ಬೀಜಿಂಗ್ : ‘ಶಾಂತಿ ರೋಗ’ ಎನ್ನುವುದು ಈಗ ಚೀನದ ಮಿಲಿಟರಿಯ ಮೂಲೆ ಮೂಲೆಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ಅಂತೆಯೇ ವಿಶ್ವದ ಅತೀ ದೊಡ್ಡ ಮಿಲಿಟರಿ ಶಕ್ತಿ ಎನಿಸಿಕೊಂಡಿರುವ ಚೀನೀ ಸೈನಿಕರ ಹೋರಾಟ ಸಾಮರ್ಥ್ಯದ ಬಗ್ಗೆ ಈಗ ಶಂಕೆ ವ್ಯಕ್ತವಾಗತೊಡಗಿದೆ. ಹೀಗೆಂದು ಹೇಳಿರುವುದು ಯಾವುದೇ ಚೀನ ವಿರೋಧಿ ಮಾಧ್ಯಮವಲ್ಲ; ಬದಲು ಚೀನ ಸರಕಾರಿ ಒಡತನದ ಹಾಗೂ ಚೀನ ಮಿಲಿಟರಿಯದ್ದೇ ಮುಖವಾಣಿಯಾಗಿರುವ ಪಿಎಲ್‌ಎ ಡೈಲಿ !
ಪಿಎಲ್‌ಎ ಡೈಲಿಯ ಮಂಡಾರಿನ್ ಭಾಷಾ ಆವೃತ್ತಿಯ ಸಂಪಾದಕೀಯದ ಭಾಗವಾಗಿ ಚೀನದ ಮಿಲಿಟರಿ ಶಕ್ತಿಯ ನೈಜ ಹೋರಾಟ ಸಾಮರ್ಥ್ಯವನ್ನು ಈ ವಾರದ ಆದಿಯಲ್ಲಿ ವಿಶ್ಲೇಷಿಸಲಾಗಿತ್ತು. ಅದರ ಆಧಾರದಲ್ಲಿ ಪತ್ರಿಕೆಯು ಶಾಕಿಂಗ್ ವರದಿಯನ್ನು ಪ್ರಕಟಿಸಿದೆ. ಅಂತೆಯೇ ಚೀನ ಸರಕಾರಕ್ಕೆ ಇದೊಂದು ಎಚ್ಚರಿಕೆಯ ಗಂಟೆ ಎನಿಸಿದೆ.
ತನ್ನ ವಿಶ್ಲೇಷಣೆಯನ್ನು ಅಧರಿಸಿದ ಪತ್ರಿಕೆಯ ಸಂಪಾದಕೀಯವು ‘ಶಾಂತಿ ರೋಗ’ ಈಗ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯನ್ನು ಆದ್ಯಂತವಾಗಿ ಆವರಿಸಿಕೊಂಡಿದೆ. ಚೀನ ಸೇನೆ ಯಾವುದೇ ಯುದ್ಧ ಕೈಗೊಳ್ಳದೇ ಹಲವು ದಶಕಗಳೇ ಸಂದಿವೆ; ಮತ್ತು ಚೀನ ಸೇನೆಯ ಶಕ್ತಿ ಸಾಮರ್ಥ್ಯವನ್ನು ಯುದ್ಧಕ್ಕೆ ಹೊರತಾದ ವಿಷಯಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರ ಪರಿಣಾಮವಾಗಿ ಚೀನ ಸೇನೆಯ ಹೋರಾಟ ಸಾಮರ್ಥ್ಯ ಸಂದೇಹಪಡುವಷ್ಟು ಕುಗ್ಗಿ ಹೋಗಿದೆ’ ಎಂದು ಹೇಳಿದೆ.
“ಶಾಂತಿ ಕಾಯಿಲೆ ನಮ್ಮ ಸೇನೆಯನ್ನು ಕಳೆದ ಹಲವು ದಶಕಗಳಿಂದ ಕಾಡುತ್ತಿದೆ. ಈ ಕಾಯಿಲೆಯನ್ನು ನಾವು ಈಗಲೇ ಹೊಡೆದೋಡಿಸದಿದ್ದರೆ ಮುಂದೆ ಯುದ್ಧ ಸಂಭವಿಸಿದಾಗ ನಾವು ಭಾರೀ ಬೆಲೆ ತೆರಬೇಕಾದೀತು; ನಾವು ನಿಜಕ್ಕೂ ಹೋರಾಡುವ ಶಕ್ತಿಯನ್ನು ಹೊಂದಿದ್ದರೆ ಮಾತ್ರವೇ ಯುದ್ಧವನ್ನು ತಡೆಯಬಲ್ಲೆವು’ ಎಂದು ಪಿಎಲ್‌ಎ ಡೈಲಿ ಸಂಪಾದಕೀಯ ಅಭಿಪ್ರಾಯ ಪಟ್ಟಿರುವುದಾಗಿ ಚೀನೀ ಮಾಧ್ಯಮಗಳು ವರದಿ ಮಾಡಿವೆ.