ಬೀಜಿಂಗ್ : ತನ್ನ ಎಚ್ಚರಿಕೆಯನ್ನು ಧಿಕ್ಕರಿಸಿ 81ರ ಹರೆಯದ ಟಿಬೇಟಿಯನ್ ಧರ್ಮಗುರು ದಲಾಯಿ ಲಾಮಾ ಅವರಿಗೆ ಅರುಣಾಚಲ ಪ್ರದೇಶಕ್ಕೆ 9 ದಿನಗಳ ಭೇಟಿ ನೀಡುವುದಕ್ಕೆ ಭಾರತ ಅವಕಾಶ ಕಲ್ಪಿಸಿಕೊಟ್ಟದ್ದಕ್ಕೆ ಮುಯ್ಯಿ ಎಂಬಂತೆ ಚೀನ ಇದೀಗ ವಿವಾದಿತ ಅರುಣಾಚಲ ಪ್ರದೇಶದ ಮೇಲೆ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅರುಣಾಚಲ ಪ್ರದೇಶದ ಆರು ಪ್ರಮುಖ ಸ್ಥಳಗಳಿಗೆ ಚೀನಿ, ಟಿಬೆಟಾನ್ ಮತ್ತು ರೋಮನ್ ಲಿಪಿಯಲ್ಲಿ ಏಕರೂಪತೆಯನ್ನು ಬಿಂಬಿಸುವ ಹೊಸ ಹೆಸರುಗಳನ್ನು ಪ್ರಕಟಿಸಿದೆ.
ಅರುಣಾಚಲ ಪ್ರದೇಶವು ತನ್ನ ಅವಿಭಾಜ್ಯ ಭೂಭಾಗವಾಗಿರುವ ಟಿಬೆಟ್‌ನ ಭಾಗವಾಗಿದ್ದು ಅದನ್ನು ದಕ್ಷಿಣ ಟಿಬೆಟ್ ರಾಜ್ಯವೆಂದು ಚೀನ ಬಣ್ಣಿಸಿದೆ.
ಈ ಹೊಸ ಬೆಳವಣಿಗೆಯನ್ನು ಚೀನದ ಸರಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಅರುಣಾಚಲ ಪ್ರದೇಶದ ಆರು ಪ್ರಮುಖ ಪ್ರದೇಶಗಳಿಗೆ ಚೀನ ಇಟ್ಟಿರುವ ಹೊಸ ಹೆಸರುಗಳು ಇಂತಿವೆ : ವೋಗೇನ್‌ಲಿಂಗ್, ಮಿಲಾ ರೀ, ಕೊಯಿನಾಬೋì ರೀ, ಮೈನ್‌ಕುಕಾ, ಮೋ ಲಾ ಮತ್ತು ನಾಮ್‌ಕಾಪುಬ್ ರೀ.
ಭಾರತ – ಚೀನ ನಡುವಿನ ಈಶಾನ್ಯ ಭಾಗದ ಗಡಿ ವಿವಾದವು 3,488 ಕಿ.ಮೀ. ಉದ್ದದ ನೈಜ ನಿಯಂತ್ರಣ ರೇಖೆಗೆ ಒಳಪಟ್ಟದ್ದಾಗಿದೆ. ಭಾರತವು ತನ್ನದೆಂದು ಹೇಳುವ ಅರುಣಾಚಲ ಪ್ರದೇಶವನ್ನು ಚೀನ ತನ್ನ ಸಾರ್ವಭೌಮತ್ವದ “ದಕ್ಷಿಣ ಟಿಬೆಟ್’ ರಾಜ್ಯವೆಂದು ಹೇಳಿಕೊಂಡಿದೆ.
1962ರ ಭಾರತ – ಚೀನ ಯುದ್ಧದ ಸಂದರ್ಭದಲ್ಲಿ ಚೀನವು ತನ್ನ ವಶಕ್ಕೆ ತೆಗೆದುಕೊಂಡ ಅಕ್ಸಾಯ್ ಚಿನ್ ಪ್ರದೇಶಕ್ಕೆ ಸಂಬಂಧಪಟ್ಟು ಮಾತ್ರವೇ ಉಭಯ ದೇಶಗಳ ನಡುವೆ ವಿವಾದ ಇರುವುದಾಗಿಯೂ ಅರುಣಾಚಲ ಪ್ರದೇಶ ತನ್ನ ಅವಿಭಾಜ್ಯ ಅಂಗವಾಗಿ ಭಾರತ ಅಂದಿನಿಂದ ಇಂದಿನ ತನಕವೂ ಸಾರುತ್ತಲೇ ಬಂದಿದೆ. ಉಭಯ ದೇಶಗಳ ವಿಶೇಷ ಪ್ರತಿನಿಧಿಗಳು ಈ ತನಕ 19 ಸುತ್ತಿನ ಮಾತುಕತೆ ನಡೆಸಿದ್ದು ಗಡಿ ವಿವಾದ ಈಗಲೂ ಕಗ್ಗಂಟಾಗಿಯೇ ಉಳಿದಿದೆ.