ಅಂದು ಶಾಲೆಯಲ್ಲಿ ಹಬ್ಬದ ಪ್ರಯುಕ್ತ ಗಾಳಿಪಟ ಹಾರಿಸುವ ಕಾರ್ಯಕ್ರಮವಿತ್ತು. ಅಚ್ಚರಿಯೆಂದರೆ ಬೆಳಗ್ಗೆ 8 ಗಂಟೆಯಾಗಿದ್ದರೂ ಆಗಸದಲ್ಲಿ ಸೂರ್ಯ ಮೂಡಿರಲಿಲ್ಲ. ಇನ್ನೂ ಕತ್ತಲು ಕವಿದಿತ್ತು. ಅಭಿ ಮತ್ತು ಆರತಿ ಅವರ ಕೋಣೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಅಮ್ಮನಿಗೆ ಗಾಬರಿಯಾಗಿತ್ತು. ಅವರನ್ನು ಹುಡುಕುತ್ತಾ ಶಾಲೆಗೆ ಬಂದರು…
ಬೆಳಿಗ್ಗೆ ಎಂಟು ಗಂಟೆಯಾದರೂ ಇನ್ನೂ ಕತ್ತಲು ಕತ್ತಲು! ಬೆಳಕೇ ಇಲ್ಲ. ಅಭಿ ಮತ್ತು ಆರತಿಯ ಕೋಣೆಯಲ್ಲಿ ಅಮ್ಮ ಇಣುಕಿ ನೋಡಿದರು. ಮಕ್ಕಳಿಬ್ಬರೂ ಕಾಣಿಸಲಿಲ್ಲ. ಅವರಿಗೆ ಗಾಬರಿಯೇ ಆಯಿತು. ಇನ್ನೂ ಸರಿಯಾಗಿ ಬೆಳಕಾಗಿಯೇ ಇಲ್ಲ. ಶಾಲೆಯಲ್ಲಿ ಎಂಟು ಗಂಟೆಗೆ ಸಂಕ್ರಾಂತಿ ಹಬ್ಬದ ಆಚರಣೆ ಎಂದಿದ್ದರು, ಇಷ್ಟು ಬೇಗ ಶಾಲೆಗೆ ಹೋಗಿರಬಹುದು ಎಂದುಕೊಳ್ಳುತ್ತ ಅಮ್ಮ ಶಾಲೆಯ ಕಡೆಗೆ ಹೆಜ್ಜೆ ಹಾಕಿದರು. ಶಾಲೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಪೋಷಕರು ವಿಶೇಷ ಕಾರ್ಯಕ್ರಮದ ಆಚರಣೆಯ ಕಾರಣ, ಮಕ್ಕಳನ್ನೆಲ್ಲ ಕರೆದುಕೊಂಡು ಬಂದಿದ್ದರು. ಶಾಲೆಯ ವಾಹನಗಳೂ ಬಂದವು.
ಪ್ರಾಂಶುಪಾಲರು ವೇದಿಕೆಯತ್ತ ತೆರಳಿದರು. ಕಾರ್ಯಕ್ರಮದ ಸಂಯೋಜಕಿ ತಾರಾ ಟೀಚರ್ ಕಾಣಿಸಿಕೊಂಡರು. ಕಾರ್ಯಕ್ರಮದ ಅತಿಥಿಗಳೂ ಬಂದಾಯಿತು. ಇನ್ನೂ ಕತ್ತಲು’ಕತ್ತಲು. ಆರಂಭಿಸೋಣವೇ? ಎಲ್ಲ ಮಕ್ಕಳೂ ಬಂದಿದ್ದಾರೆ’ “ಆರತಿ ಮತ್ತು ಅಭಿ ಬಂದಿಲ್ಲ. ಅವರೇ ಕಾರ್ಯಕ್ರಮವನ್ನು ನಡೆಸಬೇಕಿತ್ತು’ ಎಂದರು ತಾರಾ ಟೀಚರ್. ಅಸಹಾಯಕತೆಯಿಂದ ಪ್ರಿನ್ಸಿಪಾಲ್ ಮೇಡಂ ಕೂಡ ನೋಡಿದರು. ವೇದಿಕೆ ಸಜ್ಜಾಯಿತು. ಮಕ್ಕಳನ್ನೆಲ್ಲ ಸಾಲು ಸಾಲಾಗಿ ಕೂರಿಸಲಾಯಿತು. ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಆರತಿ ಮತ್ತು ಅಭಿ ಎಲ್ಲಿದ್ದರೂ ಬರಬೇಕೆಂದು ಘೋಷಿಸಲಾಯಿತು.
