Advertisement
ಒಂದು ಸಲ ಚಕ್ರವರ್ತಿಯ ಮುದ್ದಿನ ಮಗಳ ಹುಟ್ಟುಹಬ್ಬ ಬಂದಿತು. ಪ್ರತೀ ವರ್ಷವೂ ಪ್ರಜೆಗಳು, ಪ್ರಮುಖರು ಅಂದು ಅವಳಿಗೆ ಬೇರೆ ಬೇರೆ ಉಡುಗೊರೆಗಳನ್ನು ತಂದುಕೊಡುತ್ತಿದ್ದರು. ಆದರೆ ಚಕ್ರವರ್ತಿ, “”ಈ ಸರ್ತಿ ಯಾರಾದರೂ ಕೆಲಸಕ್ಕೆ ಬಾರದ ಉಡುಗೊರೆಗಳನ್ನು ತಂದು ಕೊಡಬಾರದು. ವರ್ಷವೂ ತರುವಂತಹ ವಸ್ತುಗಳನ್ನು ಯಾರೇ ಆಗಲಿ, ತಂದುಕೊಟ್ಟರೆ ಅವರನ್ನು ದೇಶ ಬಿಟ್ಟು ಓಡಿಸುತ್ತೇನೆ. ನಮ್ಮಲ್ಲಿ ಯಾರೂ ಕಂಡಿರದ ವಿಶೇಷ ವಸ್ತುವೊಂದನ್ನು ಎಲ್ಲರೂ ಸೇರಿ ತಂದುಕೊಟ್ಟರೆ ಸಾಕು. ನನಗೆ ಇದು ಒಪ್ಪಿಗೆಯಾದರೆ ನಿಮಗೆ ಒಳ್ಳೆಯ ಬಹುಮಾನ ಕೊಟ್ಟು ಪುರಸ್ಕರಿಸುತ್ತೇನೆ. ತಪ್ಪಿದರೆ ನಾನು ಕೊಡುವ ಶಿಕ್ಷೆಯನ್ನು ಅನುಭವಿಸುತ್ತೀರಿ” ಎಂದು ಮೊದಲೇ ಎಚ್ಚರಿಸಿದ.
“”ಸರಿಯಪ್ಪ, ಹಾಗೆಯೇ ಮಾಡು. ಒಟ್ಟಿನಲ್ಲಿ ಚಕ್ರವರ್ತಿ ಅಸಮಾ ಧಾನಗೊಂಡು ಶಿಕ್ಷೆ ವಿಧಿಸದ ಹಾಗೆ ಮಾಡಿದರೆ ಸಾಕು” ಎಂದು ಜನರು ವ್ಯಾಪಾರಿಗೆ ತಮ್ಮ ಪಾಲಿನ ಹಣವನ್ನು ಕೊಟ್ಟರು. ವ್ಯಾಪಾರಿ ಬೇರೆ ದೇಶಕ್ಕೆ ಹೋದ. ಒಂದು ಆನೆಯನ್ನು ಖರೀದಿಸಿ ತಂದು ಅರಮನೆಯ ಮುಂದೆ ನಿಲ್ಲಿಸಿದ. ಪ್ರಜೆಗಳೆಲ್ಲರೂ ಒಟ್ಟಾಗಿ ಚಕ್ರವರ್ತಿಯ ಮುಂದೆ ಹೋದರು. “”ಈ ಸಲ ತಮ್ಮ ಕುಮಾರಿಯ ಹುಟ್ಟುಹಬ್ಬಕ್ಕೆ ತಾವು ಎಂದಿಗೂ ಕಂಡಿರದ ಉಡುಗೊರೆಯನ್ನು ಹುಡುಕಿ ತಂದಿದ್ದೇವೆ. ತಮಗಿದು ಇಷ್ಟವಾಗುತ್ತದೆಂಬ ನಂಬಿಕೆಯೂ ನಮಗಿದೆ” ಎಂದು ಹೇಳಿದರು.
