ಬೀಜಿಂಗ್: ಅರುಣಾಚಲ ಗಡಿ ಸಮೀಪದಲ್ಲಿಯೇ ಚೀನಾ ಶುಕ್ರವಾರ(ಜೂನ್ 25) ಟಿಬೆಟ್ ನ ಹಿಮಾಲಯ ಪ್ರದೇಶದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ಬುಲೆಟ್ ರೈಲು ಸಂಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದೆ. ಈ ಬುಲೆಟ್ ರೈಲು ಪ್ರಾಂತೀಯ ರಾಜಧಾನಿ ಲಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪ ಇರುವ ಆಯಕಟ್ಟಿನ ಟಿಬೆಟಿಯನ್ ಗಡಿ ಪಟ್ಟಣವಾದ ನೈಂಗ್ಚಿಯನ್ನು ಸಂಪರ್ಕಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ
ಜುಲೈ 1ರಂದು ಚೀನಾದಲ್ಲಿ ಆಡಳಿತಾರೂಢ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಸಿಚುವಾನ್-ಟಿಬೆಟ್ ರೈಲ್ವೆಯ 435.4 ಕಿಲೋ ಮೀಟರ್ ಉದ್ದದ ಲಾಸಾ-ನೈಂಗ್ಚಿ ವಿಭಾಗದ ರೈಲ್ವೆ ಸಂಚಾರಕ್ಕೆ ಚಾಲನೆ ನೀಡಲಾಯಿತು ಎಂದು ಹೇಳಿದೆ.
ಸ್ವಾಯತ್ತ ಟಿಬೆಟ್ ಪ್ರದೇಶದಲ್ಲಿನ ಮೊದಲ ವಿದ್ಯುದ್ದೀಕೃತ ರೈಲು ಶುಕ್ರವಾರ ಬೆಳಗ್ಗೆ ಅಧಿಕೃತವಾಗಿ ಆರಂಭಗೊಂಡಿದ್ದು, ಇದು ಲಾಸಾ ಮತ್ತು ನೈಂಗ್ಚಿಯನ್ನು ಸಂಪರ್ಕಿಸುವ ಬುಲೆಟ್ ರೈಲು ಮಾರ್ಗವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಸಿಚುವಾನ್-ಟಿಬೆಟ್ ರೈಲ್ವೆ ಜಂಟಿಯಾಗಿ ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡೂನಿಂದ ರೈಲು ಯಾನವನ್ನು ಆರಂಭಿಸಿದ್ದು, ಇದು ಯಾನ್ ಮೂಲಕ ಪ್ರಯಾಣಿಸುತ್ತದೆ ಅಲ್ಲದೇ ಕಾಮ್ಡೋ ಮೂಲಕ ಟಿಬೆಟ್ ಪ್ರವೇಶಿಸುತ್ತದೆ. ಅಷ್ಟೇ ಅಲ್ಲ ಚೆಂಗ್ಡೂನಿಂದ ಲಾಸಾದ 48ಗಂಟೆಗಳ ಪ್ರಯಾಣವನ್ನು 13 ಗಂಟೆಯಲ್ಲಿಯೇ ತಲುಪುವಂತೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.