Advertisement

ಚೀನ ಪಾಲಿಗೆ ಮತ್ತೂಮ್ಮೆ ಮುಳುವಾದ ಮಾರುಕಟ್ಟೆ

12:47 PM Jun 14, 2020 | sudhir |

ಬೀಜಿಂಗ್: ಚೀನದಲ್ಲಿ ಮತ್ತೆ ಕೋವಿಡ್ ಮಹಾಮಾರಿಯ ಆತಂಕ ತಲೆದೋರಿದೆ. ಈ ಬಾರಿ ಕೂಡ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ವೈರಸ್‌ ಪತ್ತೆಯಾಗಿದ್ದು, ಇಡೀ ಮಾರುಕಟ್ಟೆಗೆ ಬೀಗ ಹಾಕಲಾಗಿದೆ.

Advertisement

ಕ್ಸಿನ್‌ಫಾಡಿ ಹೋಲ್‌ಸೇಲ್‌ ಮಾರುಕಟ್ಟೆಯ ಮೀನಿನ ಮಳಿಗೆಯೊಂದರಲ್ಲಿ ಸಾಲ್ಮನ್‌ ಎಂಬ ಮೀನು ಕತ್ತರಿಸುವ ಹಲಗೆ (ಚಾಪಿಂಗ್‌ ಬೋರ್ಡ್‌) ಮೇಲೆ ವೈರಾಣುಗಳು ಪತ್ತೆಯಾಗಿವೆ. ಪರಿಣಾಮ, ಮಾರು ಕಟ್ಟೆಗೆ ಬೀಗ ಹಾಕಿ, ಅಂಗಡಿ, ಮಳಿಗೆಗಳ ಮಾಲಕರು, ವ್ಯಾಪಾರಿಗಳನ್ನು ತಪಾಸಣೆಗೆ ಒಳಪಡಿ ಸಿರುವುದು ಮಾತ್ರ ವಲ್ಲದೆ, ಮಾರು ಕಟ್ಟೆಗೆ ಭೇಟಿ ನೀಡಿದ್ದ ಗ್ರಾಹಕರು ವಾಸವಿರುವ 11 ವಸತಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ವ್ಯಾಪಾರಿಗಳು ಹಾಗೂ ಸಿಬಂದಿ ಸೇರಿ ಈವರೆಗೆ 517 ಮಂದಿಯ ಸ್ಯಾಂಪಲ್‌ಗ‌ಳನ್ನು ಸಂಗ್ರಹಿಸಿದ್ದು, ಆ ಪೈಕಿ 45 ಜನರಿಗೆ ಸೋಂಕು ದೃಢಪಟ್ಟಿದೆ. ಇದೇ ವೇಳೆ ಗ್ರಾಹಕರು ಸೇರಿ ಸಾವಿರಾರು ಮಂದಿಯನ್ನು ನ್ಯೂಕ್ಲಿಕ್‌ ಆಮ್ಲ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಲ್ಮನ್‌ ಮೀನುಗಳನ್ನು ವಿದೇಶದಿಂದ ತರಿಸಿಕೊಳ್ಳಲಾಗಿತ್ತು ಎಂದು ವೈರಸ್‌ ಪತ್ತೆಯಾಗಿರುವ ಮಳಿಗೆಯ ಮಾಲೀಕ ತಿಳಿಸಿದ್ದಾನೆ. ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬೀಜಿಂಗ್‌ನಲ್ಲಿನ ಬಹುತೇಕ ಸೂಪರ್‌ ಮಾರ್ಕೆಟ್‌ಗಳಲ್ಲಿ ಮೀನು ಮಾರಾಟ ಸ್ಥಗಿತಗೊಳಿಸಲಾಯಿತು.

ಬೀಜಿಂಗ್‌ಗೆ ಮತ್ತೆ ವೈರಸ್‌ ಭಯ
ಸುಮಾರು 55 ದಿನಗಳಿಂದ ಚೀನ ರಾಜಧಾನಿಯಲ್ಲಿ ಕೋವಿಡ್ ವೈರಸ್‌ ಸೋಂಕಿನ ಒಂದೇ ಒಂದು ಹೊಸ ಪ್ರಕರಣ ಕೂಡ ಪತ್ತೆಯಾಗಿರಲಿಲ್ಲ. ಆದರೆ ಕಳೆದ ವಾರ 52 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಇದರೊಂದಿಗೆ ಗುರುವಾರ ಮತ್ತು ಶುಕ್ರವಾರ ಪತ್ತೆಯಾದ ಪ್ರಕರಣಗಳಿಗೂ ಮಾರುಕಟ್ಟೆಯ ನಂಟಿದೆ ಎಂದು ಹೇಳಲಾಗಿದೆ. ಹೀಗಾಗಿ ಮಾರುಕಟ್ಟೆಯನ್ನು ಮುಚ್ಚಲಾಗಿದ್ದು, ಮಾರ್ಕೆಟ್‌ ಕಟ್ಟಡದ ಹೊರಗೆ “ಈ ಮಾರುಕಟ್ಟೆಯನ್ನು ತುರ್ತಾಗಿ ಮುಚ್ಚಲಾಗಿದೆ’ ಎಂಬ ಫಲಕ ಹಾಕಲಾಗಿದೆ.

ಅತಿ ದೊಡ್ಡ ಮಾರುಕಟ್ಟೆ
ಕ್ಸಿನ್‌ಫಾಡಿ ಹೋಲ್‌ಸೇಲ್‌ ಮಾರ್ಕೆಟ್‌ ಸಣ್ಣ ಪುಟ್ಟ ಮಾರುಕಟ್ಟೆಯಲ್ಲ. ಅದು ಬರೋಬ್ಬರಿ 276 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬೃಹತ್‌ ವ್ಯಾಪಾರ ಕೇಂದ್ರ. ಇಲ್ಲಿ 1,500 ನಿರ್ವಹಣ ಸಿಬಂದಿ ಮತ್ತು 4000ಕ್ಕೂ ಅಧಿಕ ಬಾಡಿಗೆದಾರರಿದ್ದಾರೆ. ತರಕಾರಿ, ಮಾಂಸ ಎಲ್ಲವೂ ಒಂದೇ ಸೂರಿನಡಿ ಸಿಗುವುದರಿಂದ ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಮತ್ತು ವಾರಾಂತ್ಯದಲ್ಲಿ 2 ಲಕ್ಷಕ್ಕೂ ಅಧಿಕ ಗ್ರಾಹಕರು ಭೇಟಿ ನೀಡುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next