Advertisement
ಎರಡು ದಶಕಗಳೆವರೆಗೂ ಚೀನಾ ನಾಗರಿಕರ ಮನದಲ್ಲಿ ನೀಲಿ ಕಂಗಳ ಹುಡುಗನಾಗಿದ್ದ ಇದೇ ಜಿನ್‌ಪಿಂಗ್, ಈಗ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೀನಾ ಕಮುನಿಸ್ಟ್ ಪಕ್ಷದ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಜಿನ್‌ಪಿಂಗ್ 2013ರಲ್ಲಿ ಚೀನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಿಂತಿರುಗಿ ನೋಡಿದಿಲ್ಲ. ಚೀನಾವನ್ನು ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವನ್ನಾಗಿ ಮಾಡಲು ಜಿನ್‌ಪಿಂಗ್ ಪ್ರಮುಖ ಪಾತ್ರ ವಹಿಸಿದರು. ಕೈಗಾರಿಕೆಗಳಿಗೆ ಉತ್ತೇಜನ ನೀಡಿದರು. ಜತೆಗೆ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ವಿಶ್ವದ ಬಲಿಷ್ಠ ಸೇನೆಗಳಲ್ಲಿ ಒಂದಾಗುವ ನಿಟ್ಟಿನಲ್ಲಿ ಬಲ ತುಂಬಿದರು.
Related Articles
Advertisement
ಇನ್ನೊಂದೆಡೆ, ಶೂನ್ಯ ಕೊರೊನಾ ನೀತಿ ಮತ್ತು ಆರ್ಥಿಕ ಹೊಡೆತದಿಂದಾಗಿ ಚೀನಾದ 100ಕ್ಕೂ ಹೆಚ್ಚು ನಗರಗಳಲ್ಲಿ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಖರೀದಿಗೆ ಸಾಲ ಪಡೆದಿರುವ ಗೃಹ ಖರೀದಿದಾರರು ಮಾಸಿಕ ಇಎಂಐ ಪಾವತಿಯನ್ನೇ ಸ್ಥಗಿತಗೊಳಿಸಿದ್ದಾರೆ. ಇದು ಸರ್ಕಾರದ ನೀತಿಯ ವಿರುದ್ಧದ ಪ್ರತಿಭಟನೆಯಾಗಿದೆ. ಇದು ಭವಿಷ್ಯದಲ್ಲಿ ಚೀನಾದ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ.
ಜಿನ್‌ಪಿಂಗ್ ಅವರನ್ನು ಚೀನಾ ಅಧ್ಯಕ್ಷ ಸ್ಥಾನದಿಂದ ಮತ್ತು ಮಿಲಿಟರಿ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ ಬೀಜಿಂಗ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಈ ವೇಳೆ ಪ್ರದರ್ಶಿಸಲಾದ ಬ್ಯಾನರ್‌ನಲ್ಲಿ “ಕೋವಿಡ್ ಪರೀಕ್ಷೆಗೆ ಇಲ್ಲ ಎಂದು ಹೇಳಿ, ಆಹಾರಕ್ಕೆ ಹೌದು ಎಂದು ಹೇಳಿ. ಲಾಕ್‌ಡೌನ್‌ಗೆ ಇಲ್ಲ, ಸ್ವಾತಂತ್ರ್ಯಕ್ಕೆ ಹೌದು. ಸುಳ್ಳಿಗೆ ಇಲ್ಲ, ಘನತೆಗೆ ಹೌದು. ಸಾಂಸ್ಕೃತಿಕ ಕ್ರಾಂತಿ ಬೇಡ, ಸುಧಾರಣೆಗೆ ಹೌದು. ಮಹಾನ್ ನಾಯಕನಿಗೆ ಇಲ್ಲ ಎಂದು ಹೇಳಿ, ಮತ ಚಲಾಯಿಸಲು ಹೌದು ಎಂದು ಹೇಳಿ. ಗುಲಾಮರಾಗಬೇಡಿ, ನಾಗರಿಕರಾಗಿರಿ’ ಎಂದು ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗಳು ಜಿನ್‌ಪಿಂಗ್ ವಿರುದ್ಧ ಜನಾಭಿಪ್ರಾಯ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಕುಸಿಯುತ್ತಿರುವ ಆರ್ಥಿಕತೆ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗೆ ಬದಲು ನಮಗೆ ಮೊದಲು ಆಹಾರ ನೀಡಿ. ಲಾಕ್‌ಡೌನ್ ಸೇರಿದಂತೆ ಎಲ್ಲ ಕೊರಾನಾ ನಿಯಮಗಳನ್ನು ರದ್ದುಗೊಳಿಸಿ ಮುಕ್ತ ವ್ಯಾಪಾರ ಮತ್ತು ವಹಿವಾಟಿಗೆ ಅವಕಾಶ ನೀಡಿ ಎಂದು ಚೀನಾ ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಇನ್ನೊಂದೆಡೆ ನೆರೆಯ ರಾಷ್ಟ್ರ ಭಾರತದೊಂದಿಗೂ ಉತ್ತಮ ಬಾಂಧವ್ಯ ಹೊಂದಲು ಜಿನ್‌ಪಿಂಗ್ ಪ್ರಯತ್ನಿಸಲಿಲ್ಲ. ತನ್ನ ಆಕ್ರಮಣಾಕಾರಿ ಧೋರಣೆಯಿಂದ ಗಡಿಯಲ್ಲಿ ಸದಾ ಆತಂಕದ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಲಡಾಖ್ ಮತ್ತು ಗಲ್ವಾನ್ ಪ್ರದೇಶದಲ್ಲಿ ಚೀನಾ ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ಜಮಾಯಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಸೇನೆಯನ್ನು ಜಮಾಯಿಸಿತ್ತು. ಹಲವು ಸುತ್ತಿನ ಮಾತುಕತೆಯ ನಂತರ ವಿವಾದಿತ ಸ್ಥಳದಿಂದ ಎರಡೂ ಸೇನೆಗಳನ್ನು ಹಿಂಪಡೆಯಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿತು. ಟಿಕ್‌ಟಾಕ್ ಹಾಗೂ ಜೂಜು ಪ್ರೋತ್ಸಾಹಿಸುವ ಅನೇಕ ಚೀನಿ ಆ್ಯಪ್‌ಗ್ಳನ್ನು ಭಾರತ ನಿಷೇಧಿಸಿದೆ. ಈ ಆ್ಯಪ್‌ಗ್ಳಿಂದ ಚೀನಾಗೆ ದೊಡ್ಡ ಪ್ರಮಾಣದ ಆದಾಯ ವರ್ಗಾವಣೆಯಾಗುತ್ತಿತ್ತು. ನಿಷೇಧದಿಂದ ಚೀನಾಗೆ ಹರಿದು ಹೋಗುತ್ತಿದ್ದ ಆದಾಯವೂ ಖೋತಾ ಆಗಿದೆ.
ಅಮೆರಿಕ ವಿರುದ್ಧ ನೇರಾ ನೇರ ಆರ್ಥಿಕ ಯುದ್ಧಕ್ಕೆ ಇಳಿದ ಕಾರಣ ಚೀನಾದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿತು. ಚೀನಾ ಕಂಪನಿಗಳು ತನ್ನ ದೇಶದಲ್ಲಿ ಹೂಡಿಕೆ ಮಾಡಲು ಅಮೆರಿಕ ನಿಷೇಧ ಹೇರಿತು. ಅಲ್ಲದೇ ಚೀನಾ ವಸ್ತುಗಳ ಆಮದಿನ ಮೇಲೆ ಅದು ನಿಯಂತ್ರಣ ಹೇರಿತು. ಇದರಿಂದ ಚೀನಾ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿತು.
ಭಾರತ, ಅಮೆರಿಕದಂತಹ ರಾಷ್ಟ್ರಗಳೊಂದಿಗೆ ಕ್ಸಿ ಜಿನ್‌ಪಿಂಗ್ ವ್ಯವಹರಿಸಿದ ರೀತಿ, ತೆಗೆದುಕೊಂಡ ನಿರ್ಧಾರಗಳು ಚೀನಾದ ಆರ್ಥಿಕತೆ ಕುಸಿಯಲು ಕಾರಣವಾಯಿತು. ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಎನಿಸಿಕೊಂಡಿರುವ ರಾಷ್ಟ್ರವು ಈ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯ ಆತಂಕವನ್ನು ಚೀನಿಯರು ವ್ಯಕ್ತಪಡಿಸಿದ್ದು, ಇದು ಕೂಡ ಜಿನ್‌ಪಿಂಗ್ ವಿರುದ್ಧ ಅಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚೀನಾವನ್ನು ಬಲಿಷ್ಠಗೊಳಿಸುವ ಜತೆಗೆ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ ಜಿನ್‌ಪಿಂಗ್ ರಾಜಕೀಯ ಜೀವನ ನಿಷ್ಕರ್ಷದ ಇಳಿಜಾರಿಗೆ ಹೊರಳಲಿದೆಯೇ ಎಂಬ ಪ್ರಶ್ನೆಗೆ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚೀನಾ ಕಮ್ಯೂನಿಸ್ಟ್ ಪಕ್ಷದ 20ನೇ ರಾಷ್ಟ್ರೀಯ ಸಭೆಯಲ್ಲಿ ಉತ್ತರ ದೊರೆಯಲಿದೆ.
ಫಲಿತಾಂಶ ಏನೇ ಆದರೂ ಜಿನ್‌ಪಿಂಗ್ ವಿರುದ್ಧ ಚೀನಾ ನಾಗರಿಕರ ಆಕ್ರೋಶ ಮುಂದುವರಿಯುವ ಸೂಚನೆ ಬಲವಾಗಿದೆ. ಈ ಹಿಂದೆ 1989ರಲ್ಲಿ ಚೀನಾದಲ್ಲಿ ಇದ್ದ ಸನ್ನಿವೇಶವೇ ಮರುಸೃಷ್ಟಿಯಾಗಲಿದೆಯೇ ಎಂಬ ಅನುಮಾನ ಕಾಡಿದೆ. ಆ ಸಮಯದಲ್ಲಿ ಚೀನಾದ ಅಧ್ಯಕ್ಷ ಯಾಂಗ್ ಸರ್ಕಾರ ಆರ್ಥಿಕತೆಯನ್ನು ಉತ್ತೇಜಿಸಲು ವಿದೇಶಿ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿತು. ಇದು ದೇಶದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿತು. ಅಲ್ಲದೇ ಈ ಸಮಯದಲ್ಲೇ ಚೀನಾ ಕಮ್ಯೂನಿಸ್ಟ್ ಪಕ್ಷದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಹೊ ಯಾಬೋಂಗ್ ಅವರ ಹತ್ಯೆಯಾಯಿತು. ಈ ಎಲ್ಲ ಘಟನೆಗಳಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬೀಜಿಂಗ್‌ನ ತಿಯಾನನ್ಮೆನ್ ಸ್ಕೇರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಇವರನ್ನು ಹತ್ತಿಕ್ಕಲು ಚೀನಾ ಸರ್ಕಾರ ಸೇನೆಯನ್ನು ಅಸ್ತ್ರವಾಗಿ ಬಳಿಸಿತು. ಈ ವೇಳೆ ನೂರಾರು ಪ್ರತಿಭಟನಾಕಾರರ ಹತ್ಯೆಯಾಯಿತು. ಬಲಪ್ರಯೋಗದಿಂದ ಸಾವಿರಾರು ಮಂದಿ ಗಾಯಗೊಂಡರು. ಇದು ತಿಯಾನನ್ಮೆನ್ ಸ್ಕೇರ್ ಹತ್ಯಾಕಾಂಡ ಎಂದು ಇತಿಹಾಸದಲ್ಲಿ ದಾಖಲಾಯಿತು.
ಇದೇ ರೀತಿ ಜಿನ್‌ಪಿಂಗ್ ಅವರ ಧೋರಣೆಗಳ ವಿರುದ್ಧ ನಾಗರಿಕರ ಆಕ್ರೋಶ ಹೆಪ್ಪುಗಟ್ಟಿ ತಿಯಾನನ್ಮೆನ್ ಸ್ಕೇರ್ ಪ್ರತಿಭಟನೆ ರೀತಿ ದೊಡ್ಡ ಪ್ರಮಾಣದ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಲಿದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.
– ಸಂತೋಷ್ ಪಿ.ಯು.