ಹೊಸದುರ್ಗ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೈ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ ಶ್ರೀರಾಂಪುರ ಹೋಬಳಿಗೆ ಒದಗಿಸಲಾದ ಉಚಿತ ಆಂಬ್ಯುಲೆನ್ಸ್ ಸೇವೆಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಷ್ಟೆಲ್ಲಾ ಕೆಲಸ ಮಾಡಿದರೂ ವೈದ್ಯರನ್ನು ದೂರುವುದು ಸಹಜ. ಆಪಾದನೆಗೆ ಕಿವಿಗೊಡದೆ ಒಳ್ಳೆಯ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು. ಜನರು ಉದಾಸೀನ, ಭಯಕ್ಕೆ ಒಳಗಾಗಿ ಸೋಂಕಿನಿಂದ ಸಾವನ್ನಪ್ಪು ತ್ತಿದ್ದಾರೆ.
ತಾಲೂಕಿನಲ್ಲಿ ಸೋಂಕು ಹೆಚ್ಚಾಗುತ್ತಲೇ ಇದೆ. ಕೊರೊನಾ ಸೋಂಕು ಅನೇಕರ ಜೀವ ಬಲಿ ಪಡೆದಿದೆ. ಇಂತಹ ಸಮಯದಲ್ಲಿ ಸೋಂಕಿತರಿಗೆ ತುರ್ತ ಚಿಕಿತ್ಸೆಯ ಅಗತ್ಯವಿದೆ. ಬಿ.ವೈ. ವಿಜಯೇಂದ್ರ ಮೈ ಸೇವಾ ಸಂಸ್ಥೆ ಮೂಲಕ ನೀಡಿರುವ ಆಬ್ಯುಲೆನ್ಸ್ ಅನ್ನು ಎಸ್. ಲಿಂಗಮೂರ್ತಿ ಅವರು ತಾಲೂಕಿನ ಜನರ ಸೇವೆಗೆ ಸಮರ್ಪಣೆ ಮಾಡಿದ್ದಾರೆ. ಈ ಸೇವೆ ಸದ್ಬಳಕೆಯಾಗಲಿ ಎಂದು ಆಶಿಸಿದರು.
ಭಗೀರಥ ಮಠದ ಡಾ| ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ತಾಲೂಕಿನ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದಾರೆ. ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಕ್ಷೇತ್ರದ ಜನರೊಂದಿಗೆ ಕಷ್ಟ ಕಾಲದಲ್ಲಿ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿ, ರಾಜ್ಯ ಸರಕಾರ ನೀಡಿರುವ ಅಧಿಕಾರವನ್ನು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಕಳೆದ ಒಂದೂವರೆ ತಿಂಗಳಿನಿಂದ ಅನೇಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸ್ವಂತ ಖರ್ಚಿನಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸಿದ್ದರಿಂದ ತಾಲೂಕು ಕೇಂದ್ರದಿಂದ ದೂರ ಇರುವ ಶ್ರೀರಾಂಪುರ ಹೋಬಳಿಗೆ ಹೆಚ್ಚಿನ ಸೇವೆ ಸಿಗಲಿದೆ. ಕ್ಷೇತ್ರದ ಜನರ ಹಿತದೃಷ್ಟಿಯಿಂ¨ ಶಾಶ್ವತವಾದ ಆಕ್ಸಿಜನ್ ಘಟಕ ನಿರ್ಮಾಣ ಹಂತದಲ್ಲಿದೆ. ಪ್ರತಿ ಗ್ರಾಮಗಳಿಗೆ ತೆರಳಿ ಎರಡು ಸಾವಿರ ಕೋವಿಡ್ ಕಿಟ್ ಹಾಗೂ ಆಹಾರ ಕಿಟ್ ನೀಡಿರುವುದಾಗಿ ತಿಳಿಸಿದರು.
ಕುಂಚಿಟಿಗ ಮಠದ ಡಾ| ಶಾಂತವೀರ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಡಾ| ಸುನೀಲ್, ಬಿಜೆಪಿ ವಿಭಾಗೀಯ ಪ್ರಭಾರಿ ಸುರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಮಂಜುನಾಥ್, ತುಂಬಿನಕೆರೆ ಬಸವರಾಜ್, ಶಿವನೇಕಟ್ಟೆ ಶಶಿ ಇದ್ದರು.