ಬೆಂಗಳೂರು: ಭಾನುವಾರ ನಿಧನ ಹೊಂದಿದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಇಂದು ಕನಕಪುರ ರಸ್ತೆಯಲ್ಲಿರುವ ಸಹೋದರ ಧ್ರುವ ಸರ್ಜಾರ ಫಾರ್ಮ್ ಹೌಸಿನಲ್ಲಿ ಇಂದು ನಡೆಯಲಿದೆ.
39 ವರ್ಷ ಪ್ರಾಯದ ಚಿರಂಜೀವಿ ಸರ್ಜಾ ಅವರು ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉಸಿರಾಟದ ತೊಂದರೆಯ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳಿದಿದ್ದಾರೆ.
ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಚಿರು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ತಾತ ಶಕ್ತಿಪ್ರಸಾದ್ ಅವರ ತವರೂರಾದ ಜಕ್ಕೇನಹಳ್ಳಿಯಲ್ಲಿ ಚಿರು ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದ ನೆಲಗುಳಿ ಗ್ರಾಮದಲ್ಲಿರುವ ಸಹೋದರ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.
ಸದ್ಯ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಅವರ ಮನೆಯ ಮುಂದೆ ಇಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು, ಪೊಲೀಸರು ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದಾರೆ.
ಹಿರಿಯ ಕಲಾವಿದ ಶಕ್ತಿಪ್ರಸಾದ್ ಅವರ ಮೊಮ್ಮಗನಾಗಿರುವ ಚಿರಂಜೀವಿ ಸರ್ಜಾ ಅವರು, ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ತಂದೆ, ತಾಯಿ ಸೇರಿದಂತೆ ಬಂಧು- ಬಳಗ ಹಾಗೂ ಅಪಾರ ಗೆಳೆಯರು, ಅಭಿಮಾನಿ ವರ್ಗವನ್ನು ಅಗಲಿದ್ದಾರೆ.