ವಾಷಿಂಗ್ಟನ್:ಲಡಾಖ್ ನ ನೈಜ ನಿಯಂತ್ರಣ ರೇಖೆಯಲ್ಲಿ ಗಡಿ ಕ್ಯಾತೆ ತೆಗೆದು ಸಂಘರ್ಷಕ್ಕಿಳಿದಿದ್ದ ಚೀನಾ ಇದೀಗ ಭಾರತದ ಉತ್ತರ ಗಡಿಯಲ್ಲಿ ಸುಮಾರು 60 ಸಾವಿರ ಸೈನಿಕರನ್ನು ನಿಯೋಜಿಸಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ತಿಳಿಸಿದ್ದಾರೆ.
ಭಾರತದ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸುತ್ತಿರುವ ಚೀನಾ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ, ಇದೊಂದು ಕೆಟ್ಟ ನಡವಳಿಕೆ ಮತ್ತು ಕ್ವಾಡ್ ದೇಶಗಳಿಗೆ ಬೆದರಿಕೆಯನ್ನೊಡ್ಡುವ ತಂತ್ರಗಾರಿಕೆಯಾಗಿದೆ ಎಂದು ಆರೋಪಿಸಿದೆ.
ಚೀನಾದ ಭೂ ಆಕ್ರಮಣ ಹಾಗೂ ಆಕ್ರಮಣಕಾರಿ ಧೋರಣೆ ತಡೆಯುವ ನಿಟ್ಟಿನಲ್ಲಿ ಚೀನಾ ವಿರುದ್ಧ ತಂತ್ರ ಹೆಣೆಯಲು ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಭಾರತ ಸೇರಿದಂತೆ ನಾಲ್ಕು ದೇಶಗಳು ಕ್ವಾಡ್ ಕೂಟವನ್ನು ರಚಿಸಿಕೊಂಡಿತ್ತು.
ಮಂಗಳವಾರ ಟೋಕಿಯೋದಲ್ಲಿ ನಡೆದ ಜಪಾನ್, ಭಾರತ, ಅಮೆರಿಕ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ಸಭೆಯಲ್ಲಿ ಮೈಕ್ ಪಾಂಪಿಯೊ ಪಾಲ್ಗೊಂಡಿದ್ದರು. ಇಂಡೋ-ಫೆಸಿಪಿಕ್, ದಕ್ಷಿಣ ಚೀನಾ ಹಾಗೂ ಪೂರ್ವ ಲಡಾಖ್ ನ ಎಲ್ ಎಸಿಯಲ್ಲಿ ಚೀನಾದ ಆಕ್ರಮಣಕಾರಿ ನೀತಿ ಬಗ್ಗೆ ಚರ್ಚೆ ನಡೆಸಿದ್ದವು.
ಇದನ್ನೂ ಓದಿ:ಜಮ್ಮು ಕಾಶ್ಮೀರ: ಕುಲ್ಗಾಮ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಟೋಕಿಯೋ ಸಭೆಯಲ್ಲಿ ಪಾಲ್ಗೊಂಡು ಅಮೆರಿಕಕ್ಕೆ ತೆರಳಿದ್ದ ಪಾಂಪಿಯೋ ಶುಕ್ರವಾರ ಗೈ ಬೆನ್ಸನ್ ಶೋಗೆ ನೀಡಿದ ಸಂದರ್ಶನದಲ್ಲಿ, ಉತ್ತರ ಗಡಿಯಲ್ಲಿ ಚೀನಾ 60 ಸಾವಿರ ಸೈನಿಕರನ್ನು ನಿಯೋಜಿಸಿರುವುದು ಭಾರತ ಗಮನಿಸಿದೆ ಎಂದು ತಿಳಿಸಿದ್ದರು.