ನವದೆಹಲಿ/ಬೀಜಿಂಗ್: ಪೂರ್ವ ಲಡಾಖ್ ನ ಪ್ಯಾಂಗಾಂಗ್ ಸರೋವರ ಸಮೀಪ ಭಾರತದ ಸೇನೆ ವಾಸ್ತವ ನಿಯಂತ್ರಣ ರೇಖೆ(ಎಲ್ ಎಸಿ)ಯನ್ನು ದಾಟಿ ಬಂದು ಎಚ್ಚರಿಕೆಯ ದಾಳಿ ನಡೆಸಿತ್ತು ಎಂಬ ಚೀನಾದ ಆರೋಪವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. ಭಾರತ, ಚೀನಾದ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ಸ್ವಾಮಿತ್ವದ “ಗ್ಲೋಬಲ್ ಟೈಮ್ಸ್” ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿರುವುದಾಗಿ ವರದಿಯಾಗಿದೆ.
ಗ್ಲೋಬಲ್ ಟೈಮ್ಸ್ ನಲ್ಲೇನಿದೆ?
ಗಡಿ ವಿಚಾರದಲ್ಲಿ ಭಾರತ ಬೀಜಿಂಗ್ ಜತೆ ಸಮರಕ್ಕಿಳಿದರೆ ಭಾರತಕ್ಕೆ ಗೆಲ್ಲುವ ಯಾವುದೇ ಅವಕಾಶ ಇಲ್ಲ ಎಂದು ಹೇಳಿದೆ. ಶುಕ್ರವಾರ ಮಾಸ್ಕೋದಲ್ಲಿ ಭಾರತ ಮತ್ತು ಚೀನ ರಕ್ಷಣಾ ಸಚಿವರ ನಡುವೆ ನಡೆದ ಮಾತುಕತೆಯಲ್ಲಿ ಧನಾತ್ಮಕ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಒಂದು ವೇಳೆ ಗಡಿ ವಿವಾದದಲ್ಲಿ ಯುದ್ಧವಾದರೆ, ಭಾರತಕ್ಕೆ ಗೆಲ್ಲುವ ಯಾವುದೇ ಅವಕಾಶ ಇಲ್ಲ ಎಂದು ಹೇಳಿದೆ.
ಶನಿವಾರ ಪ್ರಕಟವಾಗಿರುವ ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಗ್ಲೋಬಲ್ ಟೈಮ್ಸ್ ಚೀನಾದ ಆಡಳಿತರೂಢ ಕಮ್ಯೂನಿಷ್ಟ್ ಪಕ್ಷದ ಮುಖವಾಣಿಯಾಗಿದೆ. ನಾವು ಭಾರತಕ್ಕೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಚೀನಾದ ಸೇನೆಯ ಶಕ್ತಿ ಭಾರತಕ್ಕಿಂತ ಬಲಿಷ್ಠವಾಗಿದೆ. ಅಷ್ಟೇ ಅಲ್ಲ ಚೀನಾ ಮತ್ತು ಭಾರತ ಎರಡು ದೊಡ್ಡ ಶಕ್ತಿ ಹೊಂದಿರುವ ದೇಶಗಳಾಗಿವೆ. ಒಂದು ವೇಳೆ ಯುದ್ಧದ ಸಾಮರ್ಥ್ಯಕ್ಕೆ ಹೋಲಿಸಿದರೆ ಭಾರತ ನಷ್ಟವನ್ನು ಅನುಭವಿಸಲಿದೆ. ಒಂದು ವೇಳೆ ಗಡಿಯಲ್ಲಿ ಯುದ್ಧವಾದರೆ ಭಾರತಕ್ಕೆ ಗೆಲ್ಲುವ ಯಾವುದೇ ಅವಕಾಶ ಇಲ್ಲ ಎಂದು ಪ್ರತಿಪಾದಿಸಿದೆ.