ಕತ್ತಲೆಯ ವಾತಾವರಣದಲ್ಲಿ ಬೆಳಕೊಂದು ಮೂಡಿತು. ಎಲ್ಲ ನೋಡುತ್ತಿದ್ದಂತೆ ಶಾಲೆಯ ಅಂಗಳ ಬೆಳಕಿನಿಂದ ತುಂಬಿತು. ಎಲ್ಲರೂ “ಹೋ’ ಎಂದರು. ವೇದಿಕೆಯ ಮೇಲೆ ಆರತಿ ಮತ್ತು ಅಭಿ ಕಾಣಿಸಿಕೊಂಡರು. ಎಲ್ಲೆಲ್ಲೂ ಬೆಳಕು ಈಗ! “ಬಾ ಸೂರ್ಯಣ್ಣ… ಬಾ… ಬಾ’ ಎನ್ನುತ್ತ ಆರತಿ ಮತ್ತು ಅಭಿ ವ್ಯಕ್ತಿಯೊಬ್ಬರನ್ನು ವೇದಿಕೆಯ ಮುಂಭಾಗಕ್ಕೆ ಕರೆತಂದರು. ಪ್ರಿನ್ಸಿಪಾಲ್ ಮೇಡಂ ಕೂಡ ಏನು ನಡೆಯುತ್ತಿದೆ ಎಂದು ಕೇಳುವಷ್ಟರಲ್ಲೆ ಅಭಿ ಮೈಕ್ ಹಿಡಿದು ಹೇಳಿದ, “ಗೆಳೆಯರೇ, ಇಂದಿನ ಸಂಕ್ರಾಂತಿ ಹಬ್ಬಕ್ಕೆ ನಮ್ಮ ಸೂರ್ಯಣ್ಣನೇ ಬಂದಿದ್ದಾನೆ. ಚಪ್ಪಾಳೆಯ ಮೂಲಕ ಸ್ವಾಗತಿಸೋಣ.’ ಎಲ್ಲ ಮಕ್ಕಳೂ ಟಪ-ಟಪ ಚಪ್ಪಾಳೆ ಹೊಡೆದರು.
ಬಂದ ವ್ಯಕ್ತಿ ಆ ಶಾಲೆಯ ಸಮವಸ್ತ್ರ ಹಾಕಿದ್ದರು. ತಲೆಯ ಮೇಲೆ ಅಗಲದ ಹ್ಯಾಟು. ಮೂಗಿನ ಮೇಲೆ ಕಪ್ಪು ಕನ್ನಡಕ. “ನಿಮಗೆಲ್ಲ ಆಶ್ಚರ್ಯ ಆಗುತ್ತಿರಬಹುದಲ್ಲವೆ? ಸೂರ್ಯಣ್ಣ ಇಲ್ಲಿಗೆ ಹೇಗೆ ಬಂದ ಅಂತ? ನಾನು ಹೇಳುತ್ತೇನೆ ಕೇಳಿ. ನೆನ್ನೆ ನಾನು- ಆರತಿ ಸೇರಿಕೊಂಡು ಮನೆಯಲ್ಲಿ ಇಂದಿನ ಹಬ್ಬಕ್ಕೆ ಗಾಳಿಪಟ ತಯಾರಿಸುತ್ತಿದ್ದೆವು. ನಮ್ಮಮ್ಮ ಗಾಳಿಪಟದ ಮೇಲೆ ಕೂತ್ಕೊಂಡು ಹಾರುತ್ತ ಸೂರ್ಯ ಲೋಕಕ್ಕೂ ಹೋಗಬಹುದು ಎಂದರು. ನಾವು ಹಾಗೇ ಮಾಡಿದೆವು. ಸೂರ್ಯಣ್ಣ ಮೊದಲು ನಮ್ಮ ಜೊತೆ ಬರೋದಕ್ಕೆ ಆಗೋಲ್ಲ ಅಂದ. ನಾವು ಒತ್ತಾಯಿಸಿದೆವು.
