ಬೀಜಿಂಗ್ : ಭಾರತದ ಗಡಿಯಲ್ಲಿನ ಯಥಾ ಸ್ಥಿತಿಯನ್ನು ಬದಲಾಯಿಸುವ ಚೀನದ ಯಾವುದೇ ಯತ್ನದಿಂದ ಉಭಯ ದೇಶಗಳ ನಡುವೆ ಡೋಕ್ಲಾಂ ನಂತಹ ಇನ್ನೊಂದು ಸೇನಾ ಮುಖಾಮುಖೀ ಏರ್ಪಡಬಹುದು ಎಂದು ಭಾರತೀಯ ರಾಯಭಾರಿ ಗೌತಮ್ ಬಂಬವಾಲೆ ಎಚ್ಚರಿಸಿದ್ದಾರೆ.
ಭಾರತದ ಗಡಿಯಲ್ಲಿ ಇನ್ನೊಂದು ಡೋಕ್ಲಾಂ ಸ್ಥಿತಿ ಉತ್ಪನ್ನವಾಗುವುದನ್ನು ಬುದ್ಧಿವಂತಿಕೆಯ, ಚಾಣಾಕ್ಷತನದ ಮತ್ತು ಮುಚ್ಚುಮರೆಯಿಲ್ಲದೆ ಮಾತುಕತೆಗಳ ಮೂಲಕ ನಿವಾರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಂಬವಾಲೆ ಅವರು ತನ್ನ ಈ ಅಭಿಪ್ರಾಯಗಳನ್ನು ಹಾಂಕಾಂಗ್‌ನಲ್ಲಿನ ದಕ್ಷಿಣ ಚೀನ ಮಾರ್ನಿಂಗ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದರು.
ಭಾರತ – ಚೀನ ನಡುವಿನ ಗಡಿ ರೇಖೆ ಗುರುತಿಸಲ್ಪಡದ ಸ್ಥಳಗಳು ಉಭಯ ದೇಶಗಳ ನಡುವೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಲ್ಲವು ಎಂದು ಬಂಬವಾಲೆ ಎಚ್ಚರಿಸಿದರು. ಅಂತೆಯೇ ಉಭಯ ದೇಶಗಳು ಹಂಚಿಕೊಂಡಿರುವ ಗಡಿಯನ್ನು ಪುನಾರೂಪಿಸುವ ಅಗತ್ಯವಿದೆ ಎಂದವರು ಹೇಳಿದರು.
ಭಾರತವು ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ವಿರೋಧಿಸುತ್ತದೆ; ಆದರೆ ಬೆಲ್ಟ್ ಆ್ಯಂಡ್ ರೋಡ್ ವಿಷಯದಲ್ಲಿನ ಭಿನ್ನಾಭಿಪ್ರಾಯವು ಬೀಜಿಂಗ್ ಜತೆಗೆ ವಿವಾದಕ್ಕೆ ಕಾರಣವಾಗುವುದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಬಂಬವಾಲೆ ಹೇಳಿದರು.
ಚೀನಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಭಾರತವು ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯ ಗುಂಪನ್ನು ಸೇರಿಕೊಳ್ಳಲಿದೆ ಎಂಬ ವರದಿಗಳಿಗೆ ಬಂಬವಾಲೆ ಮಹತ್ವ ನೀಡಲಿಲ್ಲ.