ಬೀಜಿಂಗ್: ಡೋಕ್ಲಾಂ ವಿಚಾರದಲ್ಲಿ ಭಾರತಕ್ಕೆ ಬೆದರಿಕೆ ಹಾಕುವಂತೆ ಮಾತನಾಡುತ್ತಿರುವ ಚೀನ, ಬುಧವಾರ ಮತ್ತೂಮ್ಮೆ ಇದೇ ಕೆಲಸ ಮುಂದುವರಿಸಿದೆ. ಡೋಕ್ಲಾಂನಲ್ಲಿ ಚೀನ ಭೂಮಿಯಿಂದ ಬೇಷರತ್ತಾಗಿ ಸೇನೆಯನ್ನು ವಾಪಸ್ ಪಡೆಯಿರಿ ಎಂದು ಚೀನ ಭಾರತಕ್ಕೆ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಯಾವುದೇ ಕಾರಣಕ್ಕೂ ಸೇನೆ ಹಿಂದೆಗೆಯುವುದಿಲ್ಲ ಎಂದು ಖಡಕ್ಕಾಗಿ ಹೇಳಿದೆ.
ಜು.28ರಂದು ನಡೆದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನದ ಸಹವರ್ತಿ ಯಾಂಗ್ ಜೈಶಿ ಅವರ ಮಾತುಕತೆ ವಿವರಗಳನ್ನು ಬಿಡಿಸಿಟ್ಟ ಚೀನದ ವಿದೇಶಾಂಗ ಸಚಿವಾಲಯ, ಡೋಕ್ಲಾಂನಲ್ಲಿ ಭಾರತ ಚೀನದ ಗಡಿ ಸಾರ್ವಭೌಮತೆ ಉಲ್ಲಂಘಿಸಿದೆ. ಆದ್ದರಿಂದ ಕೂಡಲೇ ಸೇನೆಯನ್ನು ಹಿಂಪಡೆಯಬೇಕು ಎಂದು ಯಾಂಗ್ ಅವರು ತಿಳಿಸಿದ್ದಾಗಿ ಹೇಳಿದೆ. ಮಾತುಕತೆ ಸಂದರ್ಭ ಬ್ರಿಕ್ಸ್ ಸಹಕಾರ, ದ್ವಿಪಕ್ಷೀಯ ಸಂಬಂಧ ಮತ್ತು ಪ್ರಸ್ತುತ ಕೆಲ ಪ್ರಮುಖ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ಹೇಳಿದೆ.
‘ಭಾರತ ಕಿರಿಕ್ ಮಾಡ್ತಿದೆ, ನಾವೇ ತಾಳ್ಮೆಯಿಂದಿದ್ದೇವೆ’: ಗಡಿಯಲ್ಲಿ ಪದೇ ಪದೆ ಕಿರಿಕ್ ಮಾಡುವ ಸಾಮಾನ್ಯ ಚಾಳಿ ಹೊಂದಿರುವ ಚೀನ, ಗಡಿಯಲ್ಲಿ ಭಾರತವೇ ಕಿರಿಕ್ ಮಾಡುತ್ತಿರುವುದಾಗಿ ಹೇಳಿದೆ. ಜೊತೆಗೆ ಈ ವಿಚಾರದಲ್ಲಿ ನಾವು ಗರಿಷ್ಠ ತಾಳ್ಮೆಯಿಂದಿದ್ದೇವೆ ಎಂದಿದೆ. ಚೀನ ವಿದೇಶಾಂಗ ಸಚಿವಾಲಯ ಡೋಕ್ಲಾಂ ವಿಚಾರದಲ್ಲಿ ಹೇಳಿಕೆಯೊಂದನ್ನು ನೀಡಿದ್ದು, ಭಾರತ ತನ್ನ ತಪ್ಪು ತಿದ್ದಿಕೊಳ್ಳಲು ಮುಂದಾಗುತ್ತಿಲ್ಲ. ಬದಲಿಗೆ ತನ್ನ ಸೇನೆ ಅಕ್ರಮವಾಗಿ ಒಳ ನುಗ್ಗಿದ್ದನ್ನು ಸಮರ್ಥಿಸಿಕೊಳ್ಳಲು ಕಥೆಗಳನ್ನು ಕಟ್ಟುತ್ತಿದೆ ಎಂದು 15 ಪುಟಗಳ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೆ ಸರಿಯಲ್ಲ
ಡೋಕ್ಲಾಂಗೆ ಚೀನ ರಸ್ತೆ ನಿರ್ಮಿಸಿ ಯಥಾನುಸ್ಥಿತಿ ಕಾಯ್ದುಕೊಳ್ಳುವ ಒಪ್ಪಂದ ಉಲ್ಲಂಘಿಸಿದ್ದು, ಯಾವುದೇ ಕಾರಣಕ್ಕೂ ಸೇನೆ ಹಿಂದೆಗೆಯಲ್ಲ. ಚೀನ ಸೇನೆ ನಿಯೋಜನೆ ಮಾಡಿದ್ದಕ್ಕೆ ಪ್ರತಿಯಾಗಿ ತಾನೂ ಸೇನೆ ನಿಯೋಜನೆ ಮಾಡಿದ್ದಾಗಿ ಭಾರತ ಹೇಳಿದೆ.