Advertisement
ಪಾಕಿಸ್ಥಾನದ ಕರಾಚಿ ನಗರಿಯಲ್ಲಿ ಕಳೆದ ಶುಕ್ರವಾರ ಚೀನದ ವಾಣಿಜ್ಯ ದೂತವಾಸದ ಮೇಲೆ ಉಗ್ರರ ದಾಳಿಯಾಗಿತ್ತು. ಈ ದಾಳಿಯ ನಂತರ ನಿಜಕ್ಕೂ ಚೀನ ವ್ಯಗ್ರಗೊಂಡಿತ್ತು. ಆದರೂ ಪಾಕ್ ಜೊತೆಗಿನ ತನ್ನ ಸಂಬಂಧಕ್ಕೆ ಈ ಘಟನೆ ಅಡ್ಡಿಯಾಗದು ಎಂದು ಹೇಳಿತ್ತು. ಈಗ ಪಾಕ್‌ನ ಭದ್ರತಾ ವ್ಯವಸ್ಥೆಯ ಕುರಿತು ಮಾತನಾಡಲು ವಿಶೇಷ ನಿಯೋಗವೊಂದನ್ನು ಕಳುಹಿಸಿಕೊಟ್ಟಿದೆ. ಪಾಕಿಸ್ಥಾನದ ಆಂತರಿಕ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಪಾಕ್ ಸರ್ಕಾರಕ್ಕೆ ತನ್ನ ಮನೆಯನ್ನು ಸರಿಪಡಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ.
ಇದೇನೆೇ ಇದ್ದರೂ ಪಾಕಿಸ್ಥಾನದಲ್ಲಿ ಉಗ್ರ ಸಂಘಟನೆಗಳು, ಪ್ರತ್ಯೇಕತಾವಾದಿ ಸಂಘಟನೆಗಳ ಸಂಖ್ಯೆ ಎಷ್ಟು ಬೆಳೆದುಬಿಟ್ಟಿದೆಯೆಂದರೆ, ಯಾವ ಸಂಘಟನೆಗಳ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಲು ಅದಕ್ಕೆ ಸಾಧ್ಯವಾಗುತ್ತಲೇ ಇಲ್ಲ. ಆಂತರಿಕ ಭದ್ರತೆಯ ಮೇಲೆ ಸರ್ಕಾರಕ್ಕೆ ಹಿಡಿತವೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಬಲೂಚಿಸ್ಥಾನ ಲಿಬರೇಷನ್ ಆರ್ಮಿ, ಪ್ರತ್ಯೇಕ ಬಲೂಚಿಸ್ಥಾನಕ್ಕಾಗಿ ಧ್ವನಿಯೆತ್ತುತ್ತಿರುವ ಸಂಘಟನೆ. ಇಂಥ ಸಂಘಟನೆ ಬೆಳೆಯಲು, ದಶಕಗಳಿಂದ ಪಾಕಿಸ್ಥಾನ ಬಲೂಚಿಸ್ಥಾನವನ್ನು ಹತ್ತಿಕ್ಕಲು ಪದೇ ಪದೆ ನಡೆಸುತ್ತಾ ಬಂದ ದೌರ್ಜನ್ಯವೇ ಕಾರಣ. ಬಲೂಚಿಸ್ಥಾನದ ಪರ ತಾನಿರುವುದಾಗಿ ಭಾರತ ಮೊದಲಿನಿಂದಲೂ ಸಾರುತ್ತಾ ಬಂದಿದೆ. ಹೀಗಾಗಿ ಇಂಥ ಘಟನೆಗಳು ಸಂಭವಿಸಿದಾಗ ಭಾರತದತ್ತ ಕೈತೋರಿಸಿ ತಾನೂ ಕೂಡ ಉಗ್ರವಾದ ಪೀಡಿತ ರಾಷ್ಟ್ರ ಎಂದು ಜಗತ್ತಿನೆದುರು ಸಂತ್ರಸ್ತನ ಪಾತ್ರ ನಿರ್ವಹಿಸುತ್ತದೆ ಪಾಕಿಸ್ಥಾನ. ಚೀನದ ದೂತವಾಸದ ಮೇಲೆ ನಡೆದಿರುವ ಈ ದಾಳಿಯ ಹಿಂದಿನ ಬಹುದೊಡ್ಡ ಕಾರಣ “ಚೀನಾ ಪಾಕ್ ಆರ್ಥಿಕ ಕಾರಿಡಾರ್’ ಎನ್ನಲಾಗುತ್ತಿದೆ. ಇದನ್ನು ಬಲೂಚಿಯರು ಪಾಕ್ ಮತ್ತು ಚೀನದ ವಿಸ್ತಾರಣಾವಾದಿ ಗುಣದ ಹಿನ್ನೆಲೆಯಲ್ಲಿ ನೋಡುತ್ತಾರೆ. ಬಲೂಚಿಸ್ಥಾನದ ನೆಲದಲ್ಲಿ ಚೀನಿಯರು ಕಾಲಿಡುವುದನ್ನು ತಾನು ಸರ್ವಥಾ ಸಹಿಸುವುದಿಲ್ಲ ಎಂದು ಬಿಎಲ್‌ಎ ಬಹಿರಂಗವಾಗಿಯೇ ಹೇಳುತ್ತಾ ಬಂದಿದೆ.