ಬೇರೆಯವರಿಗೆ ಗೊತ್ತಾಗಬಾರದು ಅಂತ ನಮ್ಮ ಶಾಲೆಯ ಸಮವಸ್ತ್ರವನ್ನೇ ಸೂರ್ಯಣ್ಣನಿಗೆ ಉಡಿಸಿದ್ವಿ. ತಲೆಯ ಮೇಲೆ ನೋಡಿ ಬಿಸಿಲಿಗೆ ದೊಡ್ಡ ಹ್ಯಾಟಿದೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿದ್ವಿ. ಎಲ್ಲರೂ ನನ್ನ ಜೊತೆ ಹೇಳಿ “ವೆಲ್‌ಕಮ್ ಸೂರ್ಯಣ್ಣ!’ ಎಲ್ಲರೂ ಒಟ್ಟಿಗೆ ಹೇಳಿದರು, “ವೆಲ್‌ಕಮ್ ಸೂರ್ಯಣ್ಣ, ನಮ್ಮ ಶಾಲೆಗೆ ನಿನಗೆ ಆದರದ ಸ್ವಾಗತ’. ಈಗ ಎಲ್ಲ ಕಡೆ ಬೆಳಕಾದುದರಿಂದ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಿಕ್ಷಕರೆಲ್ಲ ಬೆರಗಾಗಿ ನೋಡುತ್ತಿದ್ದರು.
“ಸೂರ್ಯಣ್ಣ, ನೀನೇನಾದರೂ ಹೇಳುತ್ತೀಯ?’, ‘ಹೌದು, ನನಗೆ ತುಂಬಾ ಖುಷಿಯಾಗಿದೆ, ಮಕ್ಕಳೇ. ನಾನು ಹೀಗೆಲ್ಲ ಬರುವಂತಿಲ್ಲ. ಆರತಿ ಮತ್ತು ಅಭಿ ಇವರ ಪ್ರೀತಿಯ ಕರೆಗೆ ಓಗೊಟ್ಟು ಬಂದಿದ್ದೀನಿ. ಸಂಕ್ರಾಂತಿ ಹಬ್ಬ ಚೆನ್ನಾಗಿ ಆಚರಿಸಿ. ನಾನಿನ್ನು ಬರುತ್ತೇನೆ. ಎಲ್ಲರಿಗೂ ಬೈ ಬೈ… ಟಾಟಾ…’ಎಂದು ಕೈ ಬೀಸುತ್ತಾ ಸೂರ್ಯಣ್ಣ ಮರೆಯಾಗಿಯೇಬಿಟ್ಟ. ಎಲ್ಲ “ಹೋ’ ಎಂದು ಮತ್ತೆ ಕೂಗಿದರು. ಅಭಿ-ಆರತಿ ಕೂಡ ಕೈಬೀಸಿದರು…
ಗೇಟಿನ ಬಳಿ ಇದ್ದ ಅಭಿ ಮತ್ತು ಆರತಿಯ ತಾಯಿಗೆ ಇದೆಲ್ಲವನ್ನೂ ನೋಡಿ ಬಹಳ ಖುಷಿಯಾಯಿತು.
— ಮತ್ತೂರು ಸುಬ್ಬಣ್ಣ