Advertisement

ಯುದ್ಧಕ್ಕೇ ಇಳಿದುಬಿಟ್ಟ ಚೀನ ಮಾಧ್ಯಮಗಳು

03:45 AM Jul 06, 2017 | Team Udayavani |

ಬೀಜಿಂಗ್‌/ಹೊಸದಿಲ್ಲಿ: ಭಾರತ- ಚೀನ ಸೈನ್ಯಗಳ ನಡುವೆ ಬಿಗುವಿನ ವಾತಾವರಣ ಮೂಡಿರುವ ಹಾಗೆಯೇ ಚೀನದ ಮಾಧ್ಯಮ ಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ವಿರುದ್ಧ ಯುದ್ಧಕ್ಕೇ ಇಳಿದುಬಿಟ್ಟಿವೆ.

Advertisement

ತಂತಮ್ಮ ಸಂಪಾದಕೀಯಗಳಲ್ಲಿ ಯುದೊœà ನ್ಮಾದಕ್ಕೂ ಮಿಗಿಲಾಗಿ ಕೆಂಡ ಕಾರಿದ್ದಲ್ಲದೆ, ಭಾರತ ವನ್ನು ಇನ್ನಷ್ಟು ಪ್ರಚೋದಿಸುವ ಕೆಲಸಕ್ಕೆ ಇಳಿದಿವೆ.

“ಮರ್ಯಾದೆಯಿಂದ ಸಿಕ್ಕಿಂ ಗಡಿಯಿಂದ ಸೇನೆ ಯನ್ನು ಹಿಂದಕ್ಕೆ ಕರೆಯಿಸಿಕೊಂಡು ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯುವುದು ಒಳಿತು. ಇಲ್ಲವಾದರೆ ಬಲವಂತವಾಗಿ ಹೊರದಬ್ಬಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಒಂದೊಮ್ಮೆ ಯುದ್ಧವೇ ನಡೆದಲ್ಲಿ ಭಾರತ 1962ಕ್ಕಿಂತ ಹೀನಾಯ ವಾಗಿ ಸೋಲು ಕಾಣಬೇಕಾದೀತು’ ಎಂದು ಚೀನದ ಪ್ರಮುಖ ಎರಡು ಮಾಧ್ಯಮಗಳಾದ “ಚೀನ ಡೈಲಿ’ ಹಾಗೂ “ಗ್ಲೋಬಲ್‌ ಟೈಮ್ಸ್‌’ ಚೀನ ವಿದೇಶಾಂಗ ಸಚಿವಾಲಯದ ಹೇಳಿಕೆ ಆಧರಿಸಿ ಎಚ್ಚರಿಸಿವೆ.

“ಸಿಕ್ಕಿಂನ ಡೊಕ್ಲಾಮ್‌ ವಲಯದಲ್ಲಿ ಭಾರತ ಅನಗತ್ಯವಾಗಿ ಸೇನಾ ಪಡೆಗಳನ್ನು ನಿಯೋಜನೆ ಮಾಡುವ ಮೂಲಕ ತಗಾದೆ ಎತ್ತುತ್ತಿದೆ. ಮರ್ಯಾದೆಯಿಂದ ಕೂಡಲೇ ಸೇನೆಯನ್ನು ಹಿಂದಕ್ಕೆ ಪಡೆದು ಉಭಯ ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಗೌರವಿಸಲಿ. ಇಲ್ಲವಾದಲ್ಲಿ ಭಾರತಕ್ಕೆ ಮರೆಯಲು ಸಾಧ್ಯವಾಗದಂಥ ಪಾಠ ಕಲಿಸ
ಬೇಕು’ ಎಂದು ಚೀನ ಡೈಲಿ ಹೇಳಿದೆ.

Advertisement

ಇದೇ ರೀತಿಯ ತೀಕ್ಷ್ಣ ದಾಳಿಯನ್ನು ಪ್ರತಿಷ್ಠಿತ ಪತ್ರಿಕೆ “ಗ್ಲೋಬಲ್‌ ಟೈಮ್ಸ್‌’ ತನ್ನ ಸಂಪಾದಕೀಯ ಬರಹದಲ್ಲಿ ಮಾಡಿದೆ. “ಭಾರತ ಸೇನೆ ಹಿಂದಕ್ಕೆ ಪಡೆ ಯದೇ ಉದ್ಧಟತನ ಪ್ರದರ್ಶಿಸಿದರೆ, 1962ರಂದು ನಡೆದ ಗಡಿ ಯುದ್ಧದಲ್ಲಾದುದಕ್ಕಿಂತ ಬೇರೆಯದೇ ಆದ ಫ‌ಲಿತಾಂಶ ಎದುರಿಸಬೇಕಾಗುತ್ತದೆ. ಅಂದಿಗಿಂತ ಹೀನಾಯ ಸೋಲು ಕಾಣಲಿದೆ. ಸೇನೆಯನ್ನು ಗಡಿಯಲ್ಲಿ ನಿಯೋಜನೆ ಮಾಡುವ ಮೂಲಕ ಚೀನವನ್ನು ಬೆದರಿಸುವ ಕ್ರಮ ಒಳಿತಿಗಾಗಿ ಅಲ್ಲ’ ಎಂದಿದೆ.