Related Articles
Advertisement
ಈಗ ಪಾಕಿಸ್ಥಾನಕ್ಕೆ ಚೀನ ಬೇಕೇ ಬೇಕು. ಏಕೆಂದರೆ, ಕೆಲ ವರ್ಷಗಳಿಂದ ಅಮೆರಿಕ, ಉಗ್ರವಾದದ ಮೇಲೆ ಲಗಾಮು ಹಾಕದ ಕಾರಣಕ್ಕಾಗಿ ಪಾಕಿಸ್ಥಾನಕ್ಕೆ ಆರ್ಥಿಕ ಮತ್ತು ಭದ್ರತಾ ಸಹಾಯವನ್ನು ನಿಲ್ಲಿಸಿಬಿಟ್ಟಿದೆ. ಹೀಗಾಗಿ ಈಗ ಪಾಕಿಸ್ಥಾನ ಪೂರ್ಣವಾಗಿ ಚೀನದ ತೆಕ್ಕೆಗೆ ಸೇರಿದೆ. ಪ್ರಸಕ್ತ ದಾಳಿಯ ಬಗ್ಗೆ ಚೀನ ಆಘಾತಗೊಂಡಿದೆ ಎನ್ನುವುದು ನಿರ್ವಿವಾದ. ಏಕೆಂದರೆ ನಿರ್ಮಾಣವಾಗುತ್ತಿರುವ ಈ ಕಾರಿಡಾರ್‌ನಲ್ಲಿ ಚೀನದ ಸಾವಿರಾರು ಅಧಿಕಾರಿಗಳು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯನ್ನು ವಿರೋಧಿಸುವವರು ಎಲ್ಲಿ ತಮ್ಮ ಜನರ ಮೇಲೆ ದಾಳಿ ಮಾಡುತ್ತಾರೋ ಎಂಬ ಭಯ ಚೀನದ್ದು. ಈಗ ಪಾಕಿಸ್ಥಾನದ ಮೇಲೂ ಒತ್ತಡ ಸೃಷ್ಟಿಯಾಗಿದೆ. ಈ ಒತ್ತಡದಲ್ಲಿ ಅದು ಬಲೂಚಿಸ್ಥಾನದ ಮೇಲೆ ಮುಗಿಬೀಳುವ ಸಾಧ್ಯತೆಯೂ ಇಲ್ಲದಿಲ್ಲ.
ಚೀನಾ ಮತ್ತು ಪಾಕ್‌ಗೆ ನಿಜಕ್ಕೂ ಇದು ಇಕ್ಕಟ್ಟಿನ ಸಮಯ. ಜೈಷ್-ಎ-ಮೊಹಮ್ಮದ್‌ನಂಥ ಸಂಘಟನೆಗಳನ್ನು ಮತ್ತು ಉಗ್ರರನ್ನು ಬಹಿರಂಗವಾಗಿ ಬೆಂಬಲಿಸುತ್ತಾ ಬಂದ ಈ ರಾಷ್ಟ್ರಗಳು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿ ಆನಂದಿಸುತ್ತಿದ್ದವು. ಈಗ ಇಂಥದ್ದೇ ಸಂಕಷ್ಟ ಅವಕ್ಕೆ ಎದುರಾಗಿದೆ. ಇವೆರಡೂ ರಾಷ್ಟ್ರಗಳು ಆತ್ಮಾವಲೋಕನ ಮಾಡಿಕೊಂಡು, ಬದಲಾಗಬೇಕಾದ ಸಮಯವಿದು.