Related Articles
Advertisement
ಚಕ್ರವರ್ತಿಯ ಮಗಳು ಅರಮನೆಯ ಮಹಡಿಯ ಮೇಲೆ ನಿಂತು ಆನೆಯನ್ನು ಕಂಡು ಸಂತೋಷಪಟ್ಟಳು. ತಂದೆಯೊಂದಿಗೆ, “”ಆನೆಯನ್ನು ಇಲ್ಲಿಗೇ ತಂದುಕೊಡಿ. ನನಗೆ ಅದು ನನ್ನ ಕೋಣೆಯ ಒಳಗೆಯೇ ಇರಬೇಕು” ಎಂದು ಕೂಗಿ ಹೇಳಿದಳು. ಚಕ್ರವರ್ತಿ ಬೇರೆ ಏನೂ ಯೋಚನೆ ಮಾಡಲಿಲ್ಲ. ಆನೆಯನ್ನು ತಂದು ಚಕ್ರವರ್ತಿ ಕೊಡುವ ವಿಶೇಷ ಉಡುಗೊರೆಗಳನ್ನು ಪಡೆಯಲು ಸಿದ್ಧರಾಗಿ ನಿಂತಿರುವ ಪ್ರಜೆ ಗಳೊಂದಿಗೆ, “”ಇದೇನು ನೋಡುತ್ತ ನಿಂತಿದ್ದೀರಾ? ನನ್ನ ಮುದ್ದಿನ ಮಗಳು ಏನು ಕೋರಿಕೊಂಡಳೆಂಬುದನ್ನು ಕೇಳಿಸಿಕೊಳ್ಳಲಿಲ್ಲವೆ? ಉಡುಗೊರೆಯನ್ನು ಹೆಗಲಿನಲ್ಲಿ ಹೊತ್ತುಕೊಂಡು ಹೋಗಿ ಅವಳಿಗೆ ಕೊಟ್ಟುಬನ್ನಿ” ಎಂದು ಆಜ್ಞೆ ಮಾಡಿಬಿಟ್ಟ.
ಪ್ರಜೆಗಳು ಬೆವತುಹೋದರು. ಅಷ್ಟು ದೊಡ್ಡ ಆನೆಯನ್ನು ಹೆಗಲಿ ನಲ್ಲಿ ಹೊತ್ತುಕೊಂಡು ಮಹಡಿಯ ಮೇಲೆ ಹೋಗಲು ಚಕ್ರವರ್ತಿ ಒಮ್ಮೆ ಹೇಳಿದರೆ ಮುಗಿಯಿತು, ಮಾತು ನಡೆಸದಿದ್ದರೆ ಶಿಕ್ಷೆ ವಿಧಿಸಿಯೇ ಬಿಡುತ್ತಾನೆ ಎಂಬ ಭಯದಿಂದ ನಡುಗತೊಡಗಿದರು. ಆಗ ಒಬ್ಬ ರೈತನ ಮಗ ಮಾತ್ರ ಧೈರ್ಯದಿಂದ ಮುಂದೆ ಬಂದ. ಚಕ್ರವರ್ತಿಯ ಮುಂದೆ ಕೈ ಜೋಡಿಸಿದ. “”ಈ ಜೀವಿಯ ತೂಕ ಎಷ್ಟೆಂಬುದನ್ನು ತಾವು ತಿಳಿದುಕೊಂಡಿಲ್ಲ. ಎತ್ತಲಾಗದಷ್ಟು ಭಾರವಾಗಿದೆ. ಇಷ್ಟು ತೂಕದ ಪ್ರಾಣಿಯನ್ನು ಮಹಡಿಯ ಮೇಲೆ ತೆಗೆದುಕೊಂಡು ಹೋದರೆ ಮಹಡಿಯು ಮುರಿದು ಕೆಳಗೆ ಬೀಳಬಹುದು. ಚಕ್ರವರ್ತಿಗಳು ಅನಾಹುತಕ್ಕೆ ಕಾರಣವಾಗುವ ಕೆಲಸವನ್ನು ನಮಗೆ ಹೇಳಬಾರದು” ಎಂದು ಬಿನ್ನವಿಸಿದ.
ಹುಡುಗನ ಮಾತು ಕೇಳಿ ಚಕ್ರವರ್ತಿಗೆ ಕೋಪ ಕೆರಳಿತು. “”ಇದು ಅಷ್ಟೊಂದು ತೂಕವಿದೆಯೆ? ಹಾಗಿದ್ದರೆ ಇದರ ನಿಜವಾದ ಭಾರ ಎಷ್ಟೆಂಬುದನ್ನು ನೀನು ಹೇಳಬೇಕು. ಇದರಲ್ಲಿ ಗೆದ್ದರೆ ನೀನು ಕೇಳಿದ ಬಹುಮಾನ ಕೊಡುತ್ತೇನೆ. ಸೋತರೆ ನಿನಗೆ ಮರಣದಂಡನೆ ವಿಧಿಸುತ್ತೇನೆ” ಎಂದು ಸವಾಲು ಹಾಕಿದ. ಹುಡುಗ ಹೆದರಲೇ ಇಲ್ಲ. “”ಆನೆಯನ್ನು ನಿಲ್ಲಿಸಿ ತೂಕ ಮಾಡಬೇಕಲ್ಲವೆ? ಮಾಡುತ್ತೇನೆ, ಆದರೆ ಅದು ನಿಲ್ಲುವಂತಹ ತಕ್ಕಡಿಯನ್ನು ತರಿಸಿಕೊಡಿ” ಎಂದು ಹೇಳಿದ. ಚಕ್ರವರ್ತಿ ದೇಶದ ಎಲ್ಲ ಕಡೆಗೂ ದೂತರನ್ನು ಅಟ್ಟಿದ, ಆನೆ ನಿಲ್ಲುವಂತಹ ತಕ್ಕಡಿಯನ್ನು ತರಲು ಆಜಾnಪಿಸಿದ. ದೂತರು ಮೂಲೆ ಮೂಲೆಗೂ ಹೋಗಿ ಹುಡುಕಿದರು. ಆದರೆ ಅಂತಹ ತಕ್ಕಡಿ ಸಿಗಲಿಲ್ಲವೆಂದು ಬರಿಗೈಯಲ್ಲಿ ಬಂದು ಹೇಳಿದರು.
