ಬೀಜಿಂಗ್: ಯುರೋಪ್ ಜತೆಗಿನ ಸಂಪರ್ಕವನ್ನು ಇನ್ನಷ್ಟು ಬಲಗೊಳಿಸುವ ಮತ್ತು ರಫ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಿಂದ ಲಂಡನ್‌ಗೆ ಸರಕು ಸಾಗಣೆ ರೈಲು ಸಂಚಾರವನ್ನು ಚೀನಾ ಆರಂಭಿಸಿದೆ.
ರೈಲು, ಚೀನಾದ ಜೆಜಿಯಾಂಗ್ ಪ್ರಾಂತ್ಯದ ಯಿವು ರೈಲ್ವೆ ನಿಲ್ದಾಣದಿಂದ ಸೋಮವಾರ ಸಂಚಾರವನ್ನು ಆರಂಭಸಿದ್ದು, 18 ದಿನಗಳಲ್ಲಿ 12,000 ಕಿ.ಮೀ. ಸಂಚರಿಸಲಿದೆ. ಕಜಕಿಸ್ತಾನ್, ರಷ್ಯಾ, ಬೆಲಾರಸ್, ಪೋಲೆಂಡ್, ಜರ್ಮನಿ, ಬೆಲ್ಜಿಯಂ ಮತ್ತು ಫ್ರಾನ್ಸ್‌ನ ಮೂಲಕ ಹಾದು ರೈಲು ಲಂಡನ್ ಅನ್ನು ತಲುಪಲಿದೆ. ಯುರೋಪಿನ ಹಲವಾರು ನಗರಗಳಿಗೆ
ಈಗಾಗಲೇ ರೈಲ್ವೆ ಸಂಪರ್ಕ ಹೊಂದಿರುವ ಚೀನಾ ಇದೀಗ ಬ್ರಿಟನ್ ಜೊತೆ ರೈಲ್ವೆ ಸಂಪರ್ಕ ಕಲ್ಪಿಸಿಕೊಂಡಿದೆ.
ಶತಮಾನಗಳ ಹಿಂದೆ ಇದ್ದ ಸಿಲ್ಕ್ ರೋಡ್ ಮಾರ್ಗದ ಮೂಲಕ ಏಷ್ಯಾವನ್ನು ಆಫ್ರಿಕಾ ಮತ್ತು ಯುರೋಪ್‌ನೊಂದಿಗೆ ಬೆಸೆಯಲು ಚೀನಾ ಯೋಜನೆ ರೂಪಿಸಿದೆ. ಇದರ ಭಾಗವಾಗಿ ಲಂಡನ್‌ಗೆ ರೈಲು ಸೇವೆ ಒದಗಿಸುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರು ಈ ಮೂಲ ಸೌಕರ್ಯ ನಿರ್ಮಾಣ ಕಾರ್ಯಕ್ಕೆ 2013ರಲ್ಲಿ ಚಾಲನೆ ನೀಡಿದ್ದರು.
ಯಿವು ಪ್ರಾಂತ್ಯದ ಟೈಮೆಕ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ ಕಂಪನಿ ಸ್ಪೇನ್‌ನ ಮ್ಯಾಡ್ರಿಡ್ ವರೆಗೆ ರೈಲನ್ನು ಓಡಿಸುತ್ತಿದ್ದು, ಈಗ ಲಂಡನ್ ವರೆಗೂ ರೈಲು ಸೇವೆ ವಿಸ್ತರಿಸುತ್ತಿದೆ. ಇದರಿಂದ ವಿಮಾನದಲ್ಲಿ ಸಾಗಣೆಯ ಅರ್ಧ ವೆಚ್ಚ ಉಳಿತಾಯವಾಗಲಿದೆ. ಜತೆಗೆ ಸಮುದ್ರ ಮೂಲಕ ಸರಕು ಸಾಗಣೆಯ ಅರ್ಧ ಸಮಯ ಉಳಿತಾಯವಾಗಲಿದೆ.