“ಚೀನ ಪೀಪಲ್‌ ಲಿಬಿರೇಷನ್‌ ಆರ್ಮಿ (ಪಿಎಲ್‌ಎ) ಭಾರತದ ಸೇನಾ ಸಾಮರ್ಥ್ಯಕ್ಕಿಂಥ ಬಲಿಷ್ಠವಾಗಿದೆ. ಇದನ್ನು ಅರಿತು ಭಾರತ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿ ಕೊಳ್ಳಲಿ. ಈ ಕೆಲಸ ಮಾಡದಿದ್ದಲ್ಲಿ ಬಲವಂತವಾಗಿ ತಳ್ಳಬೇಕಾಗಿ ಬರಲಿದೆ ಎನ್ನುವುದನ್ನು ಈ ಎರಡೂ ಮಾಧ್ಯಮಗಳು ನೇರವಾಗಿ ಹೇಳಿರುವುದು ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ. ಭಾರತೀಯ ಸೇನಾ ಪಡೆ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು “ಯುದ್ಧಕೆ ಸೇನೆ ಸಿದ್ಧ’ ಎಂಬರ್ಥದ ಹೇಳಿಕೆ ನೀಡಿರುವುದನ್ನೂ ಪ್ರಸ್ತಾವಿಸಿ ದಾಳಿ ನಡೆಸಿದೆ.

ಕಣ್ಗಾವಲು ಹಡಗು ನಿಯೋಜನೆ
ಭಾರತ ಹಾಗೂ ಚೀನ ನಡುವಿನ ಸಿಕ್ಕಿಂ ಗಡಿ ಬಿಕ್ಕಟ್ಟು ಈಗ ಸಾಗರಕ್ಕೂ ಆವರಿಸಿಕೊಂಡಿದೆ. ಬಂಗಾಲ ಕೊಲ್ಲಿಯಲ್ಲಿ ಅಮೆರಿಕ, ಜಪಾನ್‌ ಹಾಗೂ ಭಾರತ ಸಮರಾಭ್ಯಾಸಕ್ಕೆ ಸಿದ್ಧತೆ ನಡೆಸಿಕೊಂಡಿರುವುದನ್ನೇ ನೆಪ ಮಾಡಿಕೊಂಡಿರುವ ಚೀನ, ಬುಧವಾರ ಹಿಂದೂ ಮಹಾಸಾಗರದಲ್ಲಿ ತನ್ನ ಕಣ್ಗಾವಲು ಹಡಗನ್ನು ನಿಲ್ಲಿಸಿಕೊಂಡಿರುವುದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಇದೇ ವೇಳೆ ಚೀನದ ವಿದೇಶಾಂಗ ಇಲಾಖೆ ಭಾರತ ಪಂಚಶೀಲ ತತ್ವಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದೆ. ತಮ್ಮ ದೇಶದ ಸೇನಾ ಪಡೆ ಸಿಕ್ಕಿಂ ಸಮೀಪ ಇರುವ ಕೋಳಿ ಕೊರಳು 
(ಚಿಕನ್ಸ್‌ ನೆಕ್‌) ಪ್ರದೇಶದಲ್ಲಿ ರಸ್ತೆ ನಿರ್ಮಿಸುತ್ತಿದೆ ಎಂದು ವಿಶ್ವಕ್ಕೆ ಭಾರತ ಸುಳ್ಳು ಹೇಳುತ್ತಿದೆ ಎಂದು ಚೀನ ವಿದೇಶಾಂಗ ಇಲಾಖೆ ಆರೋಪಿಸಿದೆ.

ಅಮೆರಿಕ, ಜಪಾನ್‌ ಹಾಗೂ ಭಾರತ ಬಂಗಾಲಕೊಲ್ಲಿ ಯಲ್ಲಿ ಜು. 10ರಿಂದ ನಡೆಸಲು ಉದ್ದೇಶಿಸಿರುವ ಸಮರಾಭ್ಯಾಸಕ್ಕೆ ಕ್ಯಾತೆ ತೆಗೆಯುತ್ತಲೇ ಬಂದಿರುವ ಚೀನ, ಈಗ ಹಿಂದೂಮಹಾಸಾಗರದಲ್ಲಿ “ದ ಹೈವಾಂಗ್‌ ಕ್ಸಿಯಾಂಗ್‌’ ಹೆಸರಿನ ಸಾಗರ ಕಣ್ಗಾವಲು ಹಡಗನ್ನು ನಿಯೋಜಿಸಿರುವು ದನ್ನು ಭಾರತದ ರುಕ್ಮಿಣಿ ನೌಕಾ ಉಪಗ್ರಹ ಪತ್ತೆ ಮಾಡಿದೆ. ಇದರಿಂದ ಸಹಜವಾಗಿಯೇ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮತ್ತೂಂದು ಮಜಲು ಮುಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಗ್ರಹ ಛಾಯಾಚಿತ್ರ ತಜ್ಞ, ನಿವೃತ್ತ ಕರ್ನಲ್‌ ವಿನಾಯಕ ಭಟ್‌, “ಚೀನದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಂಡಿರುವ ಕಣ್ಗಾವಲು ಹಡಗು ಇದಾಗಿದೆ. ಈಗ ಚೀನ ವಾಮಮಾರ್ಗದಲ್ಲಿ ಈ ಕ್ರಮಕ್ಕೆ ಮುಂದಾಗಿರುವುದು ಸ್ಪಷ್ಟ. ಸಾಗರದಾಚೆಗಿನ ಮಾಹಿತಿಯನ್ನೂ ಸೂಕ್ಷ್ಮವಾಗಿ ಸಂಗ್ರಹಿಸಿಕೊಳ್ಳಬಲ್ಲ ಡ್ರೋಣ್‌ ತಂತ್ರಜ್ಞಾನದಿಂದ ಕೂಡಿದೆ. ಯಾವುದೇ ಕ್ಷಿಪಣಿ ದಾಳಿಯ ಸಂದೇಶವನ್ನೂ ಗೊತ್ತುಮಾಡಿಕೊಂಡು ಮಾಹಿತಿ ಒದಗಿಸುವ ಸಾಮರ್ಥ್ಯ ಇದರಲ್ಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಭಾರತ ಕೂಡ ಮಾಹಿತಿ ಸಂಗ್ರಹದಲ್ಲಿ ಅಷ್ಟೇ ಸಾಮರ್ಥ್ಯದ ಕಣ್ಗಾವಲು ಹಡಗನ್ನು ಹೊಂದಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಭೂತಾನ್‌ ಜತೆಗೆ ವಿವಾದ ಇಲ್ಲ ಎಂದಿರುವ ಚೀನ, ಭಾರತಕ್ಕೆ ಭೇಟಿ ನೀಡುವ ವೇಳೆ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆಯ ಪ್ರವಾಸಿ ಸುತ್ತೋಲೆ ಹೊರಡಿಸಲು ಮುಂದಾಗಿದೆ.

ಪಂಚಶೀಲ ತತ್ವಗಳಿವು…
ಪಂಚಶೀಲ ಒಪ್ಪಂದ ಭಾರತ ಮತ್ತು ಚೀನ ನಡುವೆ ಏರ್ಪಟ್ಟ ಮೊದಲ ಒಪ್ಪಂದ. 1954ರಲ್ಲಿ ಈ ಒಪ್ಪಂದಕ್ಕೆ ಭಾರತದ ಪ್ರಧಾನಿ ಜವಾಹರ್‌ ನೆಹರೂ ಮತ್ತು ಚೀನ ಪ್ರಧಾನಿ ಚೌ ಎನ್‌ಲಾಯ್‌ ಸಹಿ ಹಾಕಿದ್ದರು. ವಾಸ್ತವದಲ್ಲಿ ಇದು ಚೀನದ ಟಿಬೆಟ್‌ ಪ್ರದೇಶ ಮತ್ತು ಭಾರತದ ನಡುವೆ ವ್ಯಾಪಾರ ಮತ್ತು ಸಂಪರ್ಕ ಒಪ್ಪಂದ. ಇದರಲ್ಲಿ ಉಭಯ ದೇಶಗಳ ಮಧ್ಯ ಶಾಂತಿ ಮತ್ತು ಪರಸ್ಪರ ಸಹಕಾರಕ್ಕಾಗಿ ಅನುಕೂಲವಾಗುವಂಥ 5 ಅಂಶಗಳಿವೆ.

1. ಉಭಯ ದೇಶಗಳ ಮಧ್ಯ ಪ್ರಾದೇಶಿಕ ಸಮಗ್ರತೆ.
2. ಪರಸ್ಪರ ಆಕ್ರಮಣ ನಡೆಸದಿರುವಿಕೆ.
3. ಪರಸ್ಪರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸದಿರುವುದು.
4. ಪರಸ್ಪರರ ಹಿತಕ್ಕಾಗಿ ಸಮಾನತೆ ಮತ್ತು ಸಹಕಾರ.
5. ಶಾಂತಿಯುತ ಸಹಬಾಳ್ವೆ.

Advertisement

Udayavani is now on Telegram. Click here to join our channel and stay updated with the latest news.

Next