“”ತಕ್ಕಡಿ ಸಿಗಲಿಲ್ಲವೆಂದು ನಿನ್ನನ್ನು ಹಾಗೆಯೇ ಬಿಡುವುದಿಲ್ಲ. ಅದರ ತೂಕವನ್ನು ನೀನು ಹೇಳಲೇಬೇಕು” ಎಂದು ಚಕ್ರವರ್ತಿ ಹುಡುಗನಿಗೆ ಹೇಳಿದ. ಹುಡುಗ ಒಪ್ಪಿಕೊಂಡ. ಆನೆಯನ್ನು ನಡೆಸಿಕೊಂಡು ನದಿಯ ಬಳಿಗೆ ಬಂದ. ನಡು ನೀರಿನಲ್ಲಿ ಇರುವ ದೋಣಿಗೆ ಆನೆಯನ್ನು ಹತ್ತಿಸಿದ. ದೋಣಿ ನೀರಿನಲ್ಲಿ ಎಷ್ಟು ಮುಳುಗಿದೆ ಎಂದು ನೋಡಿ ಅಲ್ಲಿಗೆ ಒಂದು ಗುರುತು ಮಾಡಿದ. ಆನೆಯನ್ನು ಕೆಳಗಿಳಿಸಿದ. ಚಕ್ರವರ್ತಿಯೊಂದಿಗೆ, “”ದೋಣಿಗೆ ಬೆಲ್ಲ ತುಂಬಿದ ಮೂಟೆಗಳನ್ನು ತರಿಸಿ ಹಾಕಿಸಿ. ಆನೆ ನಿಂತಾಗ ದೋಣಿ ಎಷ್ಟು ಮುಳುಗಿತ್ತೋ ಅಷ್ಟೇ ಮುಳುಗುವ ವರೆಗೂ ಮೂಟೆ ಗಳನ್ನು ಹಾಕುತ್ತ ಇರಲಿ” ಎಂದು ಕೇಳಿಕೊಂಡ.
ದೂತರು ದೋಣಿಯಲ್ಲಿ ಗುರುತು ಮಾಡಿದ ಸ್ಥಳದ ತನಕ ಮುಳುಗುವಷ್ಟು ಹೊತ್ತು ಬೆಲ್ಲದ ಮೂಟೆಗಳನ್ನು ಹೇರಿದರು. ಕಡೆಗೆ ಬೆಲ್ಲದ ಮೂಟೆಗಳ ಒಟ್ಟು ತೂಕ ಎಷ್ಟಿದೆಯೋ ಲೆಕ್ಕ ಹಾಕಿದ ಹುಡುಗ, ಆನೆಯ ಭಾರವೂ ಅಷ್ಟೇ ಇದೆ ಎಂದು ಹೇಳಿದ. ಚಕ್ರವರ್ತಿಗೆ ಸಂತೋಷವಾಯಿತು. ಹುಡುಗನನ್ನು ಬಿಗಿದಪ್ಪಿಕೊಂಡ. “”ನೀನು ಬುದ್ಧಿವಂತನೆಂಬುದರಲ್ಲಿ ಅನುಮಾನವಿಲ್ಲ. ಇದಕ್ಕಾಗಿ ಏನು ಕೇಳಿದರೂ ಕೊಡುತ್ತೇನೆ” ಎಂದು ಹೇಳಿದ. “”ನನಗೆ ಬಹುಮಾನವೆಂದು ಚಿನ್ನ, ಹಣ ಯಾವುದೂ ಬೇಡ. ಆದರೆ ಏನಾದರೂ ಕೊಡಬೇಕೆಂಬ ಆಸೆ ನಿಮಗಿದ್ದರೆ ಇನ್ನು ಮುಂದೆ ಮನ ಬಂದಂತೆ ಆಜ್ಞೆಗಳನ್ನು ಮಾಡಿ ಪ್ರಜೆಗಳಿಗೆ ಕಷ್ಟ ಕೊಡಬೇಡಿ. ಅದನ್ನು ಮಾಡಲಾಗದವರನ್ನು ಶಿಕ್ಷಿಸಬೇಡಿ. ಇದೇ ನಾನು ಕೋರುವ ಬಹುಮಾನ” ಎಂದು ಹುಡುಗ ಕೋರಿದ. ಚಕ್ರವರ್ತಿ ಈ ಮಾತಿಗೆ ಒಪ್ಪಿದ, ಹಾಗೆಯೇ ನಡೆದುಕೊಂಡ.
ಪ. ರಾಮಕೃಷ್ಣ ಶಾಸ್ತ್ರಿ