Advertisement

ಇಂದಿನಿಂದ ರಂಗಾಯಣದಲ್ಲಿ ಚಿಣ್ಣರ ನಾಟಕೋತ್ಸವ

12:31 PM May 05, 2018 | Team Udayavani |

ಮೈಸೂರು: ರಂಗಾಯಣದ ಜನಪ್ರಿಯ ಕಾರ್ಯಕ್ರಮ, ಚಿಣ್ಣರಮೇಳ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮೇ 5ರಿಂದ 9 ರವರೆಗೆ ಚಿಣ್ಣರ ನಾಟಕೋತ್ಸವ ಏರ್ಪಡಿಸಲಾಗಿದ್ದು, ಪ್ರತಿ ದಿನ ಸಂಜೆ 7 ಗಂಟೆಗೆ ರಂಗಾಯಣದ ವನರಂಗದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ‌ ಭಾಗೀರಥಿ ಬಾಯಿ ಕದಂ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಎಸ್‌. ಕಾರ್ತೀಕ್‌ ನಿರ್ದೇಶನದಲ್ಲಿ ಅರಳಿ ಮರ ತಂಡ ಹುಲಿಯಜ್ಜ ನಾಟಕ ಪ್ರದರ್ಶಿಸಲಿದೆ. ಮಧು ಗರಿಕೆ ನಿರ್ದೇಶನದಲ್ಲಿ ಹಾಡಿ ತಂಡ ಅಜ್ಜಿ ಹೇಳಿದ ಕಥೆ, ರಿಯಾಜ್‌ ಸಿಹಿಮೊಗೆ ನಿರ್ದೇಶನದಲ್ಲಿ ತೇಗದಮರ ತಂಡ ಮೌನದ ಮಾತು ನಾಟಕ ಪ್ರದರ್ಶಿಸಲಿದೆ.

6ರಂದು ವಿ.ರಂಗನಾಥ್‌ ನಿರ್ದೇಶನದಲ್ಲಿ ಮಾವಿನ ಮರ ತಂಡ ಕೆರೆಯಲಿ ಚಿನ್ನ ಕೆರೆಯೇ ಚಿನ್ನ, ಶ್ರೀಕಾಂತ್‌ ನಿರ್ದೇಶನದಲ್ಲಿ ಗಾವಡಗೆರೆ ತಂಡ-1 ನೆಲೆ ಕಾಣದ ಜೀವ ನಾಟಕ ಪ್ರದರ್ಶಿಸಲಿದೆ. 7ರಂದು ನೂರ್‌ ಅಹಮದ್‌ ಶೇಖ್‌ ನಿರ್ದೇಶನದಲ್ಲಿ ಹಿಪ್ಪೆಮರ ತಂಡ ಮ್ಯಾನ್‌ ವರ್ಸಸ್‌ ಮ್ಯಾನ್‌, ಶರತ್‌ ಬೋಪಣ್ಣ ನಿರ್ದೇಶನದಲ್ಲಿ ನೇರಳೆ ಮರ ತಂಡ ರಕ್ಷಿಸುವ ಹೊಣೆಗಾರಿಕೆ ನೀವೆ ಹೇಳಿ ಯಾರದು?, ಮತ್ತಿಮರ ತಂಡದ ಮಕ್ಕಳು ಎ.ಎಸ್‌.ಶೃತಿ ನಿರ್ದೇಶನದಲ್ಲಿ ಶಿಸ್ತಿನ ಪ್ರಾಣಿಗಳು ನಾಟಕ ಪ್ರದರ್ಶಿಸಲಿದ್ದಾರೆ.

8ರಂದು ಗಿರಿಜಾ ಅರುಣ್‌ ನಿರ್ದೇಶನದಲ್ಲಿ ಮತ್ತಿಮರ ತಂಡದ ಮಕ್ಕಳು ಕಾಡಿನ ಕುಡಿಗಳು, ಪಿ.ರಾಕೇಶ್‌ ನಿರ್ದೇಶನದಲ್ಲಿ ಗಾವಡಗೆರೆ ತಂಡ-2 ಹಟ್ಟಿಪದ, ದಿಬೋಸ್‌ ಜ್ಯೋತಿ ನಿರ್ದೇಶನದಲ್ಲಿ ಹೊನ್ನೆಮರ ತಂಡ ದನದ ಕೊಟ್ಟಿಗೆಯ ದೂರದರ್ಶನ ಹಾಗೂ ಲೈಟ್‌ ಸೌಂಡ್‌ ಕ್ಯಾಮರಾ ಆಕ್ಷನ್‌ ನಾಟಕ ಪ್ರದರ್ಶಿಸಲಿದ್ದಾರೆ.