Related Articles
“ಉಭಯ ದೇಶಗಳ ರಕ್ಷಣಾ ಸಚಿವರ ನಡುವೆ ನಡೆದ ಮಾತುಕತೆ ನಮಗೆ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂಬ ನಂಬಿಕೆ ನಮ್ಮದಾಗಿದೆ”.ಗಡಿ ವಿವಾದದ ವಿಚಾರದಲ್ಲಿ ಎರಡೂ ದೇಶಗಳೂ ಸಂಘರ್ಷವನ್ನು ತಣಿಸಲು ಹೆಚ್ಚು ಪ್ರಯತ್ನಿಸಬೇಕಾಗಿದೆ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಹೇಳಿದೆ.
ಮಾಸ್ಕೋದಲ್ಲಿ ನಡೆದ ರಕ್ಷಣಾ ಸಚಿವರ ಮಟ್ಟದ ಮಾತುಕತೆಯನ್ನು ಪತ್ರಿಕೆ ಬೆಂಬಲಿಸಿದೆ. ಗಡಿ ವಿಚಾರದಲ್ಲಿ ಭಾರತದ ನೀತಿ ರಾಷ್ಟ್ರೀಯತೆ ಮತ್ತು ಸಾರ್ವಜನಿಕ ಅಭಿಪ್ರಾಯದ ಆದೇಶದಂತಿದೆ. ಭಾರತದ ಸಾರ್ವಜನಿಕ ಅಭಿಪ್ರಾಯವೂ ಗಡಿ ವಿಚಾರದಲ್ಲಿ ತುಂಬಾ ಆಳ ಮತ್ತು ವಿಶಾಳತೆಯನ್ನು ಹೊಂದಿದೆ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದಲ್ಲಿ ಜಂಟಿ ನಿಯಂತ್ರಣವಿದೆ. ಭಾರತ ಕೂಡಾ ಸಾರ್ವಜನಿಕ ಅಭಿಮತ ಮತ್ತು ರಾಷ್ಟ್ರೀಯತೆಯನ್ನು ಸರಿದೂಗಿಸಬೇಕಾಗಿದೆ. ಅಲ್ಲದೇ ದೇಶದ ಮತ್ತು ಜನತೆಗಾಗಿ ಉತ್ತಮ ಆಯ್ಕೆಯನ್ನು ಮಾಡಿಕೊಳ್ಳಬೇಕಾದ ತುರ್ತು ಭಾರತದ್ದಾಗಿದೆ ಎಂದು ಗ್ಲೋಬಲ್ ಟೈಮ್ಸ್ ತಿಳಿಸಿದೆ.
ಈಗ ಸಮಸ್ಯೆಯಾಗಿರುವುದು ಗಡಿ ವಿಚಾರದಲ್ಲಿ ಭಾರತ ತುಂಬಾ ದುರಾಕ್ರಮಣಕಾರಿಯಾಗಿರುವುದು. ಗಡಿ ವಿಚಾರದಲ್ಲಿನ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕೆಂಬ ಚೀನಾದ ಅಪೇಕ್ಷೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲದೇ ಗಡಿ ಯುದ್ಧದ ಬೆದರಿಕೆಯನ್ನು ಹಾಕುವಂತಿದೆ ಎಂದು ಹೇಳಿದೆ.
ಭಾರತದ ತಿರುಗೇಟು:
ಚೀನಾ ಸ್ವಾಮಿತ್ವದ ಗ್ಲೋಬಲ್ ಟೈಮ್ಸ್ ನ ಆರೋಪವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಳ್ಳಿಹಾಕಿದೆ. ಅಲ್ಲದೇ ಪ್ರಸ್ತುತ ಪರಿಸ್ಥಿತಿ ಕುರಿತಂತೆ ಚೀನಾ ನೀಡುತ್ತಿರುವ ಹೇಳಿಕೆ ವಾಸ್ತವಕ್ಕೆ ದೂರವಾಗಿದೆ ಎಂದು ಭಾರತ ತಿರುಗೇಟು ನೀಡಿದೆ.
