂದೆ ಜಿಪಂ ಸದಸ್ಯರಾಗಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಬಿಜೆಪಿ ಸೇರಿದ್ದಾರೆ ಎಂದು ಸ್ವಾಗತಿಸಿದರು.
ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ಮಾತನಾಡಿ, ಬಿಜೆಪಿಯ ಸಿದ್ಧಾಂತ ಒಪ್ಪಿ ವಿ.ಎಲ್. ಪ್ರಶಾಂತ್ ತಮ್ಮ ಕುಟುಂಬ ಹಾಗೂ ಐವತ್ತು ಯುವಕರ ತಂಡದೊಂದಿಗೆ ಬಿಜೆಪಿ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯಕರ್ತರು, ಚುನಾಯಿತ ಪ್ರತಿನಿ ಧಿಗಳಿಗೆ ಕೊರತೆಯಿಲ್ಲ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕಡೆ ಪಕ್ಷದ ಧ್ವಜ ಹಾರಾಡುತ್ತಿದೆ.
ಇದು ಮುಗಿಲೆತ್ತರಕ್ಕೆ ಹಾರಬೇಕು. ಪಕ್ಷವನ್ನು ವಿಭಜಿಸುವ ಕೆಲಸ ಬಿಜೆಪಿಯಲ್ಲಿಲ್ಲ ಎಂದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್ ಮಾತನಾಡಿ, ಪಕ್ಷದಲ್ಲಿ ಪ್ರಮುಖರು ಕಾರ್ಯಕರ್ತರನ್ನು ಕೈಹಿಡಿದು ಬೆಳೆಸುತ್ತಾರೆ. ಸೃಜನಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿದ್ದ ವಿ.ಎಲ್. ಪ್ರಶಾಂತ್ ಅಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತು ಬಿಜೆಪಿ ಸೇರಿದ್ದಾರೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಎ. ಮುರುಳಿ ಅಧ್ಯಕ್ಷತೆ ವಹಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರೀನಾಥ್, ವಿಭಾಗ ಸಂಘಟನಾ ಕಾರ್ಯದರ್ಶಿ ಜ್ಯೇಷ್ಠ ಪಡಿವಾಳ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್, ಮುಖಂಡರಾದ ಭೀಮಸಮುದ್ರದ ಜಿ.ಎಸ್. ಅನಿತ್, ರಘುಚಂದನ್, ವೆಂಕಟೇಶ್ ಯಾದವ್, ನಗರಸಭೆ ಸದಸ್ಯ ಶಶಿ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.