ಹೊಸದಿಲ್ಲಿ: ಲಡಾಖ್‌ನ ಎಲ್‌ಎಸಿಯ ವಿವಾದಿತ ಸ್ಥಳದಿಂದ ಚೀನ ಸೇನೆ ವಾಪಸಾತಿ ಕೈಗೊಳ್ಳುತ್ತಿರುವ ವೀಡಿಯೊವೊಂದನ್ನು ಭಾರತೀಯ ಸೇನೆ ಮಂಗಳವಾರ ಬಿಡುಗಡೆ ಮಾಡಿದೆ.
ಹಿಮಬೆಟ್ಟದ ನೆತ್ತಿ ಮೇಲೆ ಹೂಡಿದ್ದ ಅಕ್ರಮ ಟೆಂಟ್‌ಗಳನ್ನು ಪಿಎಲ್‌ಎ ಸೈನಿಕರು ಕೀಳುತ್ತಿರುವ ದೃಶ್ಯಗಳು ವೀಡಿಯೋದಲ್ಲಿವೆ. ಯುದ್ದೋಪಕರಣಗಳನ್ನು ಹೊತ್ತು ಪರ್ವತದಿಂದ ಇಳಿಯುತ್ತಾ, ತಮಗಾಗಿ ಕಾಯುತ್ತಿರುವ ಟ್ರಕ್‌ನತ್ತ ಚೀನೀ ಸೈನಿಕರು ಧಾವಿಸುತ್ತಿರುವ ದೃಶ್ಯಗಳನ್ನು ಝೂಮ್ ನೋಟದಲ್ಲಿ ವೀಡಿಯೋ ತೋರಿಸಿದೆ.
ನಿರ್ಮಾಣಗಳು ಉಡೀಸ್: ಅಲ್ಲದೆ ಈ 10 ತಿಂಗಳಲ್ಲಿ ಸೈನಿಕರು ತಂಗಲು, ಯುದ್ದೋಪಕರಣಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ನಿರ್ಮಿಸಲಾಗಿದ್ದ ತಾತ್ಕಾಲಿಕ ಕಟ್ಟಡ ನಿರ್ಮಾಣಗಳನ್ನೂ ಚೀನ ಸೇನೆ ಜೆಸಿಬಿಗಳ ಮೂಲಕ ತೆರವುಗೊಳಿಸುತ್ತಿರುವ ದೃಶ್ಯಗಳೂ ವೀಡಿಯೋದಲ್ಲಿ ಸಾಕ್ಷಿಯಾಗಿವೆ. ಆದರೆ ಪ್ಯಾಂಗಾಂಗ್ ಸರೋವರದ ಯಾವ ನಿರ್ದಿಷ್ಟ ದಂಡೆಯ (ಉತ್ತರ ಅಥವಾ ದಕ್ಷಿಣ) ಚಿತ್ರಣ ಇದು ಎಂಬುದು ವೀಡಿಯೋ ದಲ್ಲಿ ಸ್ಪಷ್ಟವಾಗಿಲ್ಲ.
24 ಗಂಟೆಗಳಲ್ಲಿ ಮುಕ್ತಾಯ: “ಪ್ಯಾಂಗಾಂಗ್ ತಟದಲ್ಲಿ ಚೀನ ಸೇನೆಯ ಸಂಪೂರ್ಣ ವಾಪಸಾತಿ 24 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಅಚ್ಚರಿಯ ವೇಗದಲ್ಲಿ ವಾಪಸಾತಿ ಪ್ರಕ್ರಿಯೆಯನ್ನು ಚೀನ ಕೈಗೊಂಡಿದೆ’ ಎಂದು ಭಾರತೀಯ ಸೇನೆಯ ಮೂಲಗಳು “ನ್ಯೂಸ್ 18’ಗೆ ತಿಳಿಸಿವೆ.
ವಾಪಸಾತಿ ಬಳಿಕ ಮುಂದೇನು?
ಪ್ರಸ್ತುತ ಭಾರತ- ಚೀನ ಏಕಕಾಲದಲ್ಲಿ ಸೇನೆ ವಾಪಸಾತಿ ಪ್ರಕ್ರಿಯೆ ಕೈಗೊಂಡಿರುವುದು ಪ್ಯಾಂಗಾಂಗ್‌ನ ಬಿಕ್ಕಟ್ಟಿನ ಸ್ಥಳದಲ್ಲಿ. ಇಲ್ಲಿ ಸೇನೆ ವಾಪಸಾತಿ ಸಂಪೂರ್ಣಗೊಂಡ 48 ಗಂಟೆ ಬಳಿಕ ಉಭಯ ರಾಷ್ಟಗಳು 10ನೇ ಸುತ್ತಿನ ಕಾಪ್ಸ್ì ಕಮಾಂಡರ್ ಗಳ ಮಟ್ಟದ ಸಭೆ ನಡೆಸಲಿವೆ. ಮುಂದಿನ ವಾಪಸಾತಿ ಯಾವ ಸ್ಥಳದಲ್ಲಿ ನಡೆಸಬೇಕು ಎಂಬುದರ ಕುರಿತು ಚರ್ಚಿಸಲಿವೆ.