ಬೀಜಿಂಗ್: ಚೀನಾದ ಕ್ಸಿಯಾನ್ ನಗರದಲ್ಲಿ ಕೊರೊನಾ ಲಾಕ್‌ಡೌನ್ ಜಾರಿಯಾಗಿ 2 ವಾರಗಳು ಕಳೆದಿವೆ. ಅಷ್ಟರಲ್ಲೇ, ಅಲ್ಲಿನ ನಾಗರಿಕರ ಸಹನೆಯೂ ಕಟ್ಟೆಯೊಡೆದಿದೆ.
ಸರ್ಕಾರದ ವತಿಯಿಂದಲೇ ಆಹಾರದ ಕಿಟ್ ನೀಡಲಾಗುತ್ತಿದೆ. ಇದರ ಹೊರತಾಗಿಯೂ ಜನರು ನೆರೆಹೊರೆಯವರೊಂದಿಗೆ ಕೊಡು-ಕೊಳ್ಳುವಿಕೆ (ಬಾರ್ಟರ್ ಸಿಸ್ಟಂ) ಮೂಲಕ ಆಹಾರವಸ್ತುಗಳು, ಸಿಗರೇಟ್ ಮತ್ತಿತರ ಉತ್ಪನ್ನಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
1600 ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ 1.30 ಕೋಟಿ ಜನಸಂಖ್ಯೆಯಿರುವ ನಗರಕ್ಕೆ ಬೀಗ ಜಡಿಯಲಾಗಿದೆ. ಆದರೆ, ಕಳೆದ 12 ದಿನಗಳಿಂದ ಆಹಾರದ ಕೊರತೆ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯಗಳ ಅಭಾವದಿಂದ ಜನರು ಬಸವಳಿಯುತ್ತಿದ್ದಾರೆ. ಲಾಕ್‌ಡೌನ್‌ನ ಕಳಪೆ ನಿರ್ವಹಣೆ ಮಾಡುತ್ತಿರುವ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಮುಗಿಬೀಳತೊಡಗಿದ್ದಾರೆ.
ಇದನ್ನೂ ಓದಿ:ಶತ್ರು ರಾಷ್ಟ್ರದೊಂದಿಗೆ ಕಾಂಗ್ರೆಸ್ ಸಂವಾದ : ಇದು ರಾಷ್ಟ್ರ ವಿರೋಧಿ ಚಿಂತನೆ ; ಕಾರ್ಣಿಕ್
ಕೊರೊನಾ ಮೊದಲ ಅಲೆಯ ವೇಳೆ ವುಹಾನ್ ನಗರವನ್ನು ಲಾಕ್‌ಡೌನ್ ಮಾಡಿದಾಗಲೂ ಇಂಥ ಸ್ಥಿತಿ ಬಂದಿರಲಿಲ್ಲ. ಆಸ್ಪತ್ರೆಗಳಲ್ಲಿ ಕೊರೊನಾ ಹೊರತಾದ ರೋಗಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ, ಸೂಕ್ತ ಚಿಕಿತ್ಸೆ ಸಿಗದೆ ಹಲವು ರೋಗಿಗಳ ಪರಿಸ್ಥಿತಿ ಗಂಭೀರವಾಗಿವೆ. ಸರ್ಕಾರಿ ಅಧಿಕಾರಿಗಳು ವಾಸವಿರುವ ವಸತಿ ಗೃಹಗಳಿಗೆ ಮಾತ್ರ ಹೆಚ್ಚಿನ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದೂ ಸ್ಥಳೀಯರು ಕಿಡಿಕಾರಿದ್ದಾರೆ.