9ರಂದು ಬಿ.ಬಿ.ಅಶ್ವಿ‌ನಿ ನಿರ್ದೇಶನದಲ್ಲಿ ಜಾಲಿಮರ ತಂಡ ಚುಕ್ಕಿಗಳೆಷ್ಟು?, ಗಂಧದ ಮರ ತಂಡ ಪ್ರವೀಣ್‌ ಬೆಳ್ಳಿ ನಿರ್ದೇಶನದಲ್ಲಿ ಗ್ರಂಥಾಯಣ ಹಾಗೂ ಬೇವಿನ ಮರ ತಂಡ ವಿನೋದ ರಂಗ ನಿರ್ದೇಶನದಲ್ಲಿ ಸೃಷ್ಟಿ ನಾಟಕ ಪ್ರದರ್ಶನ ನೀಡಲಿದ್ದಾರೆ.

Advertisement

ರಂಗಾಯಣದಲ್ಲಲ್ಲದೆ ಗಾವಡಗೆರೆಯಲ್ಲೂ ನಾಟಕ ಪ್ರದರ್ಶನವಿದ್ದು, ಮೇ 9ರಂದು ಗಾವಡಗೆರೆ ತಂಡ-1 ಮಕ್ಕಳು ಶ್ರೀಕಾಂತ್‌ ನಿರ್ದೇಶನದ ನೆಲೆ ಕಾಣದ ಜೀವ ಹಾಗೂ ತಂಡ-2 ಮಕ್ಕಳು ರಾಕೇಶ್‌ ಪಿ.ಯಾದವ್‌ ನಿರ್ದೇಶನದ ಹಟ್ಟಿಪದ ನಾಟಕ ಪ್ರದರ್ಶಿಸಲಿದ್ದಾರೆ. ಮೇ 10ರಂದು ರಂಗಾಯಣದಲ್ಲಿ ಚಿಣ್ಣರ ಸಂತೆ, ಮಧ್ಯಾಹ್ನ ಓಕುಳಿಯಾಟ ನಡೆಯಲಿದೆ ಎಂದರು.

ರಂಗಾಯಣ ಜಂಟಿ ನಿರ್ದೇಶಕ ವಿ.ಮಲ್ಲಿಕಾರ್ಜುನ ಸ್ವಾಮಿ, ಚಿಣ್ಣರ ಮೇಳದ ನಿರ್ದೇಶಕ ಎಂ.ಸಿ.ಕೃಷ್ಣಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬಾಕ್ಸ್‌ ಚಿಣ್ಣರಿಗೆ ಕೈತುತ್ತು: ಸಾವಿರಾರು ಅನಾಥ ಮಕ್ಕಳಿಗೆ ಆಸರೆ ನೀಡಿ ಮಹಾ ತಾಯಿ ಎನಿಸಿರುವ ಸಿಂಧೂತಾಯಿ ಸಪಲ್‌ ಅವರು ಶನಿವಾರ ಸಂಜೆ 6ಗಂಟೆಗೆ ಚಿಣ್ಣರ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಚಿಣ್ಣರೊಂದಿಗೆ ಸಿಂಧೂತಾಯಿ ಮುಖಾಮುಖೀ ಸಂವಾದ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ಚಿಣ್ಣರ ಮೇಳದಲ್ಲಿರುವ ಎಲ್ಲಾ ಮಕ್ಕಳ ತಾಯಂದಿರುವ ಸಿಂಧೂತಾಯಿ ಅವರೊಂದಿಗೆ ಸೇರಿ ಮೇಳದಲ್ಲಿರುವ ಎಲ್ಲಾ ಮಕ್ಕಳಿಗೆ ತಾವು ತಯಾರಿಸಿ ತಂದ ಊಟ, ತಿನಿಸುಗಳ ಕೈ ತುತ್ತು ನೀಡಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next