ಚಿತ್ರದುರ್ಗ: ಲಸಿಕೆ ಹಾಕಿಸಿಕೊಳ್ಳುವುದರಿಂದ ಸೋಂಕಿನ ಅಪಾಯ ಕಡಿಮೆ. ಇದರಿಂದ ಮೂರನೇ ಅಲೆಯ ಮೂಲಕ ಸೋಂಕು ತಗುಲುವುದನ್ನು ಶೇ.99ರಷ್ಟು ತಡೆಯಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಆರ್. ರಂಗನಾಥ್ ಹೇಳಿದರು.
ನಗರದ ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕೆ ವಿತರಣಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಮುಖ್ಯ. ಎಲ್ಲ ವ್ಯಾಕ್ಸಿನ್ ಕೂಡ ಸುರಕ್ಷಿತವೇ ಆಗಿರುತ್ತವೆ. ಯಾರೂ ಸಹ ಹಿಂಜರಿಕೆ ಮಾಡುವುದು ಬೇಡ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್-19 ಹೇಗೆ ಬಂತು, ಅದರ ಅಪಾಯ ಏನು ಎಂಬುದು ನಮಗೆ ಗೊತ್ತಿರುವ ವಿಚಾರ. ಕಳೆದ ಒಂದೂವರೆ ವರ್ಷದಿಂದ ನಮ್ಮ ಜೊತೆಗಿದೆ. ಇನ್ನೂ ಎರಡು ವರ್ಷ ನಮ್ಮ ಜೊತೆ ಇರುತ್ತದೆ ಎಂದರು.
ಲಾಕ್‌ಡೌನ್ ತೆರವುಗೊಳಿಸಿದ್ದರೂ ಕೋವಿಡ್ ಇನ್ನೂ ಹೋಗಿಲ್ಲ. ಈ ಸಂದರ್ಭದಲ್ಲಿ ಎಚ್ಚರ ಮುಖ್ಯ. ಕೊರೊನಾ ನಮಗೆ ದೊಡ್ಡ ಪಾಠ ಕಲಿಸಿದೆ. ಈ ಮೊದಲು ಅನೇಕ ರೋಗಗಳಿದ್ದವು. ಎಚ್‌ಐವಿ, ಡೆಂಘೀ, ಏಡ್ಸ್ ಈಗಲೂ ಇವೆ. ಆದರೆ ಎಚ್ಚರದಿಂದಿರಬೇಕು. ಸುರಕ್ಷಿತ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ| ಜಿ. ಪ್ರಶಾಂತ್ ಮಾತನಾಡಿ, ಪ್ರಪಂಚದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ ಇದಾಗಿದೆ. ನಮ್ಮ ದೇಶದ ಕೋವಿನ್ ಆ್ಯಪ್ ಪ್ರಪಂಚದಲ್ಲಿ ಹೆಚ್ಚು ಮನ್ನಣೆ ಪಡೆದಿದೆ. ಇದು ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸಿದೆ. ವೈರಸ್ ಬರುವುದನ್ನು ತಡೆಗಟ್ಟಲು ಲಸಿಕೆ ಹಾಕಿಸಿಕೊಳ್ಳಬೇಕು. ಪ್ರಪಂಚದಲ್ಲಿಯೇ ಅತಿ ಹೆಚ್ಚು ಲಸಿಕೆ ಅಭಿಯಾನ ಆರಂಭಿಸಿದ್ದು ಭಾರತ ಎಂದು ಹೇಳಲು ಹೆಮ್ಮೆ ಅನ್ನಿಸುತ್ತದೆ ಎಂದರು.
ಈಗ ವೈರಸ್ ರೂಪಾಂತರಗೊಂಡಿದ್ದು, ಡೆಲ್ಟಾ ಪ್ಲಸ್ ಬರುತ್ತಿದೆ. ಇದನ್ನು ತಡೆಗಟ್ಟಲು ಲಸಿಕೆ ಬಹಳ ಮುಖ್ಯ. ಗರ್ಭಿಣಿಯರಿಗೆ, ಚಿಕ್ಕ ಮಕ್ಕಳಿಗೆ ಲಸಿಕೆ ಮುಂದಿನ ದಿನಗಳಲ್ಲಿ ಬರುತ್ತದೆ. ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರೆ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಇತರರಿಗೆ ಹರಡುವುದನ್ನು ತಡೆಯಬಹುದು. ಲಸಿಕೆಯಿಂದ ಲಸಿಕೆಗೆ ಅಂತರವನ್ನು ಹೆಚ್ಚಿಸಬೇಕು. ಅನ್‌ಲಾಕ್ ಇದೆ ಎಂದು ಅನಗತ್ಯವಾಗಿ ಹೊರಗೆ ಓಡಾಡಬಾರದು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೆ„ಸರ್ ಬಳಕೆ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಎಸ್.ಜೆ.ಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ಗೌರಮ್ಮ ಮಾತನಾಡಿ, ಮೂರನೇ ಅಲೆ ತುಂಬಾ ಅಪಾಯಕಾರಿಯಾಗಿದೆ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಯಾವುದೇ ಲಸಿಕೆ ಕಂಡುಹಿಡಿಯಲು ಹತ್ತಾರು ವರ್ಷ ಬೇಕಾಗುತ್ತದೆ. ಆದರೆ ಕೋವಿಡ್ ಲಸಿಕೆ ಅತಿಬೇಗನೆ ಕಂಡುಹಿಡಿದದ್ದು ಸಂತಸದ ವಿಚಾರ ಎಂದರು.
ಡಾ| ಈಶ್ವರಪ್ಪ ಮಾತನಾಡಿ, ಮಾರಣಾಂತಿಕ ರೋಗವಾದ ಕೋವಿಡ್ ವಿರುದ್ಧ ವೈದ್ಯರು ಪ್ರಾಣದ ಹಂಗು ತೊರೆದು ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ನಾವು ವೈದ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.