ಉಡುಪಿ: ನನ್ನ ಮೊದಲ ಪರ್ಯಾಯದ ಅವಧಿಯಲ್ಲಿ ಆರಂಭಿಸಿದ್ದ “ಚಿಣ್ಣರ ಸಂತರ್ಪಣೆ’ಗೆ (ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನ ಪ್ರಸಾದ) ಈ ಪರ್ಯಾಯದ ಅವಧಿಯಲ್ಲಿ ಮತ್ತಷ್ಟು ಶಾಲೆಗಳಿಂದ ಬೇಡಿಕೆ ಬಂದಿದ್ದು, ಚಿಣ್ಣರ ಸಂತರ್ಪಣೆಯನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸ ಲಾಗುತ್ತಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶುಕ್ರವಾರ ತಿಳಿಸಿದ್ದಾರೆ.
ಆರಂಭದ ದಿನಗಳಲ್ಲಿ 108 ಶಾಲೆಗಳಿಗೆ “ಚಿಣ್ಣರ ಸಂತರ್ಪಣೆ’ ದೊರೆಯುತ್ತಿತ್ತು. ಅನಂತರ ಈ ಸಂಖ್ಯೆ 132ಕ್ಕೆ ಏರಿದೆ. ಈಗ ಮತ್ತೆ 20ರಷ್ಟು ಶಾಲೆಗಳಿಂದ ಬೇಡಿಕೆ ಬಂದಿರುವ ಕಾರಣ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಗಂಗೊಳ್ಳಿಯ ವರೆಗಿನ ಶಾಲೆಗಳಿಗೆ ಇದರ ಸೌಲಭ್ಯ ದೊರೆಯುತ್ತದೆ ಎಂದರು.
ತುಳಸಿ ಅರ್ಚನೆಗೆ ಭಕ್ತ ಜನ ಸ್ಪಂದನೆ: ಶ್ರೀಕೃಷ್ಣ ದೇವರಿಗೆ ಎರಡು ವರ್ಷಗಳ ಕಾಲ ಪ್ರತಿ ದಿನ ಲಕ್ಷ ತುಳಸಿ ಅರ್ಚನೆಗೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆಯು ತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತುಳಸಿದಳಗಳನ್ನು ತಂದುಕೊಡುತ್ತಿದ್ದಾರೆ. ಅದೇ ರೀತಿ ಅಖಂಡ ಭಜನ ಕಾರ್ಯ ಕ್ರಮಕ್ಕೂ ಉತ್ತಮ ಸ್ಪಂದನೆ ಇದೆ. ಘಟ್ಟ ಪ್ರದೇಶದ ಭಜನ ತಂಡಗಳು ಕೂಡ ಪಾಲ್ಗೊಳ್ಳುತ್ತಿವೆ ಎಂದು ಶ್ರೀಗಳು ತಿಳಿಸಿದರು.
ಸ್ವತ್ಛತೆಗೆ ಆದ್ಯತೆ: ಮಠದ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು. 100 ಶೌಚಾಲಯಗಳನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು. ಒಳಚರಂಡಿ ಕೆಲಸದತ್ತವೂ ಗಮನಹರಿಸಲಾಗುವುದು ಎಂದು ಶ್ರೀಗಳು ತಿಳಿಸಿದರು. ಮಠದ ದಿವಾನ ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.
ಚಿನ್ನ ಹೊದಿಕೆಗೆ ಸುವರ್ಣ ತುಳಸೀದಳ
ನನ್ನ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆ ಆಚ್ಛಾದಿಸುವ ಸಂಕಲ್ಪ ಮಾಡಿದ್ದು, ಇದರ ನೀಲನಕ್ಷೆ ಸಿದ್ಧವಾಗಿದೆ. ಭಕ್ತರ ಪೂರ್ಣ ಸಹಕಾರ ನಿರೀಕ್ಷಿಸಿದ್ದೇವೆ. ತಲಾ ಒಂದು ಗ್ರಾಂನಂತೆ ಒಂದು ಲಕ್ಷ ಮಂದಿ ಭಕ್ತರು ಒಂದೊಂದು ಚಿನ್ನದ ತುಳಸೀದಳ ಅರ್ಪಿಸಿದರೆ 100 ಕೆ.ಜಿ. ಚಿನ್ನ ಸಂಗ್ರಹವಾಗಲಿದೆ. ಇದು ಚಿನ್ನದ ಹೊದಿಕೆಯ ಸಂಕಲ್ಪವನ್ನು ಸಾಕಾರಗೊಳಿಸಲು ಅನುಕೂಲವಾಗಲಿದೆ. ಚಿನ್ನದ ದಳಗಳು ಶ್ರೀಕೃಷ್ಣ ಮಠದಲ್ಲಿಯೇ ಲಭ್ಯವಿವೆ. ಈ ಯೋಜನೆ ಪೂರ್ಣಗೊಳ್ಳಲು ಒಂದು ವರ್ಷ ಬೇಕು. ಭಕ್ತರಿಂದ ಉತ್ತಮ ಸ್ಪಂದನೆ ದೊರೆತಿದೆ.
– ಶ್ರೀ ವಿದ್ಯಾಧೀಶ ತೀರ್ಥರು, ಪರ್ಯಾಯ ಪಲಿಮಾರು ಮಠ