ಹೊಸದಿಲ್ಲಿ : ಭಾರತದ ಗಡಿಗೆ ಅತ್ಯಂತ ನಿಕಟ ಪ್ರದೇಶಗಳಲ್ಲಿ ಚೀನ ತನ್ನ ವಾಯು ದಾಳಿ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ.
ಚೀನದ ಪಡೆಗಳು ಅತ್ಯಂತ ಡೆಡ್ಲಿ ಎನಿಸಿರುವ ಡೈವಿಂಗ್ ಈಗಲ್ ಜೆಟ್ ಯುಎವಿ ಗಳನ್ನು ಮತ್ತು ಎಚ್-6ಕೆ ಬಾಂಬರ್‌ಗಳನ್ನು ಭಾರತದ ಗಡಿಗೆ ನಿಕಟವೇ ಇರುವ ತನ್ನ ಎರಡು ವಾಯು ನೆಲೆಗಳಲ್ಲಿ ಸ್ಥಾಪಿಸಿವೆ.
ಮಾಧ್ಯಮಕ್ಕೆ ದೊರಕಿರುವ ಮಾಹಿತಿಗಳ ಪ್ರಕಾರ ಚೀನದ ಪೀಪಲ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಪಿಎಲ್‌ಎಎಎಫ್), ಅತ್ಯಂತ ಡೆಡ್ಲಿ ವಾಯು ದಾಳಿ ಸಂಘಟಿಸುವ ಡಿವೈನ್ ಈಗಲ್ ಜೆಟ್ ಯುಎವಿ ಗಳನ್ನು ನಿರ್ವಹಿಸುತ್ತಿದೆ.
ಇವುಗಳನ್ನು ಮಲಾನ್ ಏರ್‌ಬೇಸ್‌ನಲ್ಲಿ ನಿಯೋಜಿಸಲಾಗಿದೆ. ಇದೇ ರೀತಿ ಹೋಪಿಂಗ್ ವಾಯು ನೆಲೆಯಲ್ಲಿ ಎಚ್-6ಕೆ ಬಾಂಬರ್‌ಗಳನ್ನು ಸ್ಥಾಪಿಸಲಾಗಿದೆ.
ಡಿವೈನ್ ಈಗಲ್ ಯುಎವಿ ಗಳು ವಿಶ್ವದ ಅತೀ ದೊಡ್ಡ ಮಾನವ ರಹಿತ ದಾಳಿ ವಿಮಾನಗಳಾಗಿವೆ. ಇದು 15 ಮೀಟರ್ ಉದ್ದವಿದ್ದು ಇದರ ರೆಕ್ಕೆಗಳ ಅಗಲ 35ರಿಂದ 45 ಮೀಟರ್ ಇದೆ.
ಈ ಡೈವಿಂಗ್ ಈಗಲ್ ಜೆಟ್ ಯುಎವಿ ಗಳು ನಿಗೂಢವಾಗಿ ಬರುವ ಅಮೆರಿಕದ ಎಫ್ 22 ಮತ್ತು ಎಫ್ 35 ಫೈಟರ್ ಜೆಟ್‌ಗಳನ್ನು ಸುಲಭದಲ್ಲಿ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿವೆ ಎಂದು ಚೀನ ಹೇಳಿಕೊಂಡಿದೆ.