ಹೊಸದಿಲ್ಲಿ : “ಡೋಕ್ಲಾಂ ಚೀನ ಭೂಭಾಗಕ್ಕೆ ಒಳಪಟ್ಟ ಪ್ರದೇಶ; ಅಲ್ಲಿನ ಯಥಾ ಸ್ಥಿತಿಯನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ’ ಎಂದು ಚೀನ ಇಂದು ಸೋಮವಾರ ಹೇಳಿದೆ.
ಈ ಹೇಳಿಕೆಯ ಮೂಲಕ ಚೀನ, ಎರಡು ದಿನಗಳ ಹಿಂದಷ್ಟೆ ಭಾರತೀಯ ರಾಜತಂತ್ರಜ್ಞ ಗೌತಮ್ ಬಂಬವಾಲೆ ಅವರು ಚೀನಕ್ಕೆ ಡೋಕ್ಲಾಂ ಯಥಾಸ್ಥಿತಿ ಬದಲಾಯಿಸುವುದರ ವಿರುದ್ಧ ನೀಡಿದ್ದ ಎಚ್ಚರಿಕೆಗೆ ತಿರುಗೇಟು ನೀಡಿದೆ.
“ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ಚೀನ ಗಡಿಯಲ್ಲಿ ಶಾಂತಿ, ಸ್ಥಿರತೆ ಮತ್ತು ನೆಮ್ಮದಿಯನ್ನು ಕಾಪಿಡುವುದಕ್ಕೆ ಬದ್ಧವಾಗಿದೆ. ಡೋಕ್ಲಾಂ ಚೀನಕ್ಕೆ ಸೇರಿದ್ದೆಂದು ಹೇಳುವುದಕ್ಕೆ ಐತಿಹಾಸಿಕ ದಾಖಲೆಗಳಿವೆ; ಒಪ್ಪಂದಗಳಿವೆ; ಆದುದರಿಂದ ಡೋಕ್ಲಾಂ ನಲ್ಲಿನ ಚೀನದ ಯಾವತ್ತೂ ಚಟುವಟಿಕೆಗಳು ಅದರ ಸಾರ್ವಭೌಮತೆಯ ಹಕ್ಕಾಗಿದೆ. ಅಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಪ್ರಶ್ನೆ ಉದ್ಬವವಾಗುವುದಿಲ್ಲ’ ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದರು.
“ಕಳದ ವರ್ಷ ನಮ್ಮ ಸಂಘಟಿತ ಪ್ರಯತ್ನ, ರಾಜತಾಂತ್ರಿಕ ಯತ್ನಗಳು ಮತ್ತು ವಿವೇಕಯುಕ್ತ ನಡೆಯಿಂದಾಗಿ ಡೋಕ್ಲಾಂ ಸಮಸ್ಯೆಯನ್ನು ನಾವು ಶಾಂತಿ ಮತ್ತು ಸೌಹಾರ್ದದಿಂದ ಬಗೆ ಹರಿಸಿಕೊಂಡೆವು. ಭಾರತ ಇದರಿಂದ ಕೆಲವು ಪಾಠಗಳನ್ನು ಕಲಿತುಕೊಂಡಿರಬಹುದೆಂದು ನಾವು ಹಾರೈಸುತ್ತೇವೆ”
”….ಅಂತೆಯೇ ಅದು ಐತಿಹಾಸಿಕ ನೀತಿ ನಿಯಮ ಒಪ್ಪಂದಗಳಿಗೆ ಬದ್ಧವಾಗುಳಿದು, ಗಡಿಯಲ್ಲಿ ಶಾಂತಿ,ಸೌಹಾರ್ದ ಮತ್ತು ಸಾಮರಸ್ಯವನ್ನು ಕಾಪಿಡುವ ನಿಟ್ಟಿನಲ್ಲಿ ಚೀನದೊಂದಿಗೆ ಸೇರಿಕೊಂಡು ಶ್ರಮಿಸುವುದೆಂದು ನಾವು ಹಾರೈಸುತ್ತೇವೆ. ಮತ್ತು ಆ ಮೂಲಕ ಉಭಯ ದೇಶಗಳೊಳಗಿನ ದ್ವಿಪಕ್ಷೀಯ ಬಾಂಧವ್ಯಗಳಿಗಾಗಿ ಉತ್ತಮ ವಾತಾವರಣವನ್ನು ಕಾಯ್ದುಕೊಳ್ಳುವುದೆಂದು ನಾವು ಹಾರೈಸುತ್ತೇವೆ ” ಎಂಬುದಾಗಿ ಹುವಾ ಚುನ್ಯಿಂಗ್ ಹೇಳಿದರು.