ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಾಷ್ಟಮಿ ಸಮಯದಲ್ಲಿ ಒಂದೇ ದಿನ ಕೃಷ್ಣವೇಷಧಾರಿಗಳು ಸೇರಿದಾಗ ಚಿಣ್ಣರ ಲರವಕಂಡುಬಂದರೆ ಅದೇ ಕೃಷ್ಣ ನಾಡಿನಲ್ಲಿ ಈಗ ನಿತ್ಯ ಚಿಣ್ಣರ ಕಲರವ ಕಂಡುಬರುತ್ತಿದೆ.
2002ರಲ್ಲಿ ಪರ್ಯಾಯದ ಅವಧಿ ಶ್ರೀಕೃಷ್ಣಮಠದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟ ಯೋಜನೆಯನ್ನು ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆರಂಭಿಸಿದಾಗ ಅದೇ ವರ್ಷ ಗ್ರಾಮೀಣ ಭಾಗದ ಮಕ್ಕಳಿಗೆ ಸಾಂಸ್ಕೃತಿಕ ಪ್ರತಿಭೆ ತೋರಿಸಲು ಅವಕಾಶ ಸಿಗಬೇಕೆಂದು ಚಿಣ್ಣರ ಸಂತರ್ಪಣೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ “ಚಿಣ್ಣರ ಮಾಸ’ವನ್ನು ಆರಂಭಿಸಿದರು. ಅಂದಿನಿಂದ ಪ್ರತಿವರ್ಷ ಚಿಣ್ಣರ ಮಾಸಾಚರಣೆ ನಡೆಯುತ್ತಿದ್ದು ಈಗ ಅದೇ ಪಲಿಮಾರು ಶ್ರೀಪಾದರ ಎರಡನೆಯ ಪರ್ಯಾಯದಲ್ಲಿ ಮತ್ತೆ ಚಿಣ್ಣರ ಮಾಸಾಚರಣೆ ನಡೆಯುತ್ತಿದೆ.
ಒಟ್ಟು 130 ಶಾಲೆಗಳು ಯೋಜನೆಯಲ್ಲಿದ್ದರೂ ಅದರಲ್ಲಿರುವ ಹಾಸ್ಟೆಲ್‌ಗಳು, ವಿಶೇಷ ಶಾಲೆ, ಕಡಿಮೆ ಸಂಖ್ಯೆಯ ಶಾಲೆಗಳನ್ನು ಹೊರತುಪಡಿಸಿ 70 ಶಾಲೆಗಳ ಮಕ್ಕಳು ಚಿಣ್ಣರ ಮಾಸಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಂಗೀಲು ನೃತ್ಯ, ಕೋಲಾಟ, ಜನಪದ ನೃತ್ಯ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಿಕ್ಕ ಚಿಕ್ಕ ಮಕ್ಕಳು ಆಡಿ ತೋರಿಸುತ್ತಿದ್ದಾರೆ. ಡಿ. 1ರಂದು ಆರಂಭಗೊಂಡ ಮಾಸಾಚರಣೆ ಡಿ. 24ರವರೆಗೆ ಚಿಣ್ಣರ ಮಾಸಾಚರಣೆ ನಡೆಯಿತು. ಪ್ರತಿನಿತ್ಯ ಸಂಜೆ 4 ಗಂಟೆಯಿಂದ ಆರಂಭವಾಗುತ್ತದೆ. ಸುಮಾರು 40 ನಿಮಿಷಗಳವರೆಗೆ ಒಂದೊಂದು ಶಾಲೆಗಳಂತೆ ನಿತ್ಯ ಮೂರು ಶಾಲೆಗಳ ಮಕ್ಕಳು ನಲಿದು ತಮ್ಮ ಪ್ರತಿಭೆಗಳನ್ನು ತೋರಿಸುತ್ತಿದ್ದಾರೆ. ದೂರದೂರದ ಸುಮಾರು 2,500 ಮಕ್ಕಳು ಈ ಕಾರ್ಯಕ್ರಮದ ಮೂಲಕ ತಮ್ಮ ಸಾಮರ್ಥ್ಯವನ್ನು ಕೃಷ್ಣಾರ್ಪಣಗೊಳಿಸುತ್ತಿದ್ದಾರೆ. ಪ್ರತಿಯೊಂದು ಶಾಲೆಗಳ ವಿದ್ಯಾರ್ಥಿಗಳಿಗೆ ಬಂದು ಹೋಗುವ ಖರ್ಚು, ಪ್ರಸಾದ, ಪ್ರಮಾಣಪತ್ರ ನೀಡಲಾಗುತ್ತಿದೆ. ಉತ್ತಮ ಪ್ರದರ್ಶನ ನೀಡಿದ ಶಾಲೆಗಳಿಗೆ ವಿಶೇಷ ಬಹುಮಾನವನ್ನೂ ನೀಡಲಾಗುತ್ತಿದೆ. ಕಲಾವಿದರಾದ ನಾರಾಯಣ ಮತ್ತು ಅಜಿತ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರೀಕೃಷ್ಣಮಠದೊಂದಿಗೆ ಅವಿಭಾಜ್ಯ ಅಂಗವೆಂಬ ಂತೆ ಚಿಣ್ಣರ ಮಾಸಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
– ಶ್ರೀನಿವಾಸ ರಾವ್ ,ಕಾರ್ಯದರ್ಶಿ, ಚಿಣ್ಣರ ಸಂತರ್ಪಣೆ ಯೋಜನೆ, ಶ್ರೀಕೃಷ್ಣಮಠ
ಮಟಪಾಡಿ ಕುಮಾರಸ್ವಾಮಿ