ನಾಯಕನಹಟ್ಟಿ: ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಮೊಳಕಾಲ್ಮೂರು ಹಾಗೂ ನಾಯಕನಹಟ್ಟಿ ಪಟ್ಟಣಗಳಲ್ಲಿ ತಲಾ 3 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು. ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ವರ್ಗದ ಜನರಿಗೆ ನೇರ ಸಾಲ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗದಲ್ಲಿ ಮದಕರಿ ಪ್ರತಿಮೆ ಸಮೀಪ 10 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಪಟ್ಟಣಗಳ ಬಹುದಿನದ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದರು. ಕೊರೊನಾ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಮಾಜಕಲ್ಯಾಣ ಇಲಾಖೆಯಿಂದ ಸಹಾಯಧನವನ್ನು ಸಂಘಗಳ ಮೂಲಕ ನೇರವಾಗಿ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರ, ಸಣ್ಣ ವ್ಯಾಪಾರಗಳನ್ನು ನಿರ್ವಹಿಸಲು ಅಗತ್ಯವಾದ ಸಾಲವನ್ನು ನೇರವಾಗಿ ಚೆಕ್ ಮೂಲಕ ನೀಡಲಾಗುತ್ತಿದೆ.
881 ಜನರಿಗೆ ನೇರ ಸಾಲವನ್ನು ನೀಡಲಾಗಿದೆ. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ವ್ಯವಹಾರಗಳನ್ನು ನಿರ್ವಹಿಸಬಹುದು ಇದಕ್ಕಾಗಿ 57 ಉದ್ಯಮ ಶೀಲ ವ್ಯಕ್ತಿಗಳಿಗೆ ಸಾಲ ನೀಡಲಾಗಿದೆ. ಕೊಳವೆಬಾವಿ ಕೊರೆಸಲು ಗಂಗಾ ಕಲ್ಯಾಣ ಯೋಜನೆಯಲ್ಲಿ 7700 ಜನರಿಗೆ ಸಹಾಯ ಮಾಡಲಾಗುವುದು ಎಂದು ತಿಳಿಸಿದರು. 670 ಕೋಟಿ ರೂ. ವೆಚ್ಚದಲ್ಲಿ ಜಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರಕಾರ ಒಪ್ಪಿಗೆ ನೀಡಿದೆ. ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ಹರಿಸುವ ಪ್ರಮುಖವಾದ ಉದ್ದೇಶ ಹೊಂದಿದ್ದೇನೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೆಚ್ಚಾಗಿರುವ ಕ್ಷೇತ್ರಗಳಿಗೆ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಯೋಜನೆ ಅಂತಿಮ ಹಂತದಲ್ಲಿದೆ.
ಪೈಪ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಜಾಕ್‌ವೆಲ್ ಅಳವಡಿಸುವ ಕಾರ್ಯ ಬಾಕಿ ಇದೆ. ಅದು ಪೂರ್ಣಗೊಂಡ ನಂತರ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ತಿಳಿಸಿದರು. ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಇಲಾಖೆಯಿಂದ ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡಿ ಯಂತ್ರಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ. ವಿದ್ಯಾವಂತ ಯುವಕರಿಗೆ ಸಬ್ಸಿಡಿ ಯೋಜನೆಯಲ್ಲಿ ಸಾಲ ನೀಡಲಾಗುವುದು.
ನಿಗಮದ ವತಿಯಿಂದ ಜಮೀನು ರಹಿತ ಜನರಿಗೆ ಜಿಲ್ಲಾ ಧಿಕಾರಿಗಳ ಮೂಲಕ ಭೂಮಿ ನೀಡಲಾಗುವುದು. ಈ ವರ್ಷ ಉತ್ತಮವಾಗಿ ಮಳೆಯಾಗಿದೆ. ಹೀಗಾಗಿ ಕೊಳವೆಬಾವಿಗಳಲ್ಲಿ ನೀರು ದೊರೆಯಲಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಲಾಗುವುದು. ಚಾಲನಾ ಪರವಾನಗಿ ಹೊಂದಿರುವ ವಿದ್ಯಾವಂತರಿಗೆ ವಾಹನಗಳನ್ನು ಸಬ್ಸಿಡಿ ಯೋಜನೆಯಲ್ಲಿ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಟಿ ಸಮುದಾಯದ ಜನರಿಗೆ ಸಹಾಯಧನದ ಚೆಕ್‌ಗಳನ್ನು ವಿತರಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್, ಬಿಜೆಪಿ ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ, ಮುಖಂಡರಾದ ಜಯಪಾಲಯ್ಯ, ಎಂ.ವೈ.ಟಿ. ಸ್ವಾಮಿ, ಎನ್. ಮಹಾಂತಣ್ಣ, ಪಿ. ಶಿವಣ್ಣ, ಡಿ.ಆರ್. ಬಸವರಾಜ್ ಮತ್ತಿತರರು ಇದ್ದರು.