ಅಲ್ಲದೇ ಎಲ್ ಎಸಿ ದಾಟಿ ಭಾರತೀಯ ಸೇನೆ ಎಚ್ಚರಿಕೆ ದಾಳಿ ನಡೆಸಿದೆ ಎಂಬ ಆರೋಪವನ್ನು ಕೂಡಾ ಭಾರತ ನಿರಾಕರಿಸಿದೆ. ಪೂರ್ವ ಲಡಾಖ್ ನ ಪ್ಯಾಂಗಾಂಗ್ ಸರೋವರದ ಪರ್ವತ ಪ್ರದೇಶದ ಸಮೀಪ ಚೀನಾ ಸೇನೆಯೇ ಭಾರತದ ಪ್ರದೇಶದೊಳಕ್ಕೆ ನುಗ್ಗಲು ಯತ್ನಿಸಿದ್ದು, ಅದನ್ನು ಭಾರತೀಯ ಸೇನಾಪಡೆ ತಡೆದಿರುವುದಾಗಿ ತಿಳಿಸಿದೆ.
ಎಲ್ ಎಸಿ ಗಡಿ ವಿಚಾರದಲ್ಲಿ ಭಾರತ ಸೇನೆಯನ್ನು ಹಿಂಪಡೆಯಲು ಮತ್ತು ಸಂಘರ್ಷವನ್ನು ತಣ್ಣಗಾಗಿಸಲು ಬದ್ಧವಾಗಿದೆ. ಆದರೆ ಚೀನಾ ಮಾತ್ರ ಪ್ರಚೋದನಕಾರಿ ಚಟುವಟಿಕೆಯನ್ನು ಗಡಿಯಲ್ಲಿ ಮುಂದುವರಿಸಿದೆ. ನಾವು ಯಾವುದೇ ಸಂದರ್ಭದಲ್ಲಿಯೂ ಎಲ್ ಎಸಿ ದಾಟಿ ದಾಳಿ ನಡೆಸಿಲ್ಲ. ಅಲ್ಲದೇ ಯಾವುದೇ ಗುಂಡಿನ ದಾಳಿ ಸೇರಿದಂತೆ ದುರಾಕ್ರಮಣ ನಡವಳಿಕೆ ತೋರಿಸಿಲ್ಲ ಎಂದು ಭಾರತ ತಿರುಗೇಟು ನೀಡಿದೆ.
ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾ ಸೇನೆ ಈಗಾಗಲೇ ಮೂರು ಬಾರಿ ಭಾರತದ ಪ್ರದೇಶದೊಳಕ್ಕೆ ನುಗ್ಗಲು ಯತ್ನಿಸಿದ್ದು, ಅದನ್ನು ಭಾರತೀಯ ಸೇನೆ ಯಶಸ್ವಿಯಾಗಿ ತಡೆದಿದೆ. ಇದರಿಂದ ಮುಖಭಂಗ ಅನುಭವಿಸಿದ ಚೀನಾ ಜಾಗತಿಕ ಸಮುದಾಯದ ಎದುರು ಸುಳ್ಳು ಹೇಳಿಕೆಯನ್ನು ನೀಡುತ್ತಿದೆ. ಭಾರತದ ಭೂ ಪ್ರದೇಶವನ್ನು ಅತಿಕ್ರಮಿಸಲು ಮುಂದಾದರೆ ಭಾರತದ ಸೇನೆ ಕೂಡಾ ಚೀನಾಕ್ಕೆ ತಕ್ಕ ಪ್ರತ್ಯುತ್ತರ ಕೊಡಲು ಸಿದ್ಧವಾಗಿದೆ.
ಈ ಹಿಂದಿನ ಎರಡು ಯುದ್ಧದ ಉದಾಹರಣೆಯನ್ನು ನೀಡುವ ಮೂಲಕ ಚೀನಾ ಭಾರತವನ್ನು ಕಡೆಗಣಿಸಿದರೆ ಅದು ಮೂರ್ಖತನದ ನಿರ್ಧಾರವಾಗಲಿದೆ. ಭಾರತದ ಸೇನೆ ಕೂಡಾ ಬಲಿಷ್ಠವಾಗಿದೆ. ನಾವೂ ಕೂಡಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಎಚ್ಚರಿಕೆಯ ಅಥವಾ ಹೇಳಿಕೆಗಳ ಮೂಲಕ ಭಾರತವನ್ನು ಹೆದರಿಸುವ ಕೆಲಸವನ್ನು ಚೀನಾ ಕೈಬಿಡಬೇಕು ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ವರದಿ ತಿಳಿಸಿದೆ.