ಹೊಸದಿಲ್ಲಿ: ಚೀನದಲ್ಲಿ ನಿಗೂಢ ನ್ಯುಮೋ ನಿಯ ವೈರಾಣು ಹೆಚ್ಚುತ್ತಿರುವ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ಭಾರತದಲ್ಲಿ ಆರೋಗ್ಯ ವ್ಯವಸ್ಥೆಯ ಸಿದ್ಧತೆಯನ್ನು ಪರಿಶೀಲಿ ಸುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ.
ಈ ಬೆನ್ನಲ್ಲೇ ಕರ್ನಾಟಕ ಸಹಿತ 6 ರಾಜ್ಯಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಸಕ್ರಿಯಗೊಳಿಸಿವೆ. ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಹರಿಯಾಣ ರಾಜ್ಯಗಳು ಉಸಿರಾಟದ ತೊಂದರೆ ಎಂದು ದಾಖಲಾಗುವ ರೋಗಿಗಳ ಪರಿಶೀಲನೆಯಿಂದ ಹಿಡಿದು ಅವರನ್ನು ನಿಭಾಯಿಸಲು ಸನ್ನದ್ಧತೆ ವರೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಖಾತರಿಪಡಿಸಿಕೊಳ್ಳುವಂತೆ ಆಸ್ಪತ್ರೆಗಳು ಮತ್ತು ಸಿಬಂದಿಗೆ ಹೇಳಲಾಗಿದೆ.
ಕರ್ನಾಟಕದಲ್ಲಿ ಕೋವಿಡ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಸರ್ವೇಕ್ಷಣ ಕಣ್ಗಾವಲು ಪಡೆ ಸಕ್ರಿಯಗೊಳಿಸುವುದು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ಐಎಲ್‌ಐ ಪ್ರಕರಣಗಳ ಪ್ರತಿದಿನದ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು, ಮಾಸ್ಕ್ ಧಾರಣೆ, ವ್ಯವಸ್ಥೆ ಪರಿಶೀಲನೆ ಸಹಿತ ವಿವಿಧ ಕ್ರಮಗಳನ್ನು ಕೈಗೊಳ್ಳಲು ಮಾರ್ಗಸೂಚಿಯನ್ನೇ ಬಿಡುಗಡೆಗೊಳಿಸಲಾಗಿದೆ. ಇತ್ತ ತಮಿಳು ನಾಡಿನಲ್ಲೂ ಇದೇ ರೀತಿಯ ಕ್ರಮ ಗಳನ್ನು ಕೈಗೊಳ್ಳಲಾಗಿದೆ.
ಗುಜರಾತ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಮೂಲಸೌಕರ್ಯ ಸಿದ್ಧತೆಗೆ ಒತ್ತು ನೀಡಲಾಗುತ್ತಿದೆ. ಉತ್ತರಾಖಂಡದಲ್ಲಿ ಚೀನ ದೊಂದಿಗೆ ಗಡಿ ಹಂಚಿಕೊಳ್ಳುವ ಚಮೋಲಿ, ಉತ್ತರಕಾಶಿ, ಪಿಥೋರಗಢ ಜಿಲ್ಲೆಗಳಲ್ಲಿ ಉಸಿರಾಟದ ಸಮಸ್ಯೆ ಹೊಂದಿರುವ ರೋಗಿಗಳ ಬಗ್ಗೆ ಹೆಚ್ಚಿನ ಕಣ್ಗಾವಲು ವಹಿಸುವಂತೆ ಕೇಳಲಾಗಿದೆ.
ಹರಿಯಾಣದಲ್ಲಿ ನ್ಯುಮೋನಿಯ ರೋಗ ಲಕ್ಷಣದ ಪ್ರಕರಣಗಳ ಕಂಡುಬಂದರೆ ತತ್‌ಕ್ಷಣವೇ ವರದಿ ಮಾಡುವಂತೆ ಸೂಚನೆ ನೀಡಿದ್ದು, ರಾಜಸ್ಥಾನದಲ್ಲಿ ಜನರಿಗೆ ರೋಗ ಲಕ್ಷಣಗಳ ಬಗ್ಗೆ ತಿಳಿಸಿ ಎಚ್ಚರಿಕೆ ವಹಿಸುವಂತೆ ನಿರ್ದೇಶಿಸಲಾಗಿದೆ.