ಬೀಜಿಂಗ್ : ಸಿಂಗಾಪುರದ ಶಾಂಗ್ರಿ ಲಾ ಸಂವಾದದಲ್ಲಿ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ – ಚೀನ ಸಂಬಂಧಗಳ ಬಗ್ಗೆ ಆಡಿರುವ ಧನಾತ್ಮಕ ಮಾತುಗಳನ್ನು ಚೀನ ಬಹುವಾಗಿ ಪ್ರಶಂಸಿಸಿದೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ತೀವ್ರತೆಯನ್ನು ಅಂತೆಯೇ ಉಳಿಸಿಕೊಂಡು ಮುಂದಡಿ ಇಡುವ ನಿಟ್ಟಿನಲ್ಲಿ ಉಭಯ ದೇಶಗಳ ನಾಯಕರೊಳಗೆ ಒಮ್ಮತ ಏರ್ಪಡುವುದಕ್ಕೆ ಶ್ರಮಿಸುವುದಾಗಿ ಚೀನ ಹೇಳಿದೆ.
ಸಿಂಗಾಪುರದ ಶಾಂಗ್ರಿಲಾ ಸಂವಾದದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಪ್ರಧಾನ ಆಶಯ ಭಾಷಣದಲ್ಲಿ “ಭಾರತ ಮತ್ತು ಚೀನ ಪರಸ್ಪರ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಜತೆಗೂಡಿ ಕೆಲಸ ಮಾಡಿದಾಗ ಏಶ್ಯಕ್ಕೆ ಮತ್ತು ವಿಶ್ವಕ್ಕೆ ಉಜ್ವಲ ಭವಿಷ್ಯ ಪ್ರಾಪ್ತವಾಗುತ್ತದೆ ಎಂದು ಹೇಳಿದ್ದರು.
ಭಾರತ ಮತ್ತು ಚೀನ ಪರಸ್ಪರರೊಳಗಿನ ಪ್ರಮುಖ ವಿಷಯಗಳನ್ನು ಬಗೆಹರಿಸಿಕೊಳ್ಳುವಲ್ಲಿ ಪ್ರೌಢತೆ ಮತ್ತು ವಿವೇಕವನ್ನು ತೋರಿರುವ ಕಾರಣ ಉಭಯತರ ಗಡಿಯಲ್ಲಿ ಶಾಂತಿ ನೆಲೆಸುವಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಮೋದಿ ಅವರ ಈ ಧನಾತ್ಮಕ ಮಾತುಗಳನ್ನು ಚೀನದ ವಿದೇಶ ಸಚವಾಲಯದ ವಕ್ತಾರ ಹುವಾ ಶುನ್ಯಿಂಗ್ ಸ್ವಾಗತಿಸಿ ಪ್ರಶಂಸಿಸಿದ್ದಾರೆ.