ಬೀಜಿಂಗ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಪಟ್ಟದಿಂದ ನಿರ್ಗಮಿಸಿ, ಜೋ ಬೈಡೆನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಚೀನಾ ವಿರುದ್ಧ ಪೂರ್ವಾಗ್ರಹ ಪೀಡಿತ ಮತ್ತು ದ್ವೇಷದ ಆರೋಪದ ಮೇಲೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಮೈಕ್ ಪೊಂಪಿಯೋ ಮತ್ತು ಇತರ 27 ಮಂದಿ ಉನ್ನತ ಅಧಿಕಾರಿಗಳ ಮೇಲೆ ಚೀನಾ ಸರ್ಕಾರ ನಿರ್ಬಂಧ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಬುಧವಾರ(ಜನವರಿ 20,2021) ಜೋ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಟ್ರಂಪ್ ಆಡಳಿತಾವಧಿಯಲ್ಲಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುಯೈಂಗ್ ಖಚಿತಪಡಿಸಿದ್ದಾರೆ. ಜೋ ಪದಗ್ರಹಣ ಸಮಾರಂಭಕ್ಕೆ ಟ್ರಂಪ್ ಗೈರುಹಾಜರಾಗಿದ್ದರು.
ಪೊಂಪಿಯೋ ಹೊರತುಪಡಿಸಿ ವಾಣಿಜ್ಯ ಮತ್ತು ಉತ್ಪಾದನಾ ಪಾಲಿಸಿ ಕಚೇರಿಯ ಮಾಜಿ ನಿರ್ದೇಶಕ ಪೀಟರ್ ನವಾರ್ರೋ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ರೋಬರ್ಟ್ ಓಬ್ರೈಯನ್, ಮಾಜಿ ಅಸಿಸ್ಟೆಂಟ್ ಸೆಕ್ರಟರೊ ಡೇವಿಡ್ ಆರ್ ಸ್ಟಿಲ್ ವೆಲ್, ಮಾಜಿ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಮ್ಯಾಥ್ಯೂ ಪೊಟ್ನಿಗರ್, ಹೆಲ್ತ್ ಆ್ಯಂಡ್ ಹ್ಯೂಮನ್ ಸರ್ವೀಸ್ ನ ಮಾಜಿ ಕಾರ್ಯದರ್ಶಿ ಅಲೆಕ್ಸ್ ಅಝರ್, ಆರ್ಥಿಕಾಭಿವೃದ್ದಿ ಮಾಜಿ ಕಾರ್ಯದರ್ಶಿ ಕೈಥ್ ಜೆ ಕ್ರಾಚ್, ಕೆಲ್ಲಿ ಕ್ರಾಫ್ಟ್, ಜಾನ್ ಬೋಲ್ಟನ್, ಸ್ಟೀಫನ್ ಬಾನ್ನೊನ್ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ ಹುಆ ವರದಿ ಮಾಡಿದೆ.
ಟ್ರಂಪ್ ಆಡಳಿತಾವಧಿಯಲ್ಲಿ ಇವರೆಲ್ಲರೂ ಚೀನಾಕ್ಕೆ ಸಂಬಂಧಿಸಿದ ತೆಗೆದುಕೊಂಡ ಸರಣಿ ಕಠಿಣ ನಿರ್ಧಾರಗಳ ಬಗ್ಗೆ ಹೊಣೆಗಾರರಾಗಿದ್ದಾರೆ ಎಂದು ವಕ್ತಾರ ತಿಳಿಸಿದ್ದಾರೆ. ಪೊಂಪಿಯೊ ಹಾಗೂ ಇತರ 27 ಮಂದಿ ಹಾಗೂ ಅವರ ಕುಟುಂಬದ ಸದಸ್ಯರು ಹಾಂಗ್ ಕಾಂಗ್, ಮತ್ತು ಚೀನಾದ ಮಕಾವೋ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲ ಇವರಿಗೆ ಸಂಬಂಧಪಟ್ಟ ಕಂಪನಿಗಳು, ಸಹ ಸಂಸ್ಥೆಗಳು ಕೂಡಾ ಚೀನಾದಲ್ಲಿ ವ್ಯವಹಾರ ನಡೆಸುವುದಕ್ಕೆ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದೆ.