Advertisement

30 ಸಾವಿರ ಬೀಜದುಂಡೆ ಬಿತ್ತನೆ: ಶಾಸಕ ತಿಪ್ಪಾರೆಡ್ಡಿ

09:41 PM Jul 04, 2021 | Team Udayavani |

ಚಿತ್ರದುರ್ಗ: ಬಿಜೆಪಿ ಕಾರ್ಯಕರ್ತರು ತಯಾರಿಸಿರುವ ಸುಮಾರು 30 ಸಾವಿರ ಬೀಜದುಂಡೆಗಳನ್ನು ಭಾನುವಾರ ಚಂದ್ರವಳ್ಳಿ, ಜೋಗಿಮಟ್ಟಿ ಮತ್ತಿತರೆ ಪ್ರದೇಶಗಳಲ್ಲಿ ಬಿತ್ತನೆ ಮಾಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಗುವುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು. ಬಿಜೆಪಿ ಕಾರ್ಯಕರ್ತರು ತಯಾರಿಸಿರುವ ಬೀಜದುಂಡೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಡಾ| ಶ್ಯಾಮಪ್ರಸಾದ್‌ ಮುಖರ್ಜಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಪಕ್ಷದ ಯುವಮೋರ್ಚಾ ಕಾರ್ಯ ಕರ್ತರು ಬೀಜದ ಉಂಡೆಗಳನ್ನು ತಯಾರು ಮಾಡುತ್ತಿದ್ದು, ರಾಜ್ಯದೆಲ್ಲೆಡೆ ಬಹಳ ಉತ್ಸಾಹದಿಂದ ಈ ಕಾರ್ಯ ನಡೆಯುತ್ತಿದೆ. ಈಗಾಗಲೇ ಎಲ್ಲೆಲ್ಲಿ ಬೀಜದ ಉಂಡೆಗಳನ್ನು ಹಾಕಬೇಕು ಎನ್ನುವುದನ್ನು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಭಾಗವಹಿಸಲಿದ್ದಾರೆ ಎಂದರು.

ಭಾರತ ಕೈಗಾರಿಕೆ ಇನ್ನಿತರೆ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಹಸಿರನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಜಾಗತಿಕ ಹವಾಮಾನದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ನಾಯಕತ್ವ ವಹಿಸಿ ಕೆಲಸ ಮಾಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ದೇಶಾದ್ಯಂತ ಅರಣ್ಯದ ಪ್ರಮಾಣವನ್ನು ಶೇ. 24ಕ್ಕೆ ವಿಸ್ತರಿಸಲಾಗಿದೆ. ಜತೆಗೆ ವನ್ಯಜೀವಿಗಳನ್ನು ರಕ್ಷಿಸಿ ಅವುಗಳ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಪಕ್ಷವೂ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ, ನಗರಸಭಾ ಸದಸ್ಯರಾದ ಹರೀಶ್‌, ಶಶಿಧರ್‌, ಸುರೇಶ್‌, ಪಕ್ಷದ ಮುಖಂಡರಾದ ವೆಂಕಟೇಶ ಯಾದವ್‌, ಹನುಮಂತೇಗೌಡ, ನಾಗರಾಜ್‌ ಬೇದ್ರೆ, ರೇಖಾ ಮತ್ತಿತರರು ಇದ್ದರು.

ಭೂಮಿಗೆ ಬೀಜದುಂಡೆ ಸಮರ್ಪಣೆ ಇಂದು: ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ಜನ್ಮಜಯಂತಿ ಪ್ರಯುಕ್ತ ನಡೆಯುತ್ತಿರುವ ಸೇವಾ ಸಪ್ತಾಹದ ಅಂಗವಾಗಿ ಬೀಜದುಂಡೆಗಳ ಭೂಮಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮವನ್ನು ಜು. 4 ರಂದು ಬೆಳಿಗ್ಗೆ 8 ಗಂಟೆಗೆ ಜೋಗಿಮಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಬೀಜದುಂಡೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ಜಿಲ್ಲಾಧ್ಯಕ್ಷ ಎ. ಮುರಳಿ, ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಡಿ. ಶೇಖರ್‌, ಪೂರ್ಣಿಮಾ ಶ್ರೀನಿವಾಸ್‌, ಸಂಸದರಾದ ಎ. ನಾರಾಯಣಸ್ವಾಮಿ, ಡಾ| ಜಿ.ಎಂ. ಸಿದ್ದೇಶ್ವರ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ವಿಭಾಗ ಸಂಘಟನಾ ಕಾರ್ಯದರ್ಶಿ ಜ್ಯೇಷ್ಠ ಪಡಿವಾಳ್‌, ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್‌ ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next