ಪಾಟ್ನಾ: ಉಪೇಂದ್ರ ಕುಶ್ವಾಹಾ ಅವರ ಆರ್‌ಎಲ್‌ಎಸ್‌ಪಿ ಎನ್‌ಡಿಎ ತೊರೆದ ಬೆನ್ನಲ್ಲೆ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಕೂಡ ಬಿಜೆಪಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಇದಕ್ಕೆ ಸಾಕ್ಷಿಯಾಗಿ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಅವರು ಟ್ವೀಟ್‌ವೊಂದನ್ನು ಮಾಡಿದ್ದು,’ಟಿಡಿಪಿ ಮತ್ತು ಆರ್‌ಎಲ್‌ಎಸ್‌ಪಿ ಬಿಟ್ಟು ಹೋದ ಬಳಿಕ ಎನ್‌ಡಿಎ ಸೂಕ್ಷ್ಮವಾಗಿ ಸಾಗುತ್ತಿದೆ. ತಡವಾಗಿ ಹೋಗುವ ಮುನ್ನ ಬಿಜೆಪಿ ಮಿತ್ರಪಕ್ಷ ಗಳ ವಿಚಾರಗಳನ್ನು ಬಗೆಹರಿಸಬೇಕು ಮತ್ತು ಗೌರವಯುತವಾಗಿ ನಡೆಸಿಕೊಳ್ಳಬೇಕು’ ಎಂದು ಬರೆದಿದ್ದಾರೆ.
ಬಿಹಾರದಲ್ಲಿ ಸೀಟು ಹಂಚಿಕೆ ಕುರಿತಾಗಿ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಎಲ್‌ಜೆಪಿ ನಾಯಕ ‘ಬಿಜೆಪಿ ನಾಯಕರು ಸೀಟು ಹಂಚಿಕೆಗಳ ಕುರಿತು ಸಭೆಗಳು ನಡೆಯುತ್ತಲೆ ಇವೆ ಆದರೆ ಇದುವರೆಗೆ ಯಾವುದೇ ಗಟ್ಟಿ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಒಮ್ಮತವನ್ನು ನಿರ್ಧರಿಸದೇ ಹೋದಲ್ಲಿ ಅದು ಸೋಲಿಗೆ ಕಾರಣವಾಗಬಹುದು’ ಎಂದಿದ್ದಾರೆ.
ಬಿಹಾರದಲ್ಲಿ 40 ಸ್ಥಾನಗಳ ಪೈಕಿ ಜೆಡಿಯು ಮತ್ತು ಬಿಜೆಪಿ ತಲಾ 16 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಅಮಿತ್ ಶಾ ಮತ್ತು ನಿತೀಶ್ ಕುಮಾರ್ ಅವರು ಹೇಳಿಕೆ ನೀಡಿದ್ದರು. ಆ ಬಳಿಕ ಎಲ್‌ಜೆಪಿ ‘ನಾವು ಯಾವುದೇ ತ್ಯಾಗಕ್ಕೂ ಸಿದ್ದವಿಲ್ಲ’ ಎಂದಿತ್ತು. ಅಮಿತ್ ಶಾ ಅವರು ಬಿಹಾರದಲ್ಲಿ ‘ಎನ್‌ಡಿಎ ಹಾಗೇಯೇ ಉಳಿಯುತ್ತದೆ’ ಎಂದಿದ್ದರು.
ಪಾಸ್ವಾನ್ ಅವರ ಸಹೋದರ ಪರಸ್ ಅವರು’ನಾವು ಕಳೆದ ಬಾರಿ ಸ್ಪರ್ಧಿಸಿದ್ದ ಎಲ್ಲಾ 7 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. 7 ರ ಪೈಕಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಒಂದು ಕ್ಷೇತ್ರದಲ್ಲಿ 7 ಸಾವಿರ ಮತಗಳ ಅಂತರದ ಸೋಲು ಅನುಭವಿಸಿದ್ದೆವು ಎಂದರು. ಲೋಕಸಭಾ ಚುನಾವಣೆ ಬಳಿಕ ನಮ್ಮ ಗ್ರಾಫ್ ಕಡಿಮೆಯಾಗಿಲ್ಲ. ನಾವು ನಮ್ಮ ಪಾಲನ್ನು ಪಡೆಯದೇ ಇರಲು ಯಾವುದೇ ಕಾರಣಗಳಿಲ್ಲ’ ಎಂದಿದ್ದಾರೆ.