ಹೊಸದಿಲ್ಲಿ: ಭಾರತದ ಮೇಲೆ 1962ರಲ್ಲಿ ಚೀನ ದಾಳಿ ಮಾಡಿತ್ತು “ಎನ್ನಲಾಗಿದೆ’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತೂಂದು ವಿವಾದ ಮೈಮೇಲೆ ಎಳೆದು ಕೊಂಡಿದ್ದಾರೆ.
ಈ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದು ಕೊಂಡರೆ, ಬಿಜೆಪಿ ತೀವ್ರ ವಾಗ್ಧಾಳಿ ನಡೆಸಿದೆ. ಈ ಮಧ್ಯೆ ತಮ್ಮ ಹೇಳಿಕೆಗೆ ಅಯ್ಯರ್ ಕ್ಷಮೆ ಕೋರಿದ್ದಾ ರೆ.
ದಿಲ್ಲಿಯಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿ, 1962ರ ಅಕ್ಟೋಬರ್‌ನಲ್ಲಿ ಭಾರತದ ಮೇಲೆ ಚೀನ ದಾಳಿ ಮಾಡಿದೆ ಎನ್ನಲಾದ… ಎಂದಿದ್ದರು.
ಬಿಜೆಪಿ ವಾಗ್ಧಾಳಿ: ಅಯ್ಯರ್ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ಇದೊಂದು ಲಜ್ಜೆಗೆಟ್ಟ ಪ್ರಯತ್ನ ಎಂದಿದೆ. ನೆಹರು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸ್ಥಾನ ಚೀನಕ್ಕೆ ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ರಹಸ್ಯವಾಗಿ ಚೀನದೊಂದಿಗೆ ಒಪ್ಪಂದ ಮಾಡಿಕೊಂಡರು. ಈಗ ಅಯ್ಯರ್ ಚೀನ ದಾಳಿಯನ್ನು ನಾಮಾವಶೇಷ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಹೇಳಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್: ಈ ಕುರಿತು ಟ್ವೀಟ್ ಮಾಡಿರುವ ಸಂಸದ ಜೈರಾಂ ರಮೇಶ್, ತಪ್ಪಾದ ಹೇಳಿಕೆಗೆ ಅಯ್ಯರ್ ಕ್ಷಮೆಯಾಚಿಸಿದ್ದಾರೆ. ಹಾಗಿದ್ದೂ, ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದು ಕೊಳ್ಳುತ್ತದೆ. 1962ರಲ್ಲಿ ಚೀನ ಭಾರತದ ಮೇಲೆ ದಾಳಿ ನಡೆಸಿದ್ದು ಸತ್ಯ. ಹಾಗೆಯೇ 2020 ಮೇಯಲ್ಲಿ ಲಡಾಕ್‌ನಲ್ಲಿ ಚೀನಿಯರು ನುಸುಳಿದ್ದು, ಯೋಧರು ಹುತಾತ್ಮರಾಗಿದ್ದೂ ಸತ್ಯ ಎಂದಿದ್ದಾರೆ.