ಇಸ್ಲಾಮಾಬಾದ್ : ತನ್ನನ್ನು ಅವಲಂಬಿಸಿರುವ ದೇಶಗಳು “ಆಗದು’ ಎಂದು ಹೇಳುವುದನ್ನು ಚೀನ ಎಂದಿಗೂ ಸಹಿಸುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ಥಾನ. ಚೀನ ಈಚೆಗೆ ಪಾಕಿಸ್ಥಾನಕ್ಕೆ ಅದರ Gwadar ಬಂದರಿನಲ್ಲಿ ತಾನು ನಡೆಸುವ ಎಲ್ಲ ವ್ಯಾಪಾರ ವಹವಾಟುಗಳನ್ನು ಚೀನದ “ಯುವಾನ್’ ಕರೆನ್ಸಿಯಲ್ಲೇ ಮಾಡಬೇಕು ಎಂದು ತಾಕೀತು ಮಾಡಿತ್ತು. ಆದರೆ ಪಾಕಿಸ್ಥಾನ ಅದಕ್ಕೆ ಒಪ್ಪಿರಲಿಲ್ಲ.
ಇದರಿಂದ ಕುಪಿತಗೊಂಡ ಚೀನ ತಾನು ಸಿಪಿಇಸಿ ಯೋಜನೆಗೆ ಇನ್ನು ಹಣ ಒದಗಿಸುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಮಾತ್ರವಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಅಣೆಕಟ್ಟಿಗೂ ತಾನಿನ್ನು ಹಣ ಪೂರೈಸುವುದಿಲ್ಲ ಎಂದು ಹೇಳಿತ್ತು.
ಇದೀಗ ಚೀನದ ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಕಿಸ್ಥಾನ ಚೀನಕ್ಕೆ ಸಂಪೂರ್ಣವಾಗಿ ಮಣಿದ ಅದರ ಎಲ್ಲ ಶರತ್ತುಗಳನ್ನು ಒಪ್ಪಿಕೊಂಡಿದೆ ಎಂದು ಪಾಕ್ ದೈನಿಕ ಡಾನ್ ವರದಿ ಮಾಡಿದೆ.
Gwadar ಬಂದರಿನಲ್ಲಿ ನಡೆಯುವ ವ್ಯಾಪಾರ ವಹಿವಾಟನ್ನು ಚೀನೀ ಕರೆನ್ಸಿಯಲ್ಲೇ (ಡಾಲರ್‌ಗೆ ಸರಿಸಮ ನೆಲೆಯಲ್ಲಿ) ನಡೆಸವುದಕ್ಕೆ ಪಾಕ್ ಒಪ್ಪಿಕೊಂಡಿದೆ; ಇದೇ ರೀತಿ ಉಭಯ ದೇಶಗಳ ನಡುವಿನ ಎಲ್ಲ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ಇನ್ನು ಚೀನೀ ಕರೆನ್ಸಿಯಲ್ಲೇ ನಡೆಯಲಿದೆ.
ಇದು ಪಾಕಿಸ್ಥಾನದ ಸಾರ್ವಭೌಮತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಉಭಯ ದೇಶಗಳ ನಡುವಿನ ಆರ್ಥಿಕ ವಹಿವಾಟಿನ ಎಲ್ಲ ಲಾಭಗಳು ಚೀನಕ್ಕೆ ಸಿಗಲಿವೆ ಎಂದಿರುವ ಡಾನ್, “ಸಿಪಿಇಸಿ ಯೋಜನೆ ನಿಜಕ್ಕೂ ಪಾಕಿಸ್ಥಾನಕ್ಕೆ ಬೇಕೇ’ ಎಂದು ಪ್ರಶ್ನಿಸಿದೆ.