ಚಿರಂಜೀವಿ ಸರ್ಜಾ ಇದೀಗ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಶರಣ್ ಅಭಿನಯದ “ವಿಕ್ಟರಿ-2′ ಚಿತ್ರವನ್ನು ನಿರ್ಮಿಸಿದ್ದ ತರುಣ್ ಶಿವಪ್ಪ, ಚಿರಂಜೀವಿ ಸರ್ಜಾ ಅವರ ಅಭಿನಯದ ಹೊಸ ಸಿನಿಮಾಗೆ ನಿರ್ಮಾಪಕರು. ಇನ್ನು, ನವೀನ್ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ, ಅನುಭವ ಇಲ್ಲವೆಂದಲ್ಲ, ಈ ಹಿಂದೆ ತರುಣ್ ಶಿವಪ್ಪ ನಿರ್ಮಾಣದ “ಮಾಸ್ ಲೀಡರ್’, “ರೋಜ್’ ಚಿತ್ರದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಹಿಂದೆ ಗಣೇಶ್ ಅಭಿನಯದ “ಸಂಗಮ’ ಮತ್ತು “ಕೂಲ್’ ಚಿತ್ರದಲ್ಲೂ ಕೆಲಸ ಮಾಡಿದ ಅನುಭವದ ಮೇಲೆ ಚಿರಂಜೀವಿ ಸರ್ಜಾ ಚಿತ್ರಕ್ಕೆ ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಫೆಬ್ರವರಿ 12 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಈ ಕುರಿತು ಮಾಹಿತಿ ನೀಡಿದ ನಿರ್ಮಾಪಕ ತರುಣ್ ಶಿವಪ್ಪ, “ಚಿರಂಜೀವಿ ಸರ್ಜಾ ಅವರೊಂದಿಗೆ ಈ ಹಿಂದೆಯೇ ಒಂದು ಚಿತ್ರ ಮಾಡಬೇಕೆಂಬ ಬಗ್ಗೆ ಯೋಚನೆ ಇತ್ತು.
ಆ ಕುರಿತು ಮಾತುಕತೆಯೂ ನಡೆದಿತ್ತು. ಈಗ ಅದಕ್ಕೆ ಕಾಲ ಕೂಡಿಬಂದಿದೆ. ಅಂದಹಾಗೆ, ಇದೊಂದು ಕಾಮನ್ ಮ್ಯಾನ್ ಕಥೆ. ಪ್ರತಿಯೊಬ್ಬರೂ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬಹುದು ಎಂಬ ಅಂಶ ಚಿತ್ರದ ಹೈಲೈಟ್. ಇಲ್ಲೊಂದು ಕೇಬಲ್ ಕಥೆ ಕೂಡ ಸಾಗಲಿದೆ. ಯೂಥ್‌ಗೆ ಸ್ಫೂರ್ತಿಯಾಗುವಂತಹ ಕಥೆ ಇಲ್ಲಿದೆ. ಇಲ್ಲೂ ಕೂಡ ಪ್ರೀತಿ, ಸೆಂಟಿಮೆಂಟ್, ಗೆಳೆತನ ಇತ್ಯಾದಿ ವಿಷಯಗಳು ಇರಲಿವೆ.
ಇನ್ನು, ಕಥೆಯನ್ನು ತಮಿಳಿನ ವಿದ್ಯಾದರ್ ಬರೆದಿದ್ದಾರೆ. ಇವರು ತಮಿಳಿನ “ನ್ಯೂ’ ಚಿತ್ರ ನಿರ್ದೇಶಿಸಿದವರು. ಕನ್ನಡಕ್ಕೆ ಸರಿಹೊಂದುವ ಕಥೆ ಆಗಿರುವುದರಿಂದ, ಇದನ್ನೇ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಇನ್ನುಳಿದಂತೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ನಿರ್ಮಾಪಕ ತರುಣ್ ಶಿವಪ್ಪ. ಈ ಚಿತ್ರಕ್ಕೆ ಬಾಲು ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಇವರಿಗೆ ಕನ್ನಡದ ಮೊದಲ ಚಿತ್ರವಿದು.
ಈ ಹಿಂದೆ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ಸ್ ನಿರ್ದೇಶನದ ಹಾಲಿವುಡ್ ಚಿತ್ರಕ್ಕೆ ಕ್ಯಾಮೆರಾ ವಿಭಾಗದಲ್ಲಿ ಕೆಲಸ ಮಾಡಿದ್ದವರು. ತಮಿಳಿನ ಅನೇಕ ಸ್ಟಾರ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇನ್ನುಳಿದಂತೆ “ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸಂಗೀತ ನೀಡಿದ್ದ ಋತ್ವಿಕ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದ ಹುಡುಗಿಯೇ ಇಲ್ಲಿ ನಾಯಕಿ ಎಂಬುದನ್ನು ಸ್ಪಷ್ಟಪಡಿಸುವ ನಿರ್ಮಾಪಕರು, ಸುಮಾರು 60